ಸಾರಾಂಶ
ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆಯಾದ ವಿದ್ಯಾಪೋಷಕ್ ವತಿಯಿಂದ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಕಳೆದ 20 ವರ್ಷಗಳಿಂದ ಆರ್ಥಿಕ ನೆರವು ನೀಡುತ್ತಿದೆ. ಅದರಂತೆ ಈ ವರ್ಷ 1234 ವಿದ್ಯಾರ್ಥಿಗಳಿಗೆ 1,38,68,000 ರು. ವಿದ್ಯಾರ್ಥಿವೇತನವನ್ನು ಅ. 5ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆಯಾದ ವಿದ್ಯಾಪೋಷಕ್ ವತಿಯಿಂದ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಕಳೆದ 20 ವರ್ಷಗಳಿಂದ ಆರ್ಥಿಕ ನೆರವು ನೀಡುತ್ತಿದೆ. ಅದರಂತೆ ಈ ವರ್ಷ 1234 ವಿದ್ಯಾರ್ಥಿಗಳಿಗೆ 1,38,68,000 ರು. ವಿದ್ಯಾರ್ಥಿವೇತನವನ್ನು ಅ. 5ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿತರಿಸಲಾಯಿತು.ಈ ಸಂದರ್ಭ ಆಶೀರ್ವಚನ ನೀಡಿದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪ್ರತ್ಯರ್ಪಣಕ್ಕಿಂತ ದೊಡ್ಡ ಧರ್ಮವಿಲ್ಲ, ಈ ಗುಣದಿಂದಲೇ ಜಗತ್ತಿನ ಚಲನೆ ನಡೆಯುತ್ತದೆ. ಪಡೆದ ಸಹಾಯವನ್ನು ದಾನದ ರೂಪದಲ್ಲಿ ಮುಂದಿನ ಪೀಳಿಗೆಗೆ ತಲುಪಿಸಿದರೆ ಬದುಕು ಸಾರ್ಥಕವಾಗುತ್ತದೆ. ಶ್ರದ್ಧೆ ಮತ್ತು ನಂಬಿಕೆ ನಮ್ಮ ಬದುಕನ್ನು ರೂಪಿಸುತ್ತದೆ ಎಂದರು.
ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ವಿದ್ಯೆ ಅಮೂಲ್ಯವಾದ ಸಂಪತ್ತು. ಶ್ರದ್ಧೆಯಿಂದ ಅದನ್ನು ಆರ್ಜಿಸಿಕೊಳ್ಳಬೇಕು ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು. ಇದೇ ಸಂದರ್ಭ ಸಾಂಕೇತಿಕವಾಗಿ ೨೫ ವಿದ್ಯಾರ್ಥಿಗಳಿಗೆ ಚೆಕ್ ಮತ್ತು ೧೦ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪನ್ನು ವಿತರಿಸಲಾಯಿತು.ಅಭ್ಯಾಗತರಾಗಿ ಶಾಸಕರಾದ ಯಶ್‌ಪಾಲ್ ಎ. ಸುವರ್ಣ ಹಾಗೂ ಉದ್ಯಮಿಗಳಾದ ಆನಂದ ಸಿ. ಕುಂದರ್, ಗಿರೀಶ್ ಭಟ್, ಶ್ರೀಪತಿ ಭಟ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಸುಗ್ಗಿ ಸುಧಾಕರ್ ಶೆಟ್ಟಿ, ಹರೀಶ್ ರಾಯಸ್, ಅರುಣ್‌ಕುಮಾರ್ ಶೆಟ್ಟಿ, ಆನಂದ ಪಿ. ಸುವರ್ಣ, ಅಶೋಕ್ ನಾಯಕ್ ಭಾಗವಹಿಸಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಹಿರಿಯ ಕಾರ್ಯಕರ್ತ ಯು. ಎಸ್ ರಾಜಗೋಪಾಲ ಆಚಾರ್ಯರು ಪ್ರತಿಜ್ಜಾವಿಧಿ ಬೋಧಿಸಿದರು. ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.