27ಕ್ಕೆ ವಿಜಯನಗರ ಜಿಲ್ಲೆಯ ಜಿಲ್ಲಾ ನ್ಯಾಯಾಲಯ ಉದ್ಘಾಟನೆ

| Published : Sep 23 2025, 01:04 AM IST / Updated: Sep 23 2025, 01:05 AM IST

ಸಾರಾಂಶ

ಬಳ್ಳಾರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲೇ ವಿಜಯನಗರ ಜಿಲ್ಲೆಯ 1800ಕ್ಕೂ ಅಧಿಕ ಪ್ರಕರಣಗಳು ನಡೆಯುತ್ತಿದೆ.

ಹೊಸಪೇಟೆ: ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ನ್ಯಾಯಾಲಯದ ಉದ್ಘಾಟನಾ ಸಮಾರಂಭ ಸೆ.27ರಂದು ಬೆಳಗ್ಗೆ 11 ಗಂಟೆಗೆ ನ್ಯಾಯಾಲಯದ ಆವರಣದಲ್ಲಿ ನಡೆಯಲಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಕೆ.‌ಪ್ರಹ್ಲಾದ್‌ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌, ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್‌ ಸೇರಿದಂತೆ ನ್ಯಾಯಮೂರ್ತಿಗಳು ಹಾಗೂ ಹಿರಿಯ ವಕೀಲರು ಭಾಗವಹಿಸಲಿದ್ದಾರೆ ಎಂದರು.

ಬಳ್ಳಾರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲೇ ವಿಜಯನಗರ ಜಿಲ್ಲೆಯ 1800ಕ್ಕೂ ಅಧಿಕ ಪ್ರಕರಣಗಳು ನಡೆಯುತ್ತಿದ್ದು, ಈ ಪ್ರಕರಣಗಳು ಈಗ ಹೊಸಪೇಟೆಯಲ್ಲಿ ಸೆ.27ರಿಂದ ಆರಂಭಗೊಳ್ಳಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆ ಆಗಲಿವೆ. 57 ಸಿಬ್ಬಂದಿಯನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ. ಈಗ ಹೊಸಪೇಟೆಯಲ್ಲೇ ಜಿಲ್ಲಾ ನ್ಯಾಯಾಲಯ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಜಿಲ್ಲೆಯ ಆರು ತಾಲೂಕುಗಳ, ವಕೀಲರು ಹಾಗೂ ಕಕ್ಷಿದಾರರಿಗೆ ಅನುಕೂಲ ಆಗಲಿದೆ. ಬಳ್ಳಾರಿಗೆ ತೆರಳುವುದು ತಪ್ಪಲಿದೆ. ನಾಲ್ಕು ವರ್ಷಗಳ ಬಳಿಕ ನಮಗೆ ಜಿಲ್ಲಾ ನ್ಯಾಯಾಲಯ ಮಂಜೂರಾಗಿದ್ದು, ಈಗ ಉದ್ಘಾಟನೆ ಆಗಲಿದೆ. ಮೂಲಭೂತ ಸೌಕರ್ಯ ಕೂಡ ಒದಗಿಸಲಾಗಿದೆ ಎಂದರು.

ಜಿಲ್ಲಾ ಭವನ, ಜಿಲ್ಲಾಡಳಿತದ ಕಟ್ಟಡಗಳಿಗಾಗಿ ಸರ್ಕಾರ ಗುರುತಿಸಿರುವ 83 ಎಕರೆಯಲ್ಲಿ 10 ಎಕರೆ ಜಾಗ ನ್ಯಾಯಾಲಯದ ಕಟ್ಟಡ ಹಾಗೂ ಸಂಕೀರ್ಣ ಮತ್ತು ವಸತಿಗೃಹಗಳ ಬಳಕೆಗೆ ಸರ್ಕಾರ ಗುರುತಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲೂ ಅಭಿವೃದ್ಧಿ ಆಗಲಿದೆ ಎಂದರು.

ವಕೀಲರ ಸಂಘದ ಪ್ರ.ಕಾರ್ಯದರ್ಶಿ ಪಿ.ಶ್ರೀನಿವಾಸಮೂರ್ತಿ, ವಕೀಲರಾದ ಮರಿಯಪ್ಪ, ರವಿಕುಮಾರ, ವೀರಭದ್ರಪ್ಪ, ಗುಜ್ಜಲ ನಾಗರಾಜ, ಜಿ.ಮಲ್ಲಿಕಾರ್ಜುನ ಸ್ವಾಮಿ, ಎ.ಕರುಣಾನಿಧಿ, ಕಟಗಿ ಜಂಬಯ್ಯ ಮತ್ತಿತರರಿದ್ದರು.