ಕನ್ನಡಪ್ರಭ ವಾರ್ತೆ ಅಂಕೋಲಾ

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕೊಡ ಮಾಡುವ ಪ್ರತಿಷ್ಠಿತ ಬಾರ್ಡೋಲಿ ಗೌರವ ಪ್ರಶಸ್ತಿಯನ್ನು ಗಡಿನಾಡಿನ ಪತ್ರಕರ್ತ, ಲೇಖಕ ವಿಘ್ನೇಶ್ವರ ಗುನಗಾ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಹೇಳಿದರು.

ಕಾರ್ಯಕ್ರಮದ ವಿಶೇಷ ಸಭೆಯಲ್ಲಿ ಪಾಲ್ಗೊಂಡ ಬಳಿಕ ಪಟ್ಟಣದ ಗುರುಪ್ರಸಾದದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ನಿಷ್ಠಾವಂತ ಸೇವೆ, ಗಡಿನಾಡಿನ ಜನಜೀವನ ಮತ್ತು ಸಮಸ್ಯೆಗಳನ್ನು ನಿರಂತರವಾಗಿ ಸಮಾಜದ ಗಮನಕ್ಕೆ ತರುವಲ್ಲಿ ವಹಿಸಿರುವ ಜವಾಬ್ದಾರಿಯುತ ಪಾತ್ರ, ಸಾಹಿತ್ಯ, ಲೇಖನ ಹಾಗೂ ಸಾಮಾಜಿಕ ಬರಹಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿರುವ ಅಪೂರ್ವ ಕೊಡುಗೆಯನ್ನು ಪರಿಗಣಿಸಿ, ಈ ಸಾಲಿನ ಪ್ರತಿಷ್ಠಿತ ಬಾರ್ಡೋಲಿ ಗೌರವ ಪ್ರಶಸ್ತಿಗೆ ವಿಘ್ನೇಶ್ವರ ಗುನಗಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ವಿಘ್ನೇಶ್ವರ ಗುನಗಾ ಗಡಿನಾಡಿನ ಜನರ ಬದುಕಿನ ವಾಸ್ತವ ಚಿತ್ರಣ, ಸಾಮಾಜಿಕ ಅಸಮಾನತೆಗಳು, ಅಭಿವೃದ್ಧಿಯ ಸವಾಲುಗಳು ಹಾಗೂ ಸ್ಥಳೀಯ ಸಮಸ್ಯೆಗಳನ್ನು ತಮ್ಮ ಲೇಖನಗಳು ಮತ್ತು ವರದಿಗಳ ಮೂಲಕ ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ವಿಶಿಷ್ಟ ಅಭಿವ್ಯಕ್ತಿ, ಸಾಮಾಜಿಕ ಕಾಳಜಿ ಮತ್ತು ಮೌಲ್ಯಾಧಾರಿತ ಚಿಂತನೆಯ ಮೂಲಕ ಓದುಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿದ್ದಾರೆ. ಅವರು ನೀಡಿರುವ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲು ಸಂಘ ನಿರ್ಧರಿಸಿದೆ.

ಜು.28ರ ಬೆಳಗ್ಗೆ 10.30ಕ್ಕೆ ಅಂಕೋಲಾದ ಕೆಎಲ್ಇ ಕಾಲೇಜಿನ ಸಭಾಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಗಣ್ಯರು, ಪತ್ರಕರ್ತರು, ಸಾಹಿತ್ಯಾಸಕ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.


ಸಭೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ನಾಗರಾಜ ಮಂಜುಗುಣಿ, ವಾಸುದೇವ ಗುನಗಾ, ಕಾರ್ಯದರ್ಶಿ ಸುಭಾಷ ಕಾರೇಬೈಲ್, ಅರುಣ ಶೆಟ್ಟಿ, ಸದಸ್ಯರಾದ ಕೆ. ರಮೇಶ, ನಾಗರಾಜ ಜಾಂಬಳೇಕರ, ಮೋಹನ ದುರ್ಗೇಕರ ಹಾಗೂ ನಿತೇಶ ಕೇಣಿ ಉಪಸ್ಥಿತರಿದ್ದರು.