ಸಾರಾಂಶ
10 ವರ್ಷದಲ್ಲಿ ಬಿಜೆಪಿ ಭ್ರಷ್ಟಾಚಾರ ರಹಿತ ಆಡಳಿತ
ಅರಸೀಕೆರೆ: ದೇಶದ ಸಮಗ್ರತೆ ಹಾಗೂ ಐಕ್ಯತೆಯನ್ನು ಎತ್ತಿ ಹಿಡಿಯುವ ನೈಜ ಹೋರಾಟದಲ್ಲಿ ಎನ್‌ಡಿಎ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಯುವ ಸಬಲೀಕರಣ ಸಚಿವ ಆನೇಕಲ್ ನಾರಾಯಣಸ್ವಾಮಿ ಹೇಳಿದರು.ತಾಲೂಕಿನ ಮಾಲೇಕಲ್ ತಿರುಪತಿ ಗ್ರಾಮದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಸಂಸದ ಪ್ರಜ್ವಲ್ ರೇವಣ್ಣ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಳೆದ ಹತ್ತು ವರ್ಷದ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ಹೆಗ್ಗಳಿಕೆ ಎನ್‌ಡಿಎ ಮೈತ್ರಿಕೂಟಕ್ಕೆ ಸಲ್ಲಲಿದೆ. ಪ್ರಧಾನಿ ನರೇಂದ್ರ ಮೋದಿ ಕೃಷಿಕರು, ಯುವಕರು, ಮಹಿಳೆಯರು ಒಳಗೊಂಡಂತೆ ಎಲ್ಲರ ಅಭ್ಯುದಯಕ್ಕೆ ಯೋಜನೆಗಳನ್ನು ರೂಪಿಸಿದ್ದಾರೆ. ಕೃಷಿ ಸಮ್ಮಾನ್ ಮೂಲಕ ಅನ್ನದಾತರ ಹಿತ ಕಾಯುವ ಕೆಲಸ ಮಾಡಿದ್ದರೆ, ಆಯುಷ್ಮಾನ್ ಆರೋಗ್ಯ ಕಾರ್ಡ್ ಕೊಟ್ಟು ಆರೋಗ್ಯ ರಕ್ಷಣೆಗೂ ಒತ್ತು ನೀಡಿರುವುದು ಸಾಮಾನ್ಯ ಸಂಗತಿಯಲ್ಲ. ರಾಜ್ಯದಲ್ಲಿ ಏ.೨೬ ಮತ್ತು ಮೇ.೭ ರಂದು ನಡೆಯಲಿರುವ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಲಿದ್ದು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಹೇಳಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ‘ನಗರ ಹಾಗೂ ಗ್ರಾಮೀಣ ಜನರಿಗೆ ದುಬಾರಿ ದರದಲ್ಲಿ ಎಣ್ಣೆಭಾಗ್ಯ ನೀಡುತ್ತಿರುವುದೇ ಸಿಎಂ ಸಿದ್ದರಾಮಯ್ಯ ಸಾಧನೆ. ಗಂಡಸರ ಜೇಬಿನಿಂದ ಹತ್ತಾರು ಸಾವಿರ ರು. ಕಿತ್ತು ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮಿ ಹೆಸರಿನಲ್ಲಿ ಎರಡು ಸಾವಿರ ರು. ಕೊಡುತ್ತಿರುವುದೇ ಮಹತ್ಕಾರ್ಯವಾಗಿದೆ. ಇಂತಹ ದುರಾಡಳಿತಕ್ಕೆ ಇತಿಶ್ರೀ ಹಾಡುವ ಸಮಯ ಬಂದಿದ್ದು ಎಲ್ಲರೂ ಮೈತ್ರಿ ಅಭ್ಯರ್ಥಿಯಾಗಿರುವ ನನಗೆ ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್, ಜಿಪಂ ಮಾಜಿ ಸದಸ್ಯ ವತ್ಸಲಾ ಶೇಖರಪ್ಪ, ಜೆಡಿಎಸ್ ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್, ಚಂದ್ರಣ್ಣ, ರಮೇಶ್ ನಾಯ್ಡು, ಹರ್ಷವರ್ಧನ್‌ರಾಜ್, ಶಿವನ್‌ರಾಜ್, ಭಾಸ್ಕರ್ ಹಾಜರಿದ್ದರು.
ಅರಸೀಕೆರೆಯ ಮಾಲೇಕಲ್ ತಿರುಪತಿ ಗ್ರಾಮದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಪರ ಕೇಂದ್ರ ಸಚಿವ ಆನೇಕಲ್ ನಾರಾಯಣಸ್ವಾಮಿ ಮತಯಾಚನೆ ನಡೆಸಿದರು.