ದಸರಾ ಆನೆಗಳನ್ನು ವೀಕ್ಷಿಸಲು ಇಚ್ಛಿಸುವ ಸಾರ್ವಜನಿಕರು ಮತ್ತು ಪ್ರವಾಸಿಗರಿಗಾಗಿ ಅರಣ್ಯ ಇಲಾಖೆಯು ಟಿಕೆಟ್ ವ್ಯವಸ್ಥೆ ಮಾಡಲು ಮುಂದಾಗಿತ್ತು. ಆದರೆ, ಅರಣ್ಯ ಸಚಿವರ ಮಧ್ಯಪ್ರವೇಶದಿಂದಾಗಿ ಟಿಕೆಟ್ ವ್ಯವಸ್ಥೆಯು ಆರಂಭದಲ್ಲೇ ಅಂತ್ಯಗೊಂಡಿದೆ.

ಬಿ.ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮವು ಪ್ರತಿ ವರ್ಷ ಗಡಪಡೆಯಿಂದ ಆರಂಭವಾಗುತ್ತದೆ. ದಸರಾ ಆನೆಗಳು ಈಗಾಗಲೇ ಕಾಡಿನಿಂದ ನಾಡಿಗೆ ಬಂದು ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿವೆ.

ದಸರಾ ಆನೆಗಳನ್ನು ವೀಕ್ಷಿಸಲು ಇಚ್ಛಿಸುವ ಸಾರ್ವಜನಿಕರು ಮತ್ತು ಪ್ರವಾಸಿಗರಿಗಾಗಿ ಅರಣ್ಯ ಇಲಾಖೆಯು ಟಿಕೆಟ್ ವ್ಯವಸ್ಥೆ ಮಾಡಲು ಮುಂದಾಗಿತ್ತು. ಆದರೆ, ಅರಣ್ಯ ಸಚಿವರ ಮಧ್ಯಪ್ರವೇಶದಿಂದಾಗಿ ಟಿಕೆಟ್ ವ್ಯವಸ್ಥೆಯು ಆರಂಭದಲ್ಲೇ ಅಂತ್ಯಗೊಂಡಿದೆ.

ಅರಮನೆ ಆನೆ ಬಿಡಾರದಲ್ಲಿ ಮೊದಲ ತಂಡದಲ್ಲಿ ಆಗಮಿಸಿರುವ 9 ಆನೆಗಳು, ಅವುಗಳ ಮಾವುತರು, ಕಾವಾಡಿಗಳು, ಅವರ ಕುಟುಂಬದವರು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಭದ್ರತೆಗಾಗಿ ನಿಯೋಜಿಸಿರುವ ಕೆಲವು ಪೊಲೀಸರು ಮಾತ್ರ ಇದ್ದರು.

ಉಳಿದಂತೆ ಆನೆ ಬಿಡಾರವು ಒಂದು ರೀತಿಯಲ್ಲಿ ಸ್ವಚ್ಛಂದವಾಗಿ ಖಾಲಿ ಖಾಲಿ ಆಗಿತ್ತು. ಆನೆಗಳ ಮುಂದೆ ಮಾವುತರು, ಕಾವಾಡಿಗಳು ಮತ್ತು ಸಹಾಯಕರು ಸೊಪ್ಪು, ಹುಲ್ಲು ನೀಡುತ್ತಾ ವಿಶ್ರಾಂತಿಯಲ್ಲಿದ್ದರು.

ಆನೆಗಳು ವಿಶ್ರಾಂತಿ:

ಧನಂಜಯ ಆನೆಗೆ ಅದರ ಕಾವಾಡಿ ಮತ್ತು ಸಹಾಯಕರು ನೀರಿನ ತೊಟ್ಟಿಯಲ್ಲಿ ಮಜ್ಜನ ಮಾಡಿಸುತ್ತಿದ್ದರು. ಮಾಜಿ ಅಂಬಾರಿ ಆನೆ ಅಭಿಮನ್ಯುನನ್ನು ಕಟ್ಟಲಾಗುತ್ತಿದ್ದ ಜಾಗದಲ್ಲಿ ಈಗ ‘ಏಕಲವ್ಯ’ ಆನೆಯನ್ನು ಏಕಾಂಗಿಯಾಗಿ ಕಟ್ಟಿ ಹಾಕಲಾಗಿತ್ತು. ಉಳಿದಂತೆ ಲಕ್ಷ್ಮೀ, ಮಹೇಂದ್ರ, ಶ್ರೀಕಂಠ ಆನೆ ಒಂದೇ ಸಾಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು. ಮತ್ತೊಂದೆಡೆ ಪ್ರಶಾಂತ, ಗೋಪಿ, ಕಾವೇರಿ ಮತ್ತು ಶ್ರೀರಾಮ ಆನೆಗಳು ವಿಶ್ರಾಂತಿಯಲ್ಲಿದ್ದವು. ಅರಮನೆ ಜೊತೆಗೆ ದಸರಾ ಆನೆಗಳನ್ನು ನೋಡಲು ಬರುತ್ತಿದ್ದ ಜನ, ಪ್ರವಾಸಿಗರು ದೂರದಿಂದಲೇ ಗಜಪಡೆಯನ್ನು ನೋಡುತ್ತಾ ಮುಂದೆ ಸಾಗಿದರು.ಆನೆ ಬಿಡಾರದಲ್ಲಿ ಮೌನ!

ದಸರಾ ಆನೆಗಳಿರುವ ಅರಮನೆ ಆನೆ ಬಿಡಾರದಲ್ಲಿ ಒಂದು ರೀತಿಯಲ್ಲಿ ನೀರವ ಮೌನ ಆವರಿಸಿದೆ. ಕಾಡಿನಿಂದ ನಾಡಿಗೆ ಬಂದಿರುವ 9 ಆನೆಗಳೊಂದಿಗೆ ಮಾವುತರು, ಕಾವಾಡಿಗಳು, ಸಹಾಯಕರು ಬಂದಿದ್ದು, ಕೆಲವರು ಮಾತ್ರ ತಮ್ಮ ಕುಟುಂಬವನ್ನು ಕರೆ ತಂದಿದ್ದಾರೆ. ಹೀಗಾಗಿ, ಮಕ್ಕಳ ಕಲರವ ಕೂಡ ಕಡಿಮೆ ಇತ್ತು.

ಆನೆಗಳ ಹತ್ತಿರ ಯಾರನ್ನು ಬಿಡದಿರುವ ಹಿನ್ನೆಲೆಯಲ್ಲಿ ಮಾವುತರು, ಕಾವಾಡಿಗಳು ಸ್ವಲ್ಪ ಮಟ್ಟಿಗೆ ಆರಾಮಿದ್ದಾರೆ. ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಶಬ್ದವು ಈಗ ಆನೆ ಬಿಡಾರದಲ್ಲಿ ಕೇಳುತ್ತೆ. ಬಿಡಾರದಲ್ಲಿ ಮರಗಳ ಸಂಖ್ಯೆ ಕಡಿಮೆ ಇದ್ದರೂ ಹುಲ್ಲು ಬೆಳೆದಿದೆ. ಅಲ್ಲಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಹೊತ್ತು ನಡಿಗೆ ತಾಲೀಮು ಹೋಗುವ ವೇಳೆ ಮಾತ್ರ ಆನೆ ಬಿಡಾರದಲ್ಲಿ ಸ್ವಲ್ಪ ಮಟ್ಟಿಗೆ ಶಬ್ದ ಕೇಳಿಸುತ್ತಿದೆ, ಉಳಿದ ಸಮಯದಲ್ಲಿ ಮೌನ ಆವರಿಸಿರುತ್ತದೆ.ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದಸರಾ ಆನೆಗಳ ತಾಲೀಮು ವೇಳೆ ಸಾವಿರಾರು ಜನ ವೀಕ್ಷಿಸುತ್ತಾರೆ. ಅರಮನೆ ಆವರಣದಲ್ಲೂ ಆನೆಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ಹೀಗಾಗಿ, ಆನೆ ಬಿಡಾರದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

- ಡಾ.ಐ.ಬಿ. ಪ್ರಭುಗೌಡ, ಡಿಸಿಎಫ್, ಮೈಸೂರು ವನ್ಯಜೀವಿ ವಿಭಾಗದಸರಾ ಗಜಪಡೆಯ ನಡಿಗೆ ತಾಲೀಮು ಆರಂಭ

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯು ಸೋಮವಾರದಿಂದ ಅಧಿಕೃತವಾಗಿ ನಡಿಗೆ ತಾಲೀಮು ಆರಂಭಿಸಿದವು.

ಭಾನುವಾರವಷ್ಟೇ ಎಲ್ಲಾ 9 ಆನೆಗಳ ತೂಕ ಪರೀಕ್ಷಿಸಲಾಗಿತ್ತು. ಮಹೇಂದ್ರ ಆನೆಯ ನೇತೃತ್ವದಲ್ಲಿ ಗಜಪಡೆಯು ಸಾಗಿತ್ತು. ಇದಾದ ಬೆನ್ನಲೆ ಸೋಮವಾರದಿಂದ ಅಧಿಕೃತವಾದ ನಡಿಗೆ ತಾಲೀಮು ಸಹ ಆರಂಭವಾಗಿದ್ದು, ಧನಂಜಯ ಆನೆಯ ನೇತೃತ್ವದಲ್ಲಿ ಉಳಿದ ಆನೆಗಳು ಹೆಜ್ಜೆ ಹಾಕಿದವು.

ಮೊದಲ ತಂಡದಲ್ಲಿ ಆಗಮಿಸಿರುವ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮೀ ಮತ್ತು ಕಾವೇರಿ ಆನೆಗಳು ನಡಿಗೆ ತಾಲೀಮಿನಲ್ಲಿ ಪಾಲ್ಗೊಂಡಿದ್ದವು.

ಮೈಸೂರು ಅರಮನೆ ಆವರಣದ ಬಿಡಾರದಿಂದ ಹೊರಟ 9 ಆನೆಗಳು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಆಯುರ್ವೇದ ವೃತ್ತ ಬಳಸಿಕೊಂಡು ಮತ್ತೆ ಅದೇ ಮಾರ್ಗದಲ್ಲಿ ಅರಮನೆ ಆವರಣದ ಆನೆ ಬಿಡಾರಕ್ಕೆ ಬಂದು ಸೇರಿದವು.

ದಸರಾ ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಜನ ಜಂಗುಳಿ, ವಾಹನಗಳ ಓಡಾಟ ಹಾಗೂ ನಗರದ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಆನೆಗಳಿಗೆ ಈ ನಡಿಗೆ ತಾಲೀಮು ನಡೆಸಲಾಗುತ್ತಿದೆ. ರಸ್ತೆಯಲ್ಲಿ ಆನೆಗಳ ವಾಕಿಂಗ್ ನೋಡಲು ನೆರೆದಿದ್ದ ಜನ, ಆನೆಗಳ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.