ಶಿಡ್ಲಘಟ್ಟದ ಜಂಗಮಕೋಟೆಯ ರೈತರ ಜಮೀನುಗಳನ್ನು ಕಾಂಗ್ರೆಸ್ ಸರ್ಕಾರ ಕೈಗಾರೀಕರಣದ ಹೆಸರಲ್ಲಿ ಲಪಟಾಯಿಸುತ್ತಿದೆ. ರೈತರ ಫಲವತ್ತಾದ ಜಮೀನನ್ನು ಉಳಿಸಲು ಜೂನ್ 5 ರಂದು ವಿಧಾನಸೌಧ ಚಲೋ
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರಶಿಡ್ಲಘಟ್ಟದ ಜಂಗಮಕೋಟೆಯ ರೈತರ ಜಮೀನುಗಳನ್ನು ಕಾಂಗ್ರೆಸ್ ಸರ್ಕಾರ ಕೈಗಾರೀಕರಣದ ಹೆಸರಲ್ಲಿ ಲಪಟಾಯಿಸುತ್ತಿದೆ. ರೈತರ ಫಲವತ್ತಾದ ಜಮೀನನ್ನು ಉಳಿಸಲು ಜೂನ್ 5 ರಂದು ವಿಧಾನಸೌಧ ಚಲೋ ನಡೆಯುತ್ತಿದ್ದು ಅದರಲ್ಲಿ ತಾವು ಭಾಗವಹಿಸುವುದಾಗಿ ಸಂಸದ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆಯಡಿ ನಿರ್ಮಿಸಲಾದ ಸುಸಜ್ಜಿತ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆ, ಬಾಗೇಪಲ್ಲಿ ತಾಲೂಕು ಮಿಟ್ಟೇಮರಿ ಗ್ರಾಮ ಪಂಚಾಯಿತಿ ಚಿನ್ನಂಪಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, ಯಲ್ಲಂಪಲ್ಲಿ ಗ್ರಾಮ ಪಂಚಾಯಿತಿ ಬಾಗೇಪಲ್ಲಿ- ಚೇಳೂರು ರಸ್ತೆಯ ಲಗುಮದ್ವೇಪಲ್ಲಿ ಕ್ರಾಸ್ ಬಳಿ ಬಸ್ ತಂಗುದಾಣ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಇಲ್ಲಿನ ರೈತರು ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದು, ಹಲವು ತಿಂಗಳಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ರೈತರು ಕೃಷಿ ಮಾಡಲು ಸಾಧ್ಯವಾಗದೆ ರಸ್ತೆಯಲ್ಲಿ ಮಲಗುವ ಸ್ಥಿತಿ ಬಂದಿದೆ. ಇದು ನಮ್ಮ ರೈತರಿಗೆ ಮರಣಶಾಸನವಾಗಿದೆ. ಅಂತಹ ಎಲ್ಲ ಹೋರಾಟಗಾರ ರೈತರಿಗೆ ನಾನು ಹಾಗೂ ಪಕ್ಷದ ಕಾರ್ಯಕರ್ತರಿಗೆ ಬೆಂಬಲ ಸೂಚಿಸುವೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ. ಜೂನ್ 5 ರಂದು ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾಗಿ ವಿಧಾನಸೌಧ ಚಲೋ ಬೈಕ್ ರ್‍ಯಾಲಿ ನಡೆಯಲಿದ್ದು, ಇದರಲ್ಲಿ ನಾನು ಕೂಡ ಭಾಗವಹಿಸುತ್ತೇನೆ. ಹತ್ತು ಸಾವಿರಕ್ಕೂ ಅಧಿಕ ಬೈಕ್ ಗಳಲ್ಲಿ ಯುವ ರೈತರು ಹೊರಡಲಿದ್ದಾರೆ. ಬೇರೆ ಹೋಬಳಿಗಳ ರೈತರು ಹಾಗೂ ಸಾರ್ವಜನಿಕರು ಕೂಡ ಭಾಗವಹಿಸಬೇಕು ಎಂದು ಮನವಿ ಮಾಡಿದರು.ನಂದಿ ಗಿರಿ ಪ್ರದಕ್ಷಿಣೆ:ಈ ಬಾರಿ ಮೇ 31 ರಂದು ಸಂಜೆ 4 ಗಂಟೆಗೆ ನಂದಿಗಿರಿ ಪ್ರದಕ್ಷಿಣೆ ನಡೆಯಲಿದೆ. ಇದಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, ಅನೇಕರು ಮುಂದೆ ಬಂದು ಸಹಕಾರ ನೀಡುತ್ತಿದ್ದಾರೆ. ಕಳೆದ ಬಾರಿ ನಿರ್ಮಲಾನಂದನಾಥ ಸ್ವಾಮೀಜಿ ಭಾಗವಹಿಸಿದ್ದರು. ಈ ಬಾರಿ ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಆನಂದಮುನಿ ಸ್ವಾಮೀಜಿ ಆಗಮಿಸಲಿದ್ದಾರೆ. ಪ್ರತಿ ತಿಂಗಳು ನಡೆಯಲಿರುವ ಕಾರ್ಯಕ್ರಮದಲ್ಲಿ ಸಂತರು ಭಾಗವಹಿಸಲಿದ್ದಾರೆ. ಇದು ಕೇವಲ ದೈಹಿಕ ಚಟುವಟಿಕೆಯಲ್ಲ, ಇದು ಆಧ್ಯಾತ್ಮಿಕವಾಗಿ ವಿಕಸನಗೊಳ್ಳುವ ಕಾರ್ಯಕ್ರಮ. ಆದ್ದರಿಂದ ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಈ ಕಾರ್ಯಕ್ರಮದಿಂದ ಅನೇಕರ ಪ್ರಾರ್ಥನೆ ಈಡೇರಿದೆ. ಎಲ್ಲರೂ ಭಾಗವಹಿಸಿ ಶಿವನ ಕೃಪೆಗೆ ಪಾತ್ರರಾಗಿ ಎಂದು ಸಂಸದರು ಮನವಿ ಮಾಡಿದರು. ಶೌಚಾಲಯ ಉದ್ಘಾಟನೆ: ಎಪಿಎಂಸಿ ಮಾರುಕಟ್ಟೆ ಶೌಚಾಲಯ ಹಾಗೂ ನೀರಿನ ಘಟಕ ಉದ್ಘಾಟಿಸಿದ ಸಂಸದ ಡಾ.ಕೆ. ಸುಧಾಕರ್, ಸಂಸದರ ನಿಧಿಯಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಶೌಚಾಲಯ ಹಾಗೂ ನೀರಿನ ಘಟಕ ಉದ್ಘಾಟಿಸಲಾಗಿದೆ. ಇದು ಹಳೆ ಮಾರುಕಟ್ಟೆಯಾಗಿದ್ದು, ಸಾವಿರಾರು ರೈತರು ಬರುತ್ತಾರೆ. ಇವರೆಲ್ಲರಿಗೂ ಅನುಕೂಲವಾಗುವ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದರು.
ಮಿಟ್ಟೇಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನಂಪಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ನನ್ನನ್ನು ನೀವೆಲ್ಲರೂ ಬೆಂಬಲಿಸಿ ಆಶೀರ್ವದಿಸಿದ್ದೀರಿ. ಅದೇ ರೀತಿ ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಕೋರಿದರು.ಲಗುಮುದ್ದೇಪಲ್ಲಿಯಲ್ಲಿ ಬಸ್ ತಂಗುದಾಣದ ಉದ್ಘಾಟನೆ, ಗುಳೂರು ಎಂಡಿಆರ್ ರಸ್ತೆ ಬಳಿ ಬಸ್ ತಂಗುದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು.
ಸಿಕೆಬಿ-1 ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಶುದ್ಧ ನೀರಿನ ಘಟಕವನ್ನು ಸಂಸದ ಡಾ.ಕೆ. ಸುಧಾಕರ್ ಉದ್ಘಾಟಿಸಿದರು