'ಎನ್‌ಕೌಂಟರ್‌ ಮಾಡುತ್ತಾರೆಂದುದೇವರ ಮೇಲೆ ಭಾರ ಹಾಕಿದೆ - ನೀರು ಕೂಡ ಕೊಡದೆ ಇಡೀ ರಾತ್ರಿ ಸುತ್ತಾಡಿಸಿದರು'

| Published : Dec 21 2024, 01:15 AM IST / Updated: Dec 21 2024, 06:56 AM IST

'ಎನ್‌ಕೌಂಟರ್‌ ಮಾಡುತ್ತಾರೆಂದುದೇವರ ಮೇಲೆ ಭಾರ ಹಾಕಿದೆ - ನೀರು ಕೂಡ ಕೊಡದೆ ಇಡೀ ರಾತ್ರಿ ಸುತ್ತಾಡಿಸಿದರು'
Share this Article
  • FB
  • TW
  • Linkdin
  • Email

ಸಾರಾಂಶ

ಕುಡಿಯಲು ನೀರನ್ನೂ ಕೊಡದೆ ಪೊಲೀಸರು ಇಡೀ ರಾತ್ರಿ ನನ್ನನ್ನು ಸುತ್ತಾಡಿಸಿದರು. ಸವದತ್ತಿ ಬಳಿ ಸ್ಟೋನ್‌ ಕ್ರಷರ್‌ ಬಳಿ ಕರೆದೊಯ್ದರು. ಪೊಲೀಸರ ಉದ್ದೇಶ ನನ್ನನ್ನು ಎನ್‌ಕೌಂಟರ್‌ ಮಾಡುವುದಾಗಿತ್ತು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅಳಲು ತೋಡಿಕೊಂಡಿದ್ದಾರೆ.

  ದಾವಣಗೆರೆ : ಕುಡಿಯಲು ನೀರನ್ನೂ ಕೊಡದೆ ಪೊಲೀಸರು ಇಡೀ ರಾತ್ರಿ ನನ್ನನ್ನು ಸುತ್ತಾಡಿಸಿದರು. ಸವದತ್ತಿ ಬಳಿ ಸ್ಟೋನ್‌ ಕ್ರಷರ್‌ ಬಳಿ ಕರೆದೊಯ್ದರು. ಪೊಲೀಸರ ಉದ್ದೇಶ ನನ್ನನ್ನು ಎನ್‌ಕೌಂಟರ್‌ ಮಾಡುವುದಾಗಿತ್ತು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅಳಲು ತೋಡಿಕೊಂಡಿದ್ದಾರೆ.

ಶುಕ್ರವಾರ ಬೆಳಗಾವಿ ಪೊಲೀಸರಿಂದ ಬಿಡುಗಡೆಯಾದ ಬಳಿಕ ನಗರದ ಹೊರವಲಯದ ಸರ್ಕ್ಯೂಟ್‌ ಹೌಸ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ ಜೊತೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಭಾಪತಿ ಚೇಂಬರ್‌ನಲ್ಲಿ ಡಿಕೆಶಿ ಹಾಗೂ ಹೆಬ್ಬಾಳ್ಕರ್‌ ನನಗೆ ಬೆದರಿಕೆ ಹಾಕಿದರು. ಜೀವನದಲ್ಲಿ ಎಂದೂ ಮರೆಯಬಾರದು ಹಾಗೆ ಮಾಡುತ್ತೀವಿ ಎಂದಿದ್ದರು. ಪೊಲೀಸರು ನಡೆಸಿಕೊಂಡ ರೀತಿಯೂ ಹಾಗೆಯೇ ಇತ್ತು. ರಾತ್ರಿ ವೇಳೆ ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಭಯ ಹುಟ್ಟಿಸಿದರು. ಸವದತ್ತಿ ಬಳಿ ಸ್ಟೋನ್‌ ಕ್ರಷರ್‌ ಬಳಿ ಕರೆದೊಯ್ದು, ಎನ್‌ಕೌಂಟರ್‌ ಮಾಡುವ ಉದ್ದೇಶ ಹೊಂದಿದ್ದರು. ನನ್ನನ್ನು ಕೊಲ್ಲಲು ಕರೆದೊಯ್ಯಲಾಗುತ್ತಿದೆ ಎಂಬ ಆತಂಕ ಎದುರಾಯಿತು. ದೇವರ ಮೇಲೆ ಭಾರ ಹಾಕಿ ಕುಳಿತೆ ಎಂದು ಅಳಲು ತೋಡಿಕೊಂಡರು.

ಇಡೀ ಸರ್ಕಾರ ನನ್ನ ವಿರುದ್ಧ ತಿರುಗಿ ಬಿದ್ದಿತ್ತು. ನನ್ನ ಮೇಲೆ ಮೂರು ಬಾರಿ ಹಲ್ಲೆ ಯತ್ನ ಆಯಿತು. ನನ್ನ ಮಣಿಸಲು ಯತ್ನಿಸಿದರು. ಆದರೆ, ಬಿಜೆಪಿ ನಾಯಕರು ನನ್ನ ಬೆಂಬಲಕ್ಕೆ ನಿಂತರು. ಪಕ್ಷದ ನಾಯಕರ ಜೊತೆಗೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸುವೆ ಎಂದರು.ವಿಜಯೇಂದ್ರ ಮಾತನಾಡಿ, ಬೆಳಗಾವಿಯಿಂದ ಸಿ.ಟಿ.ರವಿಯವರನ್ನು ಬಿಟ್ಟಿದ್ದೇ ದೊಡ್ಡದು ಎಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಗೂಂಡಾಗಿರಿಯ ಹೇಳಿಕೆ ನೀಡಿದ್ದಾರೆ. ಆದರೆ, ಬಿಜೆಪಿ ಕಾರ್ಯಕರ್ತರು ಬಳೆ ತೊಟ್ಟು ಕುಳಿತಿಲ್ಲ ಎಂಬುದನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅರಿಯಲಿ ಎಂದು ಗುಟುರು ಹಾಕಿದರು.

ಹೈಕೋರ್ಟ್ ಮಧ್ಯಂತರ ತೀರ್ಪನ್ನು ಸ್ವಾಗತಿಸುತ್ತೇವೆ. ಕೇವಲ ಸಿ.ಟಿ.ರವಿಗೆ ಜಾಮೀನು ಸಿಕ್ಕಿದೆ ಅಂತಲ್ಲ, ಕಾನೂನಾತ್ಮಕವಾಗಿ ಜಾಮೀನು ಸಿಗಬೇಕಿತ್ತು, ಸಿಕ್ಕಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕಪಾಳ ಮೋಕ್ಷ ಮಾಡಿ, ಚಾಟಿ ಬೀಸಿದೆ. ಒಬ್ಬ ಜನಪ್ರತಿನಿಧಿಯಾದ ಸಿ.ಟಿ.ರವಿಗೆ ನೋಟಿಸ್ ಸಹ ಕೊಡದೆ, ಬಂಧಿಸಿದ್ದು ಸಂಪೂರ್ಣ ಕಾನೂನುಬಾಹಿರ. ಪಕ್ಷದ ಮುಂದಿನ ಹೆಜ್ಜೆ ಬಗ್ಗೆ ಸಭೆ ಮಾಡಿ ನಿರ್ಧರಿಸುತ್ತೇವೆ. ರವಿ ಬಂಧನ ಪ್ರಕರಣವನ್ನು ಮಾನವ ಹಕ್ಕುಗಳ ಆಯೋಗಕ್ಕೆ ಒಯ್ಯುತ್ತೇವೆ ಎಂದು ಹೇಳಿದರು.

ಪೊಲೀಸ್ ಅಧಿಕಾರಿಗಳೇ ಕಾನೂನನ್ನು ಗಾಳಿಗೆ ತೂರಿ, ಜನಪ್ರತಿನಿಧಿಯಾಗಿರುವ ರವಿ ಮೇಲೆ ಹಲ್ಲೆ ಮಾಡಿ, ಅಮಾನವೀಯವಾಗಿ ವರ್ತಿಸಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದರೂ ಚಿಕಿತ್ಸೆ ಕೊಡಿಸಿಲ್ಲ. ಯಾರೋ ಒಬ್ಬರು ಶುಶ್ರೂಷಕಿ ಬಂದು, ಚಿಕಿತ್ಸೆ ನೀಡಿದ್ದಾರೆ. ಪ್ರತಿ ಅರ್ಧ ಗಂಟೆಗೊಮ್ಮೆ ವಾಹನದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಕರೆ ಬರುತ್ತಿತ್ತು. ಕರೆ ಮಾಡಿದವರು ಇಲಾಖೆಯ ಮೇಲಧಿಕಾರಿಗಳೋ, ಸಚಿವರೋ, ಮುಖ್ಯಮಂತ್ರಿಗಳೋ ಗೊತ್ತಿಲ್ಲ. ಇಡೀ ಪ್ರಕರಣ ಕುರಿತು ಸಿಬಿಐನಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಆರ್‌. ಅಶೋಕ್‌ ಮಾತನಾಡಿ, 40 ಜನ ಗೂಂಡಾಗಳು ಸಿ.ಟಿ.ರವಿ ಕೊಲೆ ಮಾಡಲು ಬಂದು, ಚಿಕ್ಕಮಗಳೂರಿಗೆ ರವಿ ಬಾಡಿ ಪಾರ್ಸೆಲ್ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದ ನನ್ನನ್ನೇ ಖಾನಾಪುರ ಠಾಣೆಯಲ್ಲಿ 5 ಗಂಟೆ ಕಾಲ ಹೊರಗೆ ನಿಲ್ಲಿಸಿದ್ದಾರೆ ಎಂದರು.ರಾತ್ರಿ ವೇಳೆ ಕ್ರಷರ್ ಮಾಡುವ ಕಡೆ ಒಬ್ಬಂಟಿಯಾಗಿ ರವಿಯನ್ನು ನಿಲ್ಲಿಸುತ್ತೀರಲ್ಲಾ? ಇದೆಲ್ಲಾ ಬೆದರಿಕೆ ಹಾಕುವುದಕ್ಕಾ? ಹೆದರಿಸಿ, ಮಾನಸಿಕವಾಗಿ ಕುಗ್ಗಿಸುವುದಕ್ಕಾ? ಟೆರರಿಸ್ಟ್‌ಗಳು ಬಂದರೆ ಅಂತವರ ಕೇಸ್ ಹಿಂಪಡೆಯುವ ಕಾಂಗ್ರೆಸ್ ಸರ್ಕಾರ, ಮಾಜಿ ಸಚಿವರಿಗೆ ಯಾಕೆ ಟಾರ್ಗೆಟ್ ಮಾಡುತ್ತಿದೆ. ಪೊಲೀಸರೇ ಅವರಿಗೆ ರಕ್ತ ಬರುವ ತರಹ ಹೊಡೆದಿದ್ದಾರೆ. ರಾಜ್ಯದಲ್ಲಿ ಮಿನಿ ಪಾಕಿಸ್ತಾನಗಳು ನಿರ್ಮಾಣವಾಗುತ್ತಿವೆ ಎಂದು ಕಿಡಿ ಕಾರಿದರು.