ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘವು ದೇಶವನ್ನು ಬೆಸೆಯುವ ಜತೆಗೆ ದೀಪ ಸ್ತಂಭದಂತೆ ಸದಾ ಕಾಲ ಕನ್ನಡಿಗರಿಗೆ ಬೆಳಕು ನೀಡುವ ಕಾರ್ಯ ಮಾಡುತ್ತಿದೆ ಎಂದು ಭಾಷಾ ತಜ್ಞ ಪ್ರೊ. ಗಣೇಶ ದೇವಿ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ 137ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ, ವಿಶ್ವದ ಹತ್ತು ಶಾಸ್ತ್ರೀಯ ಭಾಷೆಗಳಲ್ಲಿ ಕನ್ನಡ ಭಾಷೆ ಅಗ್ರ ಸ್ಥಾನದಲ್ಲಿದೆ. ಪ್ರಪಂಚದಲ್ಲಿ ಹೆಚ್ಚು ಬಳಕೆಯಲ್ಲಿರುವ 25 ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡದ ಕೀರ್ತಿ, ಕಂಪನ್ನು ಎಲ್ಲೆಡೆ ಪಸರಿಸಲು ಪ್ರತಿಯೊಬ್ಬರ ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಹೇಳಿದರು.
‘ಸಿರಿಗನ್ನಡಂ ಗೆಲ್ಗೆ ರಾ. ಹ. ದೇಶಪಾಂಡೆ ಪ್ರಶಸ್ತಿಯನ್ನು ಡಾ. ಲೀಲಾದೇವಿ ಆರ್. ಪ್ರಸಾದ ಅವರಿಗೆ ಪ್ರದಾನ ಮಾಡಲಾಯಿತು. ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಕಾರ್ಯಕ್ರಮ ಉದ್ಘಾಟಿಸಿ, ಡಾ. ಲೀಲಾದೇವಿ ಆರ್. ಪ್ರಸಾದ ಸಚಿವರಾಗಿ, ರಾಜ್ಯಸಭಾ ಸದಸ್ಯರಾಗಿ ಪ್ರಾಮಾಣಿಕತೆಯಿಂದ ಶುದ್ಧ ಹಸ್ತದಿಂದ, ಕಳಂಕ ರಹಿತ ಸೇವೆ ಮಾಡಿದ್ದರಿಂದಲೇ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.ಸಾನ್ನಿಧ್ಯ ವಹಿಸಿದ್ದ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗೆ ನೀಡಿದ ಸ್ವಾತಂತ್ರ್ಯದಿಂದ ಇಂದು ಡಾ. ಲೀಲಾದೇವಿ ಆರ್. ಪ್ರಸಾದ ಈ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಚಿಂತಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಅಭಿನಂದನಾ ನುಡಿಗಳನ್ನಾಡಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಆಲೂರು ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಪ್ರಕಟಿಸಿದ ಕರ್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿಚಿತ್ರ ಮಾಲೆ ಅಡಿಯಲ್ಲಿ ಶ್ರೀನಿವಾಸ ವಾಡಪ್ಪಿ ರಚಿಸಿದ ‘ರಾ.ಹ. ದೇಶಪಾಂಡೆ ಕಿರು ಪುಸ್ತಕ’ ಬಿಡುಗಡೆ ಮಾಡಲಾಯಿತು. ಶಂಕರ ಕುಂಬಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ವಂದಿಸಿದರು.