ಉಡುಪಿ ಜಿಲ್ಲೆಯ ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ 22ನೇ ವಾರ್ಷಿಕ ಮಹಾಸಭೆಯು ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಬ್ರಹ್ಮಾವರ: ಉಡುಪಿ ಜಿಲ್ಲೆಯ ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ 22ನೇ ವಾರ್ಷಿಕ ಮಹಾಸಭೆಯು ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಸಂಘದ ಸ್ಥಾಪಕಾದ್ಯಕ್ಷ ವಿ. ಸುಬ್ಬಯ್ಯ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ರಾಜೀವ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಬ್ಯಾಂಕಿನ ಸ್ಥಾಪಕಾಧ್ಯಕ್ಷ ಎ.ಬಿ. ಶೆಟ್ಟಿ ಮತ್ತು ಬ್ಯಾಂಕಿನ ಅಭಿವೃದ್ಧಿಯ ರೂವಾರಿ ಮೂಲ್ಕಿ ಸುಂದರರಾಮ ಶೆಟ್ಟರ ಭಾವ ಚಿತ್ರಗಳಿಗೆ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಗಲಿದ ಗಣ್ಯ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸಚ್ಚಿದಾನಂದ ಶೆಟ್ಟಿ ಅವರು ಸ್ವಾಗತಿಸಿ ಕೃಷಿಕರಿಂದಲೇ ಪ್ರಾರಂಭವಾದ ವಿಜಯಾ ಬ್ಯಾಂಕ್‌ನಲ್ಲಿ ಹೆಚ್ಚಿನ ಸಂಖ್ಯೆಯ ಕೃಷಿ ಬದುಕಿನ ಹಿನ್ನಲೆ ಶಿಕ್ಷಣ ಮತ್ತು ಪ್ರಾಮಾಣಿಕತೆಯ ಬಲದಿಂದ ಉದ್ಯೋಗವನ್ನು ಪಡೆದುಕೊಂಡ ಉದ್ಯೋಗಿಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶ್ರೇಷ್ಠ ಗ್ರಾಹಕ ಸೇವೆ ಮತ್ತು ಜನರ ವಿಶ್ವಾಸದ ಮೂಲಕ ವಿಜಯಾ ಬ್ಯಾಂಕ್ ರಾಷ್ಟ್ರಕ್ಕೆ ಆರ್ಥಿಕವಾಗಿ ಅಮೂಲ್ಯ ಕೊಡುಗೆ ನೀಡುವಂತಾಯಿತು. ಬ್ಯಾಂಕಿನ ಯಶೋಗಾಥೆಯಲ್ಲಿ ನಾವೆಲ್ಲರೂ ಅವಿಭಾಜ್ಯ ಅಂಗಗಳು ಎಂಬುದಕ್ಕೆ ಸಂತೋಷಪಡಬೇಕು ಎಂದರು. ಸಮಾರಂಭದಲ್ಲಿ 75 ವರ್ಷ ಪೂರೈಸಿದ 24 ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಎಸ್. ಜಯರಾಮ ಹೆಗ್ಡೆ ಮತ್ತು ವಿ. ಚಂದ್ರಶೇಖರ ಶೆಟ್ಟಿಯವರು ಸಹಕರಿಸಿದರು. ಸನ್ಮಾನಿತರ ಪರವಾಗಿ ರತ್ನಾಕರ ಹೆಗ್ಡೆ ಮತ್ತು ಲೂವಿಸ್ ಲೋಬೋ ಕೃತಜ್ಞತೆ ವ್ಯಕ್ತಪಡಿಸಿದರು. 350 ಕ್ಕೂ ಮಿಕ್ಕಿದ ಸದಸ್ಯರು ಭಾಗವಹಿಸಿದ್ದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕಗಳಿಸಿದ ಕನ್ನಡ ಮಾಧ್ಯಮದ ಮೂವರು ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಯಿತು. ಸಂಘಕ್ಕೆ ಪಿ.ದಿವಾಕರ ಶೆಟ್ಟಿ ಮತ್ತು ಬಿ. ದಿವಾಕರ ಶೆಟ್ಟಿ ಹೊಸದಾಗಿ ಸೇರ್ಪಡೆಗೊಂಡರು.

ಹಿರಿಯ ಸದಸ್ಯರಾದ ಅಮರನಾಥ ಶೆಟ್ಟಿ ಶುಭಾಸಂಸನೆ ಗೈದರು, ರಾಜಶ್ರೀ ಸುಧಾರಾಮ್ ಪ್ರಾರ್ಥಿಸಿದರು. ಸಹಾಯಕ ಕಾರ್ಯದರ್ಶಿ ರಮಾನಾಥ್ ಕೊಟ್ಟಾರಿ ವಾರ್ಷಿಕ ವರದಿ ಮಂಡಿಸಿದರು. ಖಂಜಾಚಿ ನರೇಶ್ ಶೆಟ್ಟಿ ಲೆಕ್ಕ ಪತ್ರವನ್ನು ಮಂಡಿಸಿದರು. ವೇಣುಗೋಪಾಲ್ ವಂದಿಸಿದರು. ಬಿ. ರತ್ನಾಕರ ಹೆಗ್ಡೆಯವರು ಕಾರ್ಯಕ್ರಮ ನಿರೂಪಿಸಿದರು.