ಸಾರಾಂಶ
ಶ್ರೀ ಮೈಲಾರಲಿಂಗೇಶ್ವರ, ಚನ್ನಕೇಶವ, ವಿರುಪಾಕ್ಷ, ಆಂಜನೇಯ ಸ್ವಾಮಿ ಹಾಗೂ ಸಿದ್ಧೇಶ್ವರ ದೇವರನ್ನು ಹಾಸನಾಂಬೆ ವೃತ್ತದಿಂದ ಮೆರವಣಿಗೆ ಮೂಲಕ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಂತರ ನಗರದ ಸಾಲಗಾಮೆ ರಸ್ತೆ ಬಳಿ ಇತಿಹಾಸವುಳ್ಳ ಬನ್ನಿ ಮಂಟಪಕ್ಕೆ ಕರೆತರಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ
ವಿಜಯದಶಮಿ ಹಬ್ಬದ ಅಂಗವಾಗಿ ಕೊನೆಯ ದಿನವಾದ ಶನಿವಾರ ಸಂಜೆ ಶಾಸಕ ಎಚ್.ಪಿ. ಸ್ವರೂಪ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡರ ಸಮ್ಮುಖದಲ್ಲಿ ರಾಜವಂಶಸ್ಥ ನರಸಿಂಹರಾಜೇ ಅರಸ್ ರವರು ಬಾಳೆಕಂದು ಕಡಿಯುವ ಮೂಲಕ ೯ ದಿನಗಳ ನವರಾತ್ರಿಗೆ ವಿರಾಮ ಹೇಳಿದರು.ಶ್ರೀ ಮೈಲಾರಲಿಂಗೇಶ್ವರ, ಚನ್ನಕೇಶವ, ವಿರುಪಾಕ್ಷ, ಆಂಜನೇಯ ಸ್ವಾಮಿ ಹಾಗೂ ಸಿದ್ಧೇಶ್ವರ ದೇವರನ್ನು ಹಾಸನಾಂಬೆ ವೃತ್ತದಿಂದ ಮೆರವಣಿಗೆ ಮೂಲಕ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಂತರ ನಗರದ ಸಾಲಗಾಮೆ ರಸ್ತೆ ಬಳಿ ಇತಿಹಾಸವುಳ್ಳ ಬನ್ನಿ ಮಂಟಪಕ್ಕೆ ಕರೆತರಲಾಯಿತು.
ಐದು ದೇವರನ್ನು ಮೆರವಣಿಗೆ ಮೂಲಕ ಬನ್ನಿ ಮಂಟಪಕ್ಕೆ ತಂದು ಪೂಜೆ ಸಲ್ಲಿಸಿ, ಬಾಳೆಕಂದು ಕಡಿಯವ ಮೂಲಕ ೯ ದಿವಸಗಳ ನವರಾತ್ರಿಗೆ ವಿರಾಮ ಹೇಳಿದರು. ಮೆರವಣಿಗೆ ವೇಳೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಪೊಲೀಸರು ಸುಗಮ ಸಂಚಾರ ಮಾಡಿಕೊಟ್ಟು ನಿಯಂತ್ರಿಸಿದರು. ದೇವರ ಉತ್ಸವದ ಅಡ್ಡಪಲ್ಲಕ್ಕಿ ಆಗಮನದ ಹಿನ್ನೆಲೆ ನಿವಾಸಿಗಳು ರಸ್ತೆಗೆ ನೀರು ಹಾಕಿ, ರಂಗೋಲಿಯಿಂದ ಶೃಂಗರಿಸಿದ್ದರು. ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಜನರಿಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯ ಕೋರಿದರು.ನರಸಿಂಹರಾಜೇ ಅರಸ್ ಮಾತನಾಡಿ, ಕಳೆದ ೩೪ ವರ್ಷಗಳಿಂದಲೂ ಬನ್ನಿ ಕಡೆಯುವ ಸಂಪ್ರದಾಯ ಬೆಳೆಸಿಕೊಂಡು ಬಂದಿದೆ ಎಂದು ತಿಳಿಸಿ, ಎಲ್ಲರಿಗೂ ವಿಜಯದಶಮಿಯ ಶುಭಾಶಯ ಕೋರಿದರು.
ಬನ್ನಿ ಕಡಿಯುವ ಅರಸ್ ಕಳೆದ ಮೂರು ದಿವಸಗಳಿಂದ ಉಪವಾಸ ಇದ್ದು, ಖಡ್ಗಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುತ್ತಾರೆ. ನವರಾತ್ರಿಯ ೯ ದಿನಗಳು ಮುಗಿದ ಮೇಲೆ ಆಯುಧ ಪೂಜೆ ನಡೆದು ಮಾರನೆ ದಿವಸ ಬನ್ನಿ ಕಡಿಯುವ ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಪೂಜೆ ಕೊನೆಯಲ್ಲಿ ಬನ್ನಿ ಕಡಿದ ಮೇಲೆ ಬಾಳೆ ಎಲೆ ಮತ್ತು ಬನಿ ಎಲೆಯನ್ನು ಪಡೆಯಲು ಜನ ಮುಗಿ ಬಿದ್ದಿದ್ದರು.