ಸಾರಾಂಶ
ಬಾಂಗ್ಲಾದ ವಿಮೋಚನೆಗಾಗಿ ನಮ್ಮ ಸೈನಿಕರು ಜೀವ ಮುಡಿಪಾಗಿರಿಸಿ ಹೋರಾಡಿ, ಬದುಕನ್ನೇ ತ್ಯಾಗ ಮಾಡಿರುವುದು ಅತ್ಯುನ್ನತವಾದ ತ್ಯಾಗ ಎಂದೇ ಪರಿಗಣಿಸಲಾಗುತ್ತದೆ. ಆ ಮೂಲಕ ಆ ದೇಶದ ಲಕ್ಷಾಂತರ ಮಂದಿಯ ರಕ್ಷಣೆಗೆ ನಮ್ಮ ಸೈನಿಕರು ಕಾರಣರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ಕದ್ರಿಯ ವೀರ ಯೋಧರ ಸ್ಮಾರಕದಲ್ಲಿ ವಿಜಯ್ ದಿವಸ್ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಬೇರೊಂದು ದೇಶವಾದ ಬಾಂಗ್ಲಾದ ವಿಮೋಚನೆಗಾಗಿ ನಮ್ಮ ಸೈನಿಕರು ಜೀವ ಮುಡಿಪಾಗಿರಿಸಿ ಹೋರಾಡಿ, ಬದುಕನ್ನೇ ತ್ಯಾಗ ಮಾಡಿರುವುದು ಅತ್ಯುನ್ನತವಾದ ತ್ಯಾಗ ಎಂದೇ ಪರಿಗಣಿಸಲಾಗುತ್ತದೆ. ಆ ಮೂಲಕ ಆ ದೇಶದ ಲಕ್ಷಾಂತರ ಮಂದಿಯ ರಕ್ಷಣೆಗೆ ನಮ್ಮ ಸೈನಿಕರು ಕಾರಣರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.ಬಾಂಗ್ಲಾ ದೇಶ ವಿಮೋಚನೆಗಾಗಿ 1971ರಲ್ಲಿ ನಡೆದ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಭಾರತ ಜಯಶಾಲಿಯಾಗಿದ್ದಲ್ಲದೆ, ಪಾಕಿಸ್ತಾನದ 93 ಸಾವಿರ ಸೈನಿಕರು ಶರಣಾಗತಿಯಾಗಿರುವುದು ಹಾಗೂ ಭಾರತದ ವೀರ ಯೋಧರ ಬಲಿದಾನದ ನೆನಪಿನಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಶನಿವಾರ ಕದ್ರಿಯ ವೀರ ಯೋಧರ ಸ್ಮಾರಕದಲ್ಲಿ ‘ವಿಜಯ ದಿವಸ್’ ಕಾರ್ಯಕ್ರಮದಲ್ಲಿ ಬಲಿದಾನಗೈದ ಯೋಧರಿಗೆ ನಮನ ಅರ್ಪಿಸಿ ಅವರು ಮಾತನಾಡಿದರು.
ನಮ್ಮ ದೇಶದ ಸೈನಿಕರಂತೆ ನಾವೆಲ್ಲರೂ ತ್ಯಾಗ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ. ಸಣ್ಣ ಪುಟ್ಟ ಸಂಗತಿಗಳಲ್ಲೂ ಇದನ್ನು ಅಳವಡಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾತನಾಡಿ, ಸ್ವಾತಂತ್ರ್ಯಾನಂತರದ ಎಲ್ಲ ಹಂತಗಳಲ್ಲೂ ನಮ್ಮ ಸೈನಿಕರು ದೇಶ ರಕ್ಷಣೆಯ ಅತಿ ದೊಡ್ಡ ಮಾದರಿಯಾಗಿ ಸ್ಫೂರ್ತಿಯಾಗಿದ್ದಾರೆ ಎಂದರು.
ನಿವೃತ್ತ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಮಾತನಾಡಿ, ಭಾರತೀಯ ಸೇನಾ ಪರಾಕ್ರಮದ ಮೂಲಕ ಬಾಂಗ್ಲಾದ ಉದಯವನ್ನು ವಿಸ್ತೃತವಾಗಿ ವಿವರಿಸಿದರು. 1971ರ ಯುದ್ಧದಲ್ಲಿ ಪಾಲ್ಗೊಂಡು ಪಂಜಾಬ್ ಗಡಿಯಲ್ಲಿ ಶೌರ್ಯ ಮೆರೆದ ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈ ಅವರು ವೀರ ಸೈನಿಕರ ವೃತ್ತಾಂತವನ್ನು ವಿವರಿಸಿದರು.ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿ.ಎಲ್., ಜಿಲ್ಲಾ ವರಿಷ್ಠಾಧಿಕಾರಿ ರಿಷ್ಯಂತ್, ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಎನ್.ಕೆ. ಭಗರ್ಸ, ಗೃಹರಕ್ಷಕ ದಳ ಕಮಾಂಡೆಂಟ್ ಡಾ. ಮುರಲೀ ಮೋಹನ ಚೂಂತಾರು ಮತ್ತಿತರರು ಇದ್ದರು. ವಿಕ್ರಂ ದತ್ತ ನಿರೂಪಿಸಿದರು. ಕ್ಯಾ. ದೀಪಕ್ ಅಡ್ಯಂತಾಯ ವಂದಿಸಿದರು.