ಸಾರಾಂಶ
- ತಹಸೀಲ್ದಾರ್ ಪೂಜೆ, ಅಂಬು ನೆರವೇರಿಸಿದ ನಾಡಿಗರ ಮನೆತನದ ಮಧುಕೇಶ್
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಹೊರವಲಯದಲ್ಲಿರುವ ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿ ದೇವಾಲಯ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಬನ್ನಿ ಮಂಟಪದ ಬಳಿ ದಸರಾ ಹಬ್ಬದ ಹಿನ್ನೆಲೆ ವಿಜಯದಶಮಿಯ ಅಂಬಿನೋತ್ಸವವು ಗುರುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.ದಸರಾ ಮತ್ತು ವಿಜಯದಶಮಿ ಹಬ್ಬದ ನಿಮಿತ್ತವಾಗಿ ಕಳೆದ 9 ದಿನಗಳಿಂದ ಪಟ್ಟಣದ ದೇವರಾದ ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಗುಳ್ಳಮ್ಮ ದೇವಿ, ಶ್ರೀ ಕುಕ್ಕುವಾಡೇಶ್ವರಿ, ಶ್ರೀ ಬನಶಂಕರಿ ದೇವಿ, ಶ್ರೀ ಅಂತರಘಟ್ಟಮ್ಮ ದೇವಿ, ಶ್ರೀ ದುರ್ಗಾಂಬಿಕಾ ದೇವಿ, ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ, ಶ್ರೀ ಭೇಟೆ ರಂಗನಾಥ ಸ್ವಾಮಿ, ಶ್ರೀಪಿಳ್ಳಮ್ಮ ದೇವಿ, ಶ್ರೀ ಚೌಡೇಶ್ವರಿ ದೇವಿ ಹೀಗೆ ಪಟ್ಟಣದ ಎಲ್ಲ ದೇವಾಲಯಗಳಲ್ಲಿ ಪ್ರತಿದಿನ ವಿಶೇಷ ಅಲಂಕಾರದೊಂದಿಗೆ, ದೇವಿಯನ್ನು ಸಿಂಗರಿಸಿ ಪೂಜೆ ನಡೆಸಲಾಗಿತ್ತು.
ಅಂತಿಮ ದಿನವಾದ ವಿಜಯದಶಮಿ ಹಬ್ಬದ ದಿನ ಸಂಜೆ ಅಂಬಿನೋತ್ಸವ ನಡೆಯುವ ಬನ್ನಿ ಮಂಟಪಕ್ಕೆ ಪಟ್ಟಣದ ದೇವರನ್ನು ಕರೆ ತಂದು ಅಲ್ಲಿ ಬನ್ನಿಮಂಟಪಕ್ಕೆ ಪೂಜೆ ಸಲ್ಲಿಸಲಾಯಿತು.ಸಂಪ್ರದಾಯದಂತೆ ಶ್ವೇತವಸ್ತ್ರ ಧರಿಸಿದ ತಹಸೀಲ್ದಾರ್ ಎನ್.ಜೆ.ನಾಗರಾಜ್ ಬನ್ನಿ ಮಂಟಪದ ಬಳಿ ಇರುವ ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿಗೆ ವಿಶೇಷವಾದ ಪೂಜೆ ಸಲ್ಲಿಸಿದ, ಬನ್ನಿ ಮಂಟಪದ ಬಳಿ ಅಂಬಿನ ಕಂಬಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಬಿಲ್ಲಿನಿಂದ ಅಂಬಿನ ಕಂಬಕ್ಕೆ ಚುಚ್ಚುವ ಆಚರಣೆ ನೆರವೇರಿಸಿದರು. ಆಗ ನಾಡಿಗರ ಮನೆತನದ ಮಧುಕೇಶ್ ಕತ್ತಿಯಿಂದ ಅಂಬಿನ ಕಂಬವನ್ನು ಛೇದಿಸಿ ಅಂಬಿನೋತ್ಸವವನ್ನು ನಡೆಸಿದರು.
ಅನಂತರ ಅಂಬಿನೋತ್ಸವಕ್ಕೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ಭಕ್ತರು ಬನ್ನಿಪತ್ರೆಯನ್ನು ಪರಸ್ಪರರಿಗೆ ವಿನಿಮಯ ಮಾಡಿಕೊಳ್ಳುತ್ತ ಶುಭಾಷಯ ಕೋರಿದರು.- - -
-2ಕೆಸಿಎನ್‌ಜಿ4:ಚನ್ನಗಿರಿ ಹೊರವಲಯದ ಮೌದ್ಗಲ್ ಆಂಜನೇಯ ಸ್ವಾಮಿ ದೇವಾಲಯ ಹಿಂಭಾಗದ ಬನ್ನಿ ಮಂಟಪದಲ್ಲಿ ತಹಸೀಲ್ದಾರ್ ಎನ್.ಜೆ.ನಾಗರಾಜ್ ಅಂಬಿನೋತ್ಸವ ನೆರವೇರಿಸಿದರು.