ಗುಣಮಟ್ಟದ ಶಸ್ತ್ರಚಿಕಿತ್ಸೆಗೆ ವಿಹಾನ್‌ ಆಸ್ಪತ್ರೆ ಪ್ರಖ್ಯಾತಿ

| Published : Nov 06 2025, 02:15 AM IST

ಸಾರಾಂಶ

ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಸಲಹೆ ಅಗತ್ಯ. ಆದರೆ, ರಾಜಕೀಯವು ಆರೋಗ್ಯವನ್ನು ಕೆಡಿಸುತ್ತದೆ. ನಾನು ಮಂತ್ರಿ ಆಗುತ್ತಿದ್ದಂತೆಯೇ ಒತ್ತಡಕ್ಕೆ ಮಧುಮೇಹ ಕಾಯಿಲೆ ಮೆತ್ತಿಕೊಂಡಿತು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿ:

ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ಗುಣಮಟ್ಟದ ಶಸ್ತ್ರಚಿಕಿತ್ಸೆ ನೆರವೇರಿಸುವಲ್ಲಿ ಹುಬ್ಬಳ್ಳಿಯ ವಿಹಾನ್‌ ಆಸ್ಪತ್ರೆ ವಿಶ್ವದರ್ಜೆಯ ಹೆಸರು ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಸಂಸದ ಹಾಗೂ ಹೃದ್ರೋಗ ತಜ್ಞ ಡಾ. ಸಿ.ಎನ್‌. ಮಂಜುನಾಥ ಹೇಳಿದರು.

ಇಲ್ಲಿಯ ಅಕ್ಷಯ ಕಾಲನಿಯ ವಿಹಾನ್ ಹಾರ್ಟ್‌ ಕೇರ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ‘ಮೈಲಿಗಲ್ಲು ಮತ್ತು ಸಾಧನೆಯ ಸಂಭ್ರಮ’ದ ಭಾಗವಾಗಿ ಒಸಿಟಿ ಯಂತ್ರ ಉದ್ಘಾಟನೆ, ಎನ್‌ಎಬಿಎಚ್‌ ಅಕ್ರಿಡೇಷನ್‌, ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣ, ಕ್ಯಾಥಲ್ಯಾಬ್‌, ಶಸ್ತ್ರಚಿಕಿತ್ಸಾ ಘಟಕ ಪ್ರಪಂಚದ ಬೇರೆ ಯಾವ ದೇಶದಲ್ಲಿಯೂ ಇಲ್ಲ. ಹೊಸ ತಂತ್ರಜ್ಞಾನವನ್ನು ಆಸ್ಪತ್ರೆಯಲ್ಲಿ ಅಳವಡಿಸುವ ಮೂಲಕ ಡಾ. ವಿಜಯಕೃಷ್ಣ ಕೋಳೂರ ಅವರು ಹುಬ್ಬಳ್ಳಿ ಸೇರಿ ಸುತ್ತಮುತ್ತಲಿನ ನಗರದ ಜನರ ಹೃದಯ ಕಾಯಿಲೆ ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರ ಸಲಹೆ ಅಗತ್ಯ. ಆದರೆ, ರಾಜಕೀಯವು ಆರೋಗ್ಯವನ್ನು ಕೆಡಿಸುತ್ತದೆ. ನಾನು ಮಂತ್ರಿ ಆಗುತ್ತಿದ್ದಂತೆಯೇ ಒತ್ತಡಕ್ಕೆ ಮಧುಮೇಹ ಕಾಯಿಲೆ ಮೆತ್ತಿಕೊಂಡಿತು ಎನ್ನುವ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

ಆಸ್ಪತ್ರೆ ಚೇರ್‌ಮನ್‌ ಡಾ. ವಿಜಯಕೃಷ್ಣ ಕೋಳೂರ ಅಧ್ಯಕ್ಷತೆ ವಹಿಸಿದ್ದರು. ಡಾ. ಸಂತೋಷ ಪ್ರಾಸ್ತಾವಿಕ ಮಾತನಾಡಿದರು. ಡಾ. ಅರುಣ ಬಬಲೇಶ್ವರ, ಡಾ. ನಾಗೇಶ ವಿ. ರಾವ್‌, ಡಾ. ಮುರಳೀಧರ ರಾವ್‌, ಡಾ. ಸಂಜಯ ದೊಡ್ಡಮನಿ, ಡಾ. ಮಹೇಶ ಹಂಪಣ್ಣವರ ಸೇರಿದಂತೆ ಹಲವರಿದ್ದರು.