ದೆಹಲಿ ಗೆಲುವು: ವಿಜಯಪುರದಲ್ಲೂ ವಿಜಯೋತ್ಸವ

| Published : Feb 09 2025, 01:19 AM IST

ಸಾರಾಂಶ

ವಿಜಯಪುರ: ಆಮ್ ಆದ್ಮಿ ಪಕ್ಷದ ದುರಾಡಳಿತದಿಂದ ಬೇಸತ್ತಿರುವ ದೆಹಲಿ ಜನತೆ, ಪ್ರಧಾನಿ ನರೇಂದ್ರಮೋದಿ ಜನಪರ ಆಡಳಿತ ಮೆಚ್ಚಿ, ಅಧಿಕಾರದ ಗದ್ದುಗೆ ನೀಡಿರುವುದು ಅಭಿವೃದ್ಧಿಯ ಧ್ಯೋತಕವಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್ ಹೇಳಿದರು.

ವಿಜಯಪುರ: ಆಮ್ ಆದ್ಮಿ ಪಕ್ಷದ ದುರಾಡಳಿತದಿಂದ ಬೇಸತ್ತಿರುವ ದೆಹಲಿ ಜನತೆ, ಪ್ರಧಾನಿ ನರೇಂದ್ರಮೋದಿ ಜನಪರ ಆಡಳಿತ ಮೆಚ್ಚಿ, ಅಧಿಕಾರದ ಗದ್ದುಗೆ ನೀಡಿರುವುದು ಅಭಿವೃದ್ಧಿಯ ಧ್ಯೋತಕವಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್ ಹೇಳಿದರು.

ಪಟ್ಟಣದ ಶಿವಗಣೇಶ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಸಂಭ್ರಮಾಚರಣೆ ಮಾಡಿ ಮಾತನಾಡಿದ ಅವರು,

೨೦೫೦ರವರೆಗೂ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರಮೋದಿಗೆ ಸವಾಲು ಹಾಕಿದ್ದ ಎಎಪಿ ಅಧಿನಾಯಕ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜನರು ಸೋಲಿಸಿ, ಬಿಜೆಪಿ ಕೈಗೆ ಅಧಿಕಾರ ಕೊಟ್ಟಿದ್ದಾರೆ. ರಾಷ್ಟ್ರ ರಾಜಧಾನಿಯ ವಿಧಾನಸಭಾ ಚುನಾವಣೆ ಮುಂದಿನ ಎಲ್ಲಾ ಚುನಾವಣೆಗಳಿಗೂ ದಿಕ್ಸೂಚಿಯಾಗಿದೆ ಎಂದು ಹೇಳಿದರು. ರಾಜ್ಯದಲ್ಲಿಯೂ ಮುಂದಿನ ಜಿಪಂ, ತಾಪಂ ಚುನಾವಣೆಗಳ ಮೂಲಕ ಪುನಃ ಬಿಜೆಪಿ ಪರ್ವ ಆರಂಭವಾಗಲಿದ್ದು, ಜನರು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದು, ಬಿಜೆಪಿ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಓಬಿಸಿ ಘಟಕದ ಅಧ್ಯಕ್ಷ ಕನಕರಾಜು ಮಾತನಾಡಿ, ಸರಿಸುಮಾರು 2 ದಶಕಗಳ ಬಳಿಕ ದಿಲ್ಲಿಯಲ್ಲಿ ಕೇಸರಿ ಪಡೆ ದರ್ಬಾರ್ ನಡೆಸಲು ಮತಾಧೀಶರು ಆಶೀರ್ವದಿಸಿದ್ದಾರೆ. ಆದರೆ ಕಾಂಗ್ರೆಸ್‌ನತ್ತ ಮತದಾರ ಒಲವು ತೋರದ ಕಾರಣ ಮೂರನೇ ಬಾರಿಗೆ ಕಾಂಗ್ರೆಸ್ ಶೂನ್ಯ ಹ್ಯಾಟ್ರಿಕ್ ಸಾಧಿಸಿದೆ ಎಂದು ಹೇಳಿದರು.

ಆಮ್ ಅದ್ಮಿ ಪಕ್ಷದ ವರಿಷ್ಠ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ತೀವ್ರ ಮುಖಭಂಗವಾಗಿದೆ. ಸತತ ಎರಡು ಬಾರಿ ದೆಹಲಿ ಗದ್ದುಗೆ ಏರಿದ್ದ ಕೇಜ್ರಿವಾಲ್‌ಗೆ ಈ ಬಾರಿ ಅಬಕಾರಿ ಹಗರಣದಿಂದ ಭಾರಿ ಹಿನ್ನಡೆಯಾಗಿತ್ತು. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೋಲುಂಡಿದ್ದಾರೆ. ಬಿಜೆಪಿ ಪಕ್ಷವನ್ನು ಸಂಪೂರ್ಣ ಗುಡಿಸುವುದಾಗಿ ಸವಾಲು ಎಸೆದಿದ್ದವರಿಗೆ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಸರಕಾರ ಜನಪರ ಕಾರ್ಯಕ್ರಮಗಳನ್ನು ನೀಡಲಿದೆ. ಕಾಂಗ್ರೆಸ್ ಪಕ್ಷ ಲೆಕ್ಕಕ್ಕಿಲ್ಲದಂತಾಗಿದೆ ಎಂದರು.

ಜೆಡಿಎಸ್ ಮುಖಂಡ ಮಹೇಶ್ ಕುಮಾರ್ ಮಾತನಾಡಿ, ದೆಹಲಿ ಜನರು ಅಧಿಕಾರ ಕೊಟ್ಟಾಗ ಅದನ್ನು ಸದ್ಭಳಕೆ ಮಾಡಿಕೊಳ್ಳಲಾಗದೆ, ಭ್ರಷ್ಟಾಚಾರ ಮಾಡಿದ ಎಎಪಿ ಪಕ್ಷವನ್ನು ಜನರು ಅವರದೇ ಚಿಹ್ನೆಯಲ್ಲಿ ಗುಡಿಸಿದ್ದಾರೆ. ಅಧಿಕಾರ ಯಾರಿಗೂ ಎಂದಿಗೂ ಶಾಶ್ವತವಲ್ಲ. ಆದರೆ, ಅಧಿಕಾರ ಇರುವಾಗ ಮತ ನೀಡಿರುವ ಜನರ ಋಣ ತೀರಿಸಬೇಕು. ರಾಜ್ಯದಲ್ಲೂ ಕಾಂಗ್ರೆಸ್ ಸರಕಾರ ಮುಂದಿನ ದಿನಗಳಲ್ಲಿ ಎಎಪಿ ಹಾದಿಯಲ್ಲಿ ಸಾಗಲಿದೆ. ಎನ್‌ಡಿಎ ಮೈತ್ರಿಕೂಟ ಆಡಳಿತವನ್ನು ಇಡೀ ದೇಶದ ಜನರು ಮೆಚ್ಚಿಕೊಂಡಿದ್ದಾರೆ ಎಂದರು.

ಈ ವೇಳೆ ಬಿಜೆಪಿ ತಾಲೂಕು ಕಾರ್ಯದರ್ಶಿ ಎಸ್.ರವಿಕುಮಾರ್, ಟೌನ್ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮುನೀಂದ್ರ, ರಾಮುಭಗವಾನ್, ಗಿರೀಶ್, ರಾಮಕೃಷ್ಣ ಹೆಗಡೆ, ವೆಂಕಟೇಶ್ ಪ್ರಭು, ಶಾಮಣ್ಣ, ವರದರಾಜು, ಸಾಗರ್, ಪುರ ಪ್ರಕಾಶ್, ಮುಂತಾದವರು ಹಾಜರಿದ್ದರು.

(ಫೋಟೋ ಕ್ಯಾಪ್ಷನ್‌)

ವಿಜಯಪುರದ ಶಿವಗಣೇಶ ಸರ್ಕಲ್‌ನಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು.