ಸಾರಾಂಶ
ಹೊಸಪೇಟೆ: ವಿಜಯನಗರ ಜಿಲ್ಲೆಯಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ನಗರದ ಗಾಂಧಿ ವೃತ್ತದಲ್ಲಿ ವ್ಯಾಪಾರ, ವಹಿವಾಟು ಜೋರಾಗಿ ನಡೆದಿದೆ.ಪುನೀತ್ ರಾಜಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಪಟಾಕಿ ವ್ಯಾಪಾರವೂ ಜೋರಾಗಿ ನಡೆದಿದೆ. ಮಳೆಯನ್ನು ಲೆಕ್ಕಿಸದೇ ಜನರು ಮುಗಿಬಿದ್ದು ಪಟಾಕಿಗಳನ್ನು ಖರೀದಿಸಿ; ಹಬ್ಬಕ್ಕೆ ಕಳೆ ತಂದರು.
ಜಿಲ್ಲಾದ್ಯಂತ ದೀಪಾವಳಿ ಸಂಭ್ರಮ ಜೋರಾಗಿದ್ದು, ಹೂ, ಹಣ್ಣು, ಪಟಾಕಿ ವ್ಯಾಪಾರ ಜೋರಾಗಿ ನಡೆದಿದೆ. ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕಾಗಿ ಜನರು ಉತ್ಸಾಹದಿಂದ ಅಗತ್ಯ ವಸ್ತುಗಳ ಖರೀದಿಸಿದರು. ಹಬ್ಬದ ಆಚರಣೆಗೆ ನಗರ ಸೇರಿದಂತೆ ಜಿಲ್ಲಾದ್ಯಂತ ಬಿರುಸಿನ ಸಿದ್ಧತೆ ನಡೆದಿವೆ. ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ ಸೇರಿ ಇತರೆ ವಸ್ತುಗಳ ಖರೀದಿ ಭರಾಟೆ ಜೋರಾಗಿ ನಡೆದಿದೆ. ಹಿಂದೂ ಧರ್ಮದವರು ವಿಜೃಂಭಣೆಯಿಂದ ಆಚರಿಸುವ ಈ ಹಬ್ಬದ ನಿಮಿತ್ತ ಆಕಾಶಬುಟ್ಟಿ, ಬಾಳೆ-ಕಬ್ಬು, ಚೆಂಡು ಹೂ, ಸೇವಂತಿಗೆ, ಕಾಕಡ ಸೇರಿ ವಿವಿಧ ಬಗೆಯ ಹೂವುಗಳನ್ನು ಜನರು ಖರೀದಿಸಿದರು.ಇನ್ನು ನಗರದಲ್ಲಿ ಹಣತೆಗಳನ್ನು ಜನರು ಕೂಡ ಕುಂಬಾರರ ಬಳಿ ಖರೀದಿಸಿ; ಸಾಂಪ್ರದಾಯಿಕ ಶೈಲಿಯಲ್ಲಿ ಹಬ್ಬ ಆಚರಿಸಲು ಸಜ್ಜಾದರು. ನಗರದ ಗಾಂಧಿಚೌಕ್, ಮೇನ್‌ಬಜಾರ್, ಕಾಲೇಜು ರಸ್ತೆ, ಮದಕರಿ ನಾಯಕ ವೃತ್ತ ಸೇರಿ ವಿವಿಧ ಕಡೆ ಹೂವಿನ ವ್ಯಾಪಾರ, ಹಣ್ಣು, ತರಕಾರಿ ಹಾಗೂ ಬಾಳೆ ಎಲೆ, ಕಂದುಗಳ ವ್ಯಾಪಾರ ಜೋರಾಗಿತ್ತು. ನಗರದ ಮುನ್ಸಿಪಲ್ ಮೈದಾನದಲ್ಲಿ ಪಟಾಕಿ ಅಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತು ವಿವಿಧ ರೀತಿಯ ಪಟಾಕಿಗಳನ್ನು ಖರೀದಿಸಿದರು. ಈ ಬಾರಿ ಹಸಿರು ಪಟಾಕಿ ಮಾರಾಟ ನಡೆದಿದ್ದು, ಜನರು ಕೂಡ ಮಕ್ಕಳನ್ನು ಕರೆದುಕೊಂಡು ಬಂದು, ಅವರ ಇಷ್ಟದ ಪಟಾಕಿಗಳನ್ನು ಕೊಡಿಸಿದರು.
ಹಬ್ಬದ ನಿಮಿತ್ತ ಮನೆ, ಅಂಗಡಿಗಳ ಮುಂದೆ ತಳಿರು ತೋರಣ, ರಂಗೋಲಿ, ಬಾಳೆ ಕಂದು ಹಾಗೂ ಹೂವುಗಳಿಂದ ಅಲಂಕರಿಸಿದ್ದರು. ಅಲ್ಲದೇ ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದರು.ನಗರದ ಪುನೀತ್ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಪಟಾಕಿ ಮಳಿಗೆಗಳಲ್ಲಿ ಸುರಸುರ ಬತ್ತಿ, ಹೂವಿನ ಬತ್ತಿ, ಭೂ ಚಕ್ರ, ಚಕ್ಕರ್, ಹಸಿರು ಪಟಾಕಿ, ಆಕಾಶ ಬಾಣ ಸೇರಿದಂತೆ ಬಗೆ ಬಗೆಯ ಪಟಾಕಿಗಳನ್ನು ಜನರು ಖರೀದಿಸಿದರು. ಈ ಬಾರಿ ವ್ಯಾಪಾರವೂ ಪರವಾಗಿಲ್ಲ, ಕಳೆದ ಬಾರಿಗಿಂತ ಈ ಸಲ ಜನರು ಪಟಾಕಿಗಳನ್ನು ಖರೀದಿಸುತ್ತಿದ್ದಾರೆ ಎಂದು ಪಟಾಕಿ ವ್ಯಾಪಾರಿ ನಾಗರಾಜ್ ತಿಳಿಸಿದರು.
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಕೈಗೊಳ್ಳಲಾಗಿದೆ. ನಿಯಮ ಬಾಹಿರವಾಗಿ ಯಾರೂ ಪಟಾಕಿಗಳನ್ನು ಹಚ್ಚುವಂತ್ತಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಬ್ಬ ಆಚರಣೆ ಮಾಡಲು ಎಲ್ಲರೂ ಸಹಕರಿಸಬೇಕು ಎನ್ನುತ್ತಾರೆ ಎಸ್ಪಿ ವಿಜಯನಗರ ಎಸ್.ಜಾಹ್ನವಿ.