ಬಿಹಾರದಲ್ಲಿ ಗೆಲುವು, ಬಿಜೆಪಿ, ಜೆಡಿಎಸ್ ವಿಜಯೋತ್ಸವ

| Published : Nov 15 2025, 02:15 AM IST

ಸಾರಾಂಶ

ಇದು ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯ ಗಂಟೆ ಎನ್ನುವ ಘೋಷಣೆ

ಕೊಪ್ಪಳ: ಬಿಹಾರದಲ್ಲಿ ಎನ್‌ಡಿಎ ಒಕ್ಕೂಟ ಭಾರಿ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ಶುಕ್ರವಾರ ಜೆಡಿಎಸ್ ಕಾರ್ಯಕರ್ತರು ನಗರದ ಅಶೋಕ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ಫಲಿತಾಂಶಗಳು ಹೊರಬಿದ್ದ ನಂತರ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಅಶೋಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿದರು.

ಕಾಂಗ್ರೆಸ್ ಪಕ್ಷವನ್ನು ಬಿಹಾರದ ಮತದಾರರು ಸಂಪೂರ್ಣ ತಿರಸ್ಕರಿಸಿದ್ದಾರೆ. ಇದು ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯ ಗಂಟೆ ಎನ್ನುವ ಘೋಷಣೆ ಕೂಗಲಾಯಿತು.

ಬಿಹಾರದ ಮತದಾರನಂತೆ ಕೊಪ್ಪಳದ ಮತದಾರ ಶಾಸಕ ಹಾಗೂ ಸಂಸದರ ದುರಾಡಳಿತ ಕಿತ್ತೊಗೆಯಲಿದ್ದಾರೆ.ಅವರ ಅಟ್ಟಹಾಸದ ಅಂತ್ಯ ಸಮೀಪಿಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳು ಎನ್‌ಡಿಎ ಒಕ್ಕೂಟದ ತೆಕ್ಕೆಗೆ ಬೀಳಲಿವೆ ಎಂದು ಹೇಳಿದ್ದಾರೆ.

ಬಿಜೆಪಿ ಮುಖಂಡರಾದ ಗಣೇಶ ಹೊರತಟ್ನಾಳ, ಸುನಿಲ ಹೆಸರೂರು, ಅಪ್ಪಣ್ಣ ಪದಕಿ, ಉಮೇಶ ಕುರಡೇಕರ, ಶರಣಯ್ಯಸ್ವಾಮಿ, ಮಹೇಶ ಅಂಗಡಿ, ವಾಣಿಶ್ರೀ ಹಿರೇಮಠ, ಗೀತಾ ಪಾಟೀಲ್, ಕೀರ್ತಿ ಪಾಟೀಲ್, ಜೆಡಿಎಸ್ ಓಬಿಸಿ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ,ಮಹಿಳಾ ನಗರ ಘಟಕದ ಅಧ್ಯಕ್ಷೆ ನಿರ್ಮಲಾ ಎನ್ ಮೇದಾರ, ಕೊಪ್ಪಳ ನಗರ ಅಧ್ಯಕ್ಷ ಸೋಮನಗೌಡ ಹೊಗರನಾಳ, ಸಂಸ್ಕೃತಿ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ್ ಸೊರಟೂರು, ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಹಿಟ್ನಾಳ್, ಜಿಲ್ಲಾ ಎಸ್ಟಿ ಅಧ್ಯಕ್ಷ ರಮೇಶ್ ಡಂಬ್ರಳ್ಳಿ, ಶಿವಕುಮಾರ್ ಏಣಿಗಿ, ಮಹಿಳಾ ನಗರ ಘಟಕದ ಉಪಾಧ್ಯಕ್ಷೆ ರತ್ನಮ್ಮ ಹಿರೇಮಠ, ನಗರ ಘಟಕದ ಒಬಿಸಿ ಅಧ್ಯಕ್ಷ ಮಾರುತಿಗೌಡ್ರು ಹಿರೇಬಗನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ, ರಾಹುಲ್‌ಗೆ ಕಪಾಳಮೋಕ್ಷ : ಸಿವಿಸಿ

ಕೊಪ್ಪಳ: ಬಿಹಾರ ಫಲಿತಾಂಶದಲ್ಲಿ ಎನ್‌ಡಿಎ ಭರ್ಜರಿ ಗೆಲವು ಸಾಧಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕಪಾಳಮೋಕ್ಷವಾಗಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೂರನೇ ನಾಲ್ಕರಷ್ಟು ಬಹುಮತದೊಂದಿಗೆ ಬಿಹಾರದಲ್ಲಿ ಎನ್‌ಡಿಎ ಒಕ್ಕೂಟ ಮತ್ತೆ ಅಧಿಕಾರಕ್ಕೆರಿರುವುದು ಐತಿಹಾಸಿಕ ಕ್ಷಣ ಎಂದಿದ್ದಾರೆ.

ಮೋದಿಯೇ ಇರಲಿ,ರಾಹುಲ್ ತೊಲಗಲಿ ಎಂಬುದು ಬಿಹಾರ ಮತದಾರನ ಸ್ಪಷ್ಟ ಸಂದೇಶ. ಅದೇ ಸಂದೇಶ ದೇಶಾದ್ಯಂತ ಇದೆ.ಕಾಂಗ್ರೆಸ್ ಹೋಗಲಿ, ಎನ್‌ಡಿಎ ಬರಲಿ ಎಂದು ಕರ್ನಾಟಕ ಮತದಾರ ಈಗಾಗಲೇ ಹೇಳತೊಡಗಿದ್ದಾನೆ ಎಂದಿದ್ದಾರೆ.

ವೋಟ್ ಚೋರಿ, ಇವಿಎಂ ದುರ್ಬಳಕೆ ಎಂದು ಹಸಿ ಸುಳ್ಳು ಹೇಳುತ್ತಿದ್ದ ರಾಹುಲ್ ಗಾಂಧಿಗೆ, ಜನರ ಸಂಕಷ್ಟಗಳಿಗೆ ಕೇಂದ್ರ ಸರಕಾರ ತೆರಿಗೆ ಹಣ ನೀಡದಿರುವುದು ಕಾರಣ ಎಂದು ಆರೋಪ ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಹಾರದ ಫಲಿತಾಂಶ ಮತದಾರ ಮಾಡಿದ ಕಪಾಳ ಮೋಕ್ಷದಂತಿದೆ. ಈ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಪ್ರಭಾವ ಬೀರುವುದು ನಿಶ್ಚಿತ. ಈ ಕ್ಷಣಕ್ಕೆ ಚುನಾವಣೆ ನಡೆದರೂ ಕೊಪ್ಪಳದಲ್ಲಿ ಭಾರಿ ಮತಗಳ ಅಂತರದಿಂದ ಎನ್ ಡಿಎ ಗೆಲುವು ಶತಸಿದ್ಧ ಎಂದು ತಿಳಿಸಿದ್ದಾರೆ.

ಭದ್ರತೆ, ಅಭಿವೃದ್ಧಿಗೆ ಬಿಹಾರಿಗರ ಜೈಕಾರ:ಬಣ್ಣನೆ

ಕೊಪ್ಪಳ: ದೇಶದ ಭದ್ರತೆ ಹಾಗೂ ಅಭಿವೃದ್ಧಿಯ ಭಾಗವಾಗಿ ಬಿಹಾರಿಗರು ಎನ್ ಡಿಎ ಮೈತ್ರಿಕೂಟಕ್ಕೆ ಬಹುಮತ ನೀಡಿದ್ದಾರೆ.ಇದೊಂದು ಐತಿಹಾಸಿಕ ಕ್ಷಣವೆಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಸಂತಸ ವ್ಯಕ್ತಪಡಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಹಿನ್ನೆಲೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮೂರನೇ ನಾಲ್ಕರಷ್ಟು ಬಹುಮತದೊಂದಿಗೆ ಬಿಹಾರದಲ್ಲಿ ಎನ್‌ಡಿಎ ಒಕ್ಕೂಟ ಮತ್ತೆ ಅಧಿಕಾರಕ್ಕೆರಿರುವುದು ದೇಶಕ್ಕೆ ಮೋದಿಯೇ ಇರಲಿ, ರಾಹುಲ್ ತೊಲಗಲಿ ಎಂಬುದು ಬಿಹಾರ ಮತದಾರನ ಸ್ಪಷ್ಟ ಸಂದೇಶವಾಗಿದೆ.

ನಮ್ಮ ಕೇಂದ್ರ ಸರ್ಕಾರ, ಅಭಿವೃದ್ಧಿ ವಿಚಾರದಲ್ಲಿಯೂ ಎಂದಿಗೂ ರಾಜಕಾರಣ ಮಾಡುವುದಿಲ್ಲ. ದೇಶದ ಭದ್ರತೆ ವಿಚಾರದಲ್ಲಿಯೂ ಸದಾ ಬದ್ಧವಾಗಿದೆ. ಹೀಗಾಗಿ ಬಿಹಾರಿಗರು ಕಾಂಗ್ರೆಸ್ ಪಕ್ಷ ತಿರಸ್ಕೃತ ಮಾಡಿದ್ದಾರೆ. ಈ ಫಲಿತಾಂಶ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ನಡೆಯುವ ಚುನಾವಣೆಗೆ ದಿಕ್ಸೂಚಿಯಾಗಿದೆ.ಕರ್ನಾಟಕದ ಮತದಾರರು ಇಲ್ಲಿಯ ಕಾಂಗ್ರೆಸ್ ದುರಾಡಳಿತಕ್ಕೆ ಬೇಸತ್ತಿದ್ದಾರೆ.ಖಂಡಿತ ಮುಂದಿನ ದಿನಗಳಲ್ಲಿ ರಾಜ್ಯಕ್ಕೂ ಒಳ್ಳೆಯ ದಿನಗಳು ಬರಲಿವೆ ಎಂದು ವೈದ್ಯ ಕ್ಯಾವಟರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.