ಸಾರಾಂಶ
ಹೊಸಪೇಟೆ: ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿ ನೀಡಿದ್ದ ಜಿಲ್ಲಾ ಬಂದ್ ಕರೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಹೊಸಪೇಟೆ ಗುರುವಾರ ಸಂಪೂರ್ಣ ಸ್ತಬ್ದಗೊಂಡಿತ್ತು.
ಕೂಡ್ಲಿಗಿ, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿಯಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕೊಟ್ಟೂರು, ಹೂವಿನಹಡಗಲಿಯಲ್ಲಿ ಪ್ರತಿಭಟನೆ ನಡೆಸಿ, ಖಂಡಿಸಲಾಗಿದೆ. ಹರಪನಹಳ್ಳಿಯಲ್ಲಿ ಮನವಿ ಸಲ್ಲಿಸಲಾಯಿತು.ನಗರದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ದೂರ ದೂರಿಗೆ ತೆರಳಲು ಪ್ರಯಾಣಿಕರು ಪರದಾಟ ನಡೆಸಿದರು.
ನಗರದಿಂದ ಕೊಪ್ಪಳ, ಬಳ್ಳಾರಿ, ಗಂಗಾವತಿ, ಹರಿಹರ, ಬೆಂಗಳೂರು, ಗದಗ, ಹುಬ್ಬಳ್ಳಿ ಸೇರಿದಂತೆ ವಿವಿಧ ನಗರಗಳಿಗೆ ತೆರಳಲು ಆಗಮಿಸಿದ್ದ ಪ್ರಯಾಣಿಕರು ಬಸ್‌ಗಳಿಲ್ಲದೇ ಪರದಾಟ ನಡೆಸಿದರು. ಕೆಲವರು ರೈಲ್ವೆ ನಿಲ್ದಾಣಕ್ಕೆ ತೆರಳಿ ರೈಲುಗಳನ್ನೇರಿ ತಮ್ಮ ಊರುಗಳನ್ನು ತಲುಪಿದರು. ನಗರದ ಬಸ್ ನಿಲ್ದಾಣ ಬಸ್‌ಗಳಿಲ್ಲದೇ ಭಣಗುಡುತ್ತಿತ್ತು. ಸಾರಿಗೆ ಘಟಕದವರು ನಿಲ್ದಾಣ ಸ್ವಚ್ಛಗೊಳಿಸುವ ಕಾರ್ಯ ಮಾಡಿದರು.ನಗರದಲ್ಲಿ ಅಂಗಡಿ-ಮುಂಗಟ್ಟು, ಚಿತ್ರ ಮಂದಿರಗಳು ಬಂದ್ ಆಗಿದ್ದವು. ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಕೂಡ ಬಂದ್ ಆಗಿದ್ದು, ಬಂದ್ ಎಫೆಕ್ಟ್‌ನಿಂದ ಖಾಸಗಿ ಹಣಕಾಸು ಸಂಸ್ಥೆಗಳು, ಬ್ಯಾಂಕ್ ಗಳು ಕೂಡ ತೆರೆದಿರಲಿಲ್ಲ. ತರಕಾರಿ ಮಾರ್ಕೆಟ್‌ನಲ್ಲಿ ಅಲ್ಲಲ್ಲಿ ಅಂಗಡಿಗಳು ತೆರೆದಿದ್ದರೂ ಗ್ರಾಹಕರು ಇಲ್ಲದೇ ಭಣಗುಡುತ್ತಿತ್ತು. ಇಡೀ ನಗರ ಬಂದ್ ಹಿನ್ನೆಲೆ ಸಂಪೂರ್ಣ ಸ್ತಬ್ದಗೊಂಡಿತ್ತು.
ಪ್ರತಿಭಟನಾ ಮೆರವಣಿಗೆ:ನಗರದ ವಾಲ್ಮೀಕಿ ವೃತ್ತದಿಂದ ಆರಂಭಗೊಂಡ ಬೃಹತ್ ಮೆರವಣಿಗೆ ನಗರದ ಮದಕರಿ ನಾಯಕ ವೃತ್ತ, ಮೇನ್ ಮಸೀದಿ, ಮಹಾತ್ಮ ಗಾಂಧೀಜಿ ವೃತ್ತ, ಪುಣ್ಯಮೂರ್ತಿ ವೃತ್ತ, ಬಸ್ ನಿಲ್ದಾಣ, ಪುನೀತ್ ರಾಜ್‌ಕುಮಾರ ವೃತ್ತದ ಮೂಲಕ ಸಾಗಿ ಜೈಭೀಮ್ ವೃತ್ತದಲ್ಲಿ ಪ್ರತಿಭಟನೆಯಾಗಿ ಮಾರ್ಪಟ್ಟಿತ್ತು. ಪ್ರತಿಭಟನಾ ಮೆರವಣಿಗೆ ಉದ್ದಕ್ಕೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಅಮಿತ್ ಶಾ ಕ್ಷಮೆಯಾಚಿಸಲಿ:ಚಿಂತಕ ಪ್ರೊ.ರಹಮತ್ ತರೀಕೆರೆ, ಮುಖಂಡರಾದ ಎಂ. ಜಂಬಯ್ಯ ನಾಯಕ, ಎಚ್‌ಎನ್ಎಫ್ ಮಹಮ್ಮದ್ ನಿಯಾಜಿ, ಬಣ್ಣದಮನೆ ಸೋಮಶೇಖರ್, ದುರುಗಪ್ಪ ಪೂಜಾರ ಮಾತನಾಡಿ, ಅಮಿತ್ ಶಾ ಈ ಕೂಡಲೇ ದೇಶದ ಜನರ ಕ್ಷಮೆ ಕೋರಬೇಕು. ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಬೇಕು. ಸಂಸತ್‌ನಲ್ಲಿ ಸಂವಿಧಾನಕ್ಕೆ ನಮಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್ ಶಾ ಅವರ ರಾಜೀನಾಮೆ ಏಕೆ ಪಡೆಯುತ್ತಿಲ್ಲ? ಈ ಕೂಡಲೇ ವಿವರಣೆ ಪಡೆಯಬೇಕು. ಇಡೀ ವಿಶ್ವಕ್ಕೆ ಮಾದರಿ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಅಮಿತ್ ಶಾ ಅವರ ರಾಜೀನಾಮೆ ಪಡೆಯಬೇಕು. ಕೇಂದ್ರ ಸರ್ಕಾರ ಈಗಾಗಲೇ ಸಂವಿಧಾನ ಬದಲಿಸುವ ಹೇಳಿಕೆಯಿಂದ ಲೋಕಸಭೆ ಚುನಾವಣೆಯಲ್ಲಿ ಪೆಟ್ಟು ತಿಂದಿದೆ. ಈಗ ಸಮ್ಮಿಶ್ರ ಸರ್ಕಾರ ಹೊಂದಿರುವ ಬಿಜೆಪಿ ಎಚ್ಚರಿಕೆಯಿಂದ ಇರಬೇಕು. ಮನುವಾದ ಸಿದ್ಧಾಂತವನ್ನು ಈ ದೇಶದ ಜನರ ಮೇಲೆ ಹೇರುವ ಸಾಹಸಕ್ಕೆ ಕೈ ಹಾಕಬಾರದು. ಸಂವಿಧಾನದ ಆಶಯದಂತೆ ಸರ್ಕಾರ ನಡೆಯಬೇಕು. ಮುಂಬರುವ ದಿನಗಳಲ್ಲಿ ಅಮಿತ್ ಶಾ ಅವರು ನೀಡಿರುವ ಹೇಳಿಕೆಗೆ ಬಿಜೆಪಿ ಬೆಲೆ ತೆರಬೇಕಾಗುತ್ತದೆ. ಇವರ ಒಡೆದಾಳುವ ನೀತಿಗೆ ಎಂದಿಗೂ ಮನ್ನಣೆ ಸಿಗುವುದಿಲ್ಲ. ಅಂಬೇಡ್ಕರ್ ಅವರ ಹೆಸರನ್ನು ನಿತ್ಯವೂ ಜಪಿಸುವ ಮೂಲಕ ಅಮಿತ್ ಶಾ ಹೇಳಿಕೆಗೆ ಪ್ರತ್ಯುತ್ತರ ನೀಡಲಾಗುವುದು ಎಂದರು.
ಮುಖಂಡರಾದ ಡಿ. ವೆಂಕಟರಮಣ, ಬಿಸಾಟಿ ತಾಯಪ್ಪ ನಾಯಕ, ಎನ್.ವೆಂಕಟೇಶ್, ನಿಂಬಗಲ್ ರಾಮಕೃಷ್ಣ, ಸಣ್ಣಮಾರೆಪ್ಪ, ಸೂರ್ಯನಾರಾಯಣ, ಕೆ.ಎಂ. ಸಂತೋಷ್, ಕೆ.ಎಂ. ಹಾಲಪ್ಪ, ಎಲ್. ಸಿದ್ದನಗೌಡ, ಸಿ.ಎ. ಗಾಳೆಪ್ಪ, ನಾಗರಾಜ, ಕೊಟಗಿನಾಳ್ ಮಲ್ಲಿಕಾರ್ಜುನ, ವಾಸುದೇವ , ವೈ. ರಾಮಚಂದ್ರ ಬಾಬು, ಎನ್.ಯಲ್ಲಾಲಿಂಗ , ಎಂ.ಕರುಣಾನಿಧಿ, ಜೆ.ಶಿವಕುಮಾರ, ಎಚ್. ಶಬ್ಬೀರ್, ಪೀರ್ ಬಾಷಾ, ವಿನಾಯಕ ಶೆಟ್ಟರ್, ಭಾಸ್ಕರ್ ರೆಡ್ಡಿ, ಗ್ಯಾನಪ್ಪ ಬಡಿಗೇರ್ , ಜಿ.ಶಿವಕುಮಾರ ಗಂಗಪ್ಪ, ತಾರಿಹಳ್ಳಿ ಹನುಮಂತ, ನಾಣೀಕೇರಿ ಸದಾಶಿವ, ಕೆ.ಬಡಾವಲಿ, ಮಹಮ್ಮದ್ ಗೌಸ್, ಕರಿಯಪ್ಪ ಗುಡಿಮನೆ, ಮಾಲತೇಶ್, ಹನುಮಂತಪ್ಪ, ಬಿ.ಮಾರೆಣ್ಣ, ಕೆ.ರಮೇಶ, ನಾಗರತ್ನಮ್ಮ, ಡಾ.ಈರಮ್ಮ, ಹುಲಿಗೆಮ್ಮ, ಸದ್ದಾಂ ಹುಸೇನ್, ಕೆ.ಎಸ್. ದಾದಾಪೀರ್, ವೀರಭದ್ರ ನಾಯಕ್, ಎಂ.ರಾಮಕೃಷ್ಣ, ಕ್ರಾಂತಿ ಗೀತೆ ಹಾಡುಗಾರ ಮಹಾಂತೇಶ್, ಗೋವಿಂದ, ಹನುಮಯ್ಯ, ಮಂಜುನಾಥ, ದುರುಗೇಶ್ ಚಂದ್ರಪ್ಪ, ಚೌಡೇಶ್, ಮೌನೇಶ್ ಮತ್ತಿತರರು ಪಾಲ್ಗೊಂಡಿದ್ದರು.;Resize=(128,128))
;Resize=(128,128))