ಪಾರಂಪರಿಕ ವೃತ್ತಿಯೊಂದಿಗೆ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ

| Published : Jan 21 2024, 01:32 AM IST

ಪಾರಂಪರಿಕ ವೃತ್ತಿಯೊಂದಿಗೆ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಯೋಗಿ ಸಿದ್ಧರಾಮರು 12ನೇ ಶತಮಾನದ ಪ್ರಮುಖ ವಚನಕಾರರಲ್ಲಿ ಒಬ್ಬರು. ಕಪಿಲಸಿದ್ದ ಮಲ್ಲಿಕಾರ್ಜುನ ಎಂಬ ಅಂಕಿತ ನಾಮದೊಂದಿಗೆ ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವ, ಧನಾತ್ಮಕವಾಗಿ ಪರಿವರ್ತನೆಗೊಳಿಸುವ ಕೆಲಸ ಮಾಡಿದರು. ಕೆರೆ ಕಟ್ಟೆ ನಿರ್ಮಿಸಿದರು.

ಕೊಪ್ಪಳ: ಪಾರಂಪರಿಕ ವೃತ್ತಿಯೊಂದಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಸಮುದಾಯ ಅಭಿವೃದ್ಧಿಗೊಳಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿ ಸಮುದಾಯವೂ ಪಾರಂಪರಿಕ ವೃತ್ತಿ, ಕುಲಕಸುಬು ಹೊಂದಿದೆ. ಆದರೆ ಪ್ರಸ್ತುತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸಮುದಾಯದ ಪ್ರತಿ ವ್ಯಕ್ತಿಯೂ ಶಿಕ್ಷಣವಂತನಾಗಬೇಕು. ಆಧುನಿಕ ತಂತ್ರಜ್ಞಾನದಲ್ಲಿ ಅಸಾಧ್ಯವೆಂಬುದು ಯಾವುದೂ ಇಲ್ಲ. ಇದನ್ನು ಬಳಸಿಕೊಂಡು ಪಾರಂಪರಿಕ ವೃತ್ತಿ, ಕಲೆಗೆ ಹೊಸ ರೂಪ ನೀಡಬಹುದು. ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಮುಂದಿನ ಪೀಳಿಗೆಯೊಂದಿಗೆ ಸಮುದಾಯ ಅಭಿವೃದ್ಧಿಗೊಳಿಸಬಹುದು ಎಂದು ಹೇಳಿದರು.ಶಿವಯೋಗಿ ಸಿದ್ಧರಾಮರು 12ನೇ ಶತಮಾನದ ಪ್ರಮುಖ ವಚನಕಾರರಲ್ಲಿ ಒಬ್ಬರು. ಕಪಿಲಸಿದ್ದ ಮಲ್ಲಿಕಾರ್ಜುನ ಎಂಬ ಅಂಕಿತ ನಾಮದೊಂದಿಗೆ ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವ, ಧನಾತ್ಮಕವಾಗಿ ಪರಿವರ್ತನೆಗೊಳಿಸುವ ಕೆಲಸ ಮಾಡಿದರು. ಕೆರೆ ಕಟ್ಟೆ ನಿರ್ಮಿಸಿದರು. ಜೀವನದ ಒಂದು ಪ್ರಮುಖ ಹಂತದಲ್ಲಿ ಆಧ್ಯಾತ್ಮದ ಕಡೆ ವಾಲಿದ ಅವರು ಸ್ವಾಭಿಮಾನಿಯಾಗಿದ್ದರು. ಅವರಂತೆ ನಾವೂ ಸ್ವಾಭಿಮಾನ ರೂಢಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ್ದ ಗಜೇಂದ್ರಗಡದ ಎಸ್.ಎಸ್. ಭೂಮರೆಡ್ಡಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಅರವಿಂದ ಎಸ್.ವಡ್ಡರ್ ಮಾತನಾಡಿ, ಸಿದ್ಧರಾಮೇಶ್ವರರು ಮುಗ್ಧರಾಗಿದ್ದರೂ ಸ್ವಾಭಿಮಾನಿಯಾಗಿದ್ದರು. ತಮ್ಮ ಕುಲಕಸುಬನ್ನು ನಿರ್ವಹಿಸುವ ಮೂಲಕ ಕೆರೆಕಟ್ಟೆ ನಿರ್ಮಿಸಿದರು. 12ನೇ ಶತಮಾನದ ಪ್ರಮುಖ ವಚನಕಾರರಲ್ಲಿ ಒಬ್ಬರಾದರು. ಮಾಡುವ ಕೆಲಸಗಳಲ್ಲಿ ಕೀಳರಿಮೆ ಬಿಟ್ಟು ಸ್ವಾಭಿಮಾನಿಯಾಗಿರಬೇಕು. ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವವಿದೆ. ನಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕು ಎಂದರು.ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಇಂದು ನಾವು ಕಠಿಣ ಎನಿಸುವ ನಿರ್ಧಾರ ತೆಗೆದುಕೊಂಡು ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸಬೇಕು. ನಮ್ಮ ದೇಶಕ್ಕೆ ಸಂವಿಧಾನ ಕೊಟ್ಟವರು, ಸಮಾಜ ಸುಧಾರಣೆಗಳಲ್ಲಿ ಭಾಗವಹಿಸಿದವರಲ್ಲಿ ಪ್ರಮುಖರೆಲ್ಲರೂ ದಮನಿತ ಸಮುದಾಯದವರೇ ಆಗಿದ್ದರು. ಅವರನ್ನು ಆದರ್ಶವಾಗಿಟ್ಟುಕೊಂಡು ಶಿಕ್ಷಣವಂತರಾಗಿ, ನಮ್ಮ ಸಮುದಾಯದ ಅಬಿವೃದ್ಧಿಗೆ ಶ್ರಮಿಸಬೇಕು. ಸಮಾಜದ ಪ್ರಮುಖ ವ್ಯಕ್ತಿಗಳಾಗಿ ಉತ್ತಮ ಕೊಡುಗೆ ನೀಡಬೇಕು ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಸಿ.ವಿ.ಜಡಿ ನಿರೂಪಿಸಿದರು. ನಗರಸಭೆ ಇಂಜಿನಿಯರ್ ರಮೇಶ ಬಸಾಪಟ್ನ ಸ್ವಾಗತಿಸಿದರು. ಕಿನ್ನಾಳ ಕಲಾವಿದ ಭಾಷಾ ಹಿರೇಮನಿ ಹಾಗೂ ಸಂಗಡಿಗರು ನಾಡಗೀತೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಉಪ ತಹಸೀಲ್ದಾರ್‌ ಗವಿಸಿದ್ದಪ್ಪ ಮನ್ನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್, ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ರಾಜಶೇಖರ ಆಡೂರ, ಸಮುದಾಯದ ಜಿಲ್ಲಾಧ್ಯಕ್ಷ ನಿಂಗಪ್ಪ ಭೋವಿ, ಉಪಾಧ್ಯಕ್ಷ ರಾಮಣ್ಣ ಅಳವಂಡಿ, ಗಾಳೆಪ್ಪ ಗಂಗಾವತಿ, ಸತ್ಯಪ್ಪ ಗೌರಿಪುರ, ಪರಶುರಾಮ ತಾವರಗೇರಿ, ಬಸವರಾಜ ಭೋವಿ, ಹುಡಚಪ್ಪ ಟಣಕನಕಲ್, ಲಕ್ಷ್ಮಣ ಪುಜಾರ, ಹನುಮಂತಪ್ಪ ಹಾಲವರ್ತಿ, ಸುಂಕಪ್ಪ ಭೋವಿ, ಮಾಸ್ತಪ್ಪ ಕಟ್ಟಿಮನಿ, ಬಸವರಾಜ ಅಳವಂಡಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಗವಿಮಠದಿಂದ ಸಾಹಿತ್ಯ ಭವನದವರೆಗೆ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಿತು.ಸಂಸದ ಸಂಗಣ್ಣ ಕರಡಿ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಸೇರಿದಂತೆ ಸಮುದಾಯದ ಪ್ರಮುಖರು ಹಾಜರಿದ್ದರು.