ಭಾರತ ವಿವಿಧ ಭಾಷೆ, ಪರಂಪರೆ ಒಳಗೊಂಡಿದೆ

| Published : Oct 26 2025, 02:00 AM IST

ಸಾರಾಂಶ

ನವರಾತ್ರಿಯಂದು ಮೈಸೂರಿನಲ್ಲಿ ಚಾಮುಂಡೇಶ್ವರಿ ಮೂರ್ತಿಯನ್ನು ಉತ್ಸವ ಮಾಡುವ ಮೂಲಕ ಆಚರಿಸಿದರೆ, ಉತ್ತರ ಭಾರತದಲ್ಲಿ ದುರ್ಗಾ ಪೂಜೆ ಮಾಡುವ ಮೂಲಕ ಆಚರಿಸುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ದೇಶ ಸಾಂಸ್ಕೃತಿಕವಾಗಿ ಹೆಚ್ಚು ಸಂಪದ್ಭರಿತವಾಗಿದ್ದು, ವಿವಿಧ ಭಾಷೆ, ಸಂಪ್ರದಾಯ, ಪರಂಪರೆಯನ್ನು ಒಳಗೊಂಡಿದೆ ಎಂದು ಕವಯತ್ರಿ ಡಾ. ಲತಾ ರಾಜಶೇಖರ್‌ ಹೇಳಿದರು.

ನಗರದ ಸರಸ್ವತಿಪುರಂನ ವಿಜಯ ವಿಠಲ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸ್ನೇಹ ಸಿಂಚನ ಟ್ರಸ್ಟ್‌ನ ಸಹಯೋಗದಲ್ಲಿ ನಡೆದ ದಸರಾ ನವರಾತ್ರೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಸಂಸ್ಕೃತಿ ಸಿಂಚನ ಪ್ರಶಸ್ತಿ ಪುರಸ್ಕಾರ, ಭಕ್ತಿ-ಭಾವಗೀತ ಗಾಯನ, ನವರಾತ್ರಿ ಗೊಂಬೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆವರು ಮಾತನಾಡಿದರು.

ನವರಾತ್ರಿಯಂದು ಮೈಸೂರಿನಲ್ಲಿ ಚಾಮುಂಡೇಶ್ವರಿ ಮೂರ್ತಿಯನ್ನು ಉತ್ಸವ ಮಾಡುವ ಮೂಲಕ ಆಚರಿಸಿದರೆ, ಉತ್ತರ ಭಾರತದಲ್ಲಿ ದುರ್ಗಾ ಪೂಜೆ ಮಾಡುವ ಮೂಲಕ ಆಚರಿಸುತ್ತಾರೆ. ದಸರಾ ಪರಂಪರೆ ಶತಮಾನಗಳ ಇತಿಹಾಸ ಹೊಂದಿದೆ. ನಮ್ಮ ದೇಶದಲ್ಲಿನ ಸಂಸ್ಕೃತಿ, ಸಂಪ್ರದಾಯ ಬೇರೆ ಯಾವ ದೇಶದಲ್ಲೂ ಇಲ್ಲ ಎಂದರು.

ನವರಾತ್ರಿಯಲ್ಲಿ ಗೊಂಬೆ ಕೂರಿಸಿವುದು ರಾಜಪ್ರಭುತ್ವದಲ್ಲಿ ಆರಂಭವಾದ ಪರಂಪರೆ, ಸಂಪ್ರದಾಯವಾಗಿದೆ. ಇಂದಿಗೂ ಇದನ್ನು ಅನುಸರಿಸುತ್ತಾ ಬಂದಿರುವುದು ಪ್ರಶಂಶನೀಯ ಎಂದರು.

ಅನುಸೂಯ ವೇಣುಗೋಪಾಲ್, ಹೇಮಲತಾ ಕುಮಾರಸ್ವಾಮಿ, ಸುಧಾ ನಾರಾಯಣ್, ಶ್ರೀದೇವಿ ಶ್ರಿವತ್ಸ, ಗೀತ ರಘುರಾಂ ಅವರಿಗೆ ಸಂಸ್ಕೃತಿ ಸಿಂಚನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ವೇಳೆ ಗೊಂಬೆ ಕೂರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ. ಸತ್ಸಂಗ ಪ್ರಚಾರಕಿ ಸುಮತಿ ಸುಬ್ರಹ್ಮಣ್ಯ, ಪ್ರಾಂಶುಪಾಲ ಎಚ್‌. ಸತ್ಯಪ್ರಸಾದ್, ಮೆರಿಡಿಯನ್ ಗ್ವಾಸ್ ಫೌಂಡೇಶನ್‌ . ಗುರುರಾಜ್, ಸಮಾಜ ಸೇವಕಿ ರಾಧಿಕಾ ರವಿ, ಸ್ನೇಹ ಸಿಂಚನ ಟ್ರಸ್ಟ್‌ ಅಧ್ಯಕ್ಷೆ ಮ.ನ. ಲತಾ ಮೋಹನ್ ಮೊದಲಾದವರು ಇದ್ದರು.