ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮನೆ ಮಾತಾಗಿದ್ದಾರೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕಟಿಬದ್ಧರಾಗಿದ್ದ ಅವರು, ಗಾದಿಗನೂರು ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿಸಿ ಮಾದರಿಯಾಗಿ ಮಾಡಿದ್ದರು. ಇನ್ನೂ ಭುವನಹಳ್ಳಿ ಗ್ರಾಮವನ್ನು ದತ್ತು ಗ್ರಾಮ ಎಂದು ಸ್ವೀಕರಿಸಿ ಅಭಿವೃದ್ಧಿಪಡಿಸಿದ್ದರು.ಆಗಿನ ಬಳ್ಳಾರಿ ಜಿಲ್ಲೆ ಈಗಿನ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗ್ರಾಮಗಳಾಗಿರುವ ಗಾದಿಗನೂರು ಹಾಗೂ ಭುವನಹಳ್ಳಿ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದರು. ಗಾದಿಗನೂರು ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿಸಲು ಕೋಟ್ಯಂತರ ರು. ಅನುದಾನ ಒದಗಿಸಿದರು. ಭುವನಹಳ್ಳಿ ಗ್ರಾಮವನ್ನು ದತ್ತು ಸ್ವೀಕಾರ ಮಾಡಿ, ಈ ಗ್ರಾಮದ ಶಾಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ನೀಡಿದರು. ಆಗಿನ ಗ್ರಾಮೀಣಾಭಿವೃದ್ಧಿ ಸಚಿವ ಎಂ.ವೈ. ಘೋರ್ಪಡೆ ಅವರ ಒತ್ತಾಸೆ ಮೇರೆಗೆ ಈ ಗ್ರಾಮಗಳ ಅಭಿವೃದ್ಧಿ ಕೈಗೊಂಡರು. ಗಾದಿಗನೂರು ಗ್ರಾಮದ ಮಾದರಿಯಲ್ಲೇ ಹಳ್ಳಿಗಳ ಉದ್ಧಾರಕ್ಕಾಗಿ ಇಡೀ ರಾಜ್ಯಾದ್ಯಂತ ಗ್ರಾಮಗಳ ಅಭಿವೃದ್ಧಿಗೆ ಅನುದಾನ ಕೂಡ ಒದಗಿಸಿದರು. ಗಾದಿಗನೂರು ಸ್ವಚ್ಛ ಗ್ರಾಮ ಪರಿಕಲ್ಪನೆಯ ಪೈಲೆಟ್ ಯೋಜನೆ ಆಗಿತ್ತು ಎಂದು ಹೇಳುತ್ತಾರೆ ಮಾಜಿ ಜಿಪಂ ಸದಸ್ಯ ಕೆ.ಎಂ. ಹಾಲಪ್ಪ.
ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಆಡಳಿತಾವಧಿಯಲ್ಲಿ ಗಾದಿಗನೂರು ಹಾಗೂ ಭುವನಹಳ್ಳಿ ಗ್ರಾಮಗಳಿಗೆ ಅವರ ಸಚಿವ ಸಂಪುಟದ ಸಚಿವರೂ ಆಗಮಿಸಿ ತಮ್ಮ ಇಲಾಖೆಗಳ ಅನುದಾನ ಒದಗಿಸಿದ್ದರು. ಹಾಗಾಗಿ ಈ ಗ್ರಾಮಗಳು ಭಾರೀ ಗಮನ ಸೆಳೆದಿದ್ದವು.ವಿಜಯನಗರ ಕಾಲೇಜಿಗೆ ಭೇಟಿ
ನಗರದ ವಿಜಯನಗರ ಕಾಲೇಜಿಗೆ ಭೇಟಿ ನೀಡಿದ್ದ ಮೈಸೂರು ವಿವಿಯ ಡಾ. ಖಾಜೀರ್ ಅಲಿಖಾನ್ ನೇತೃತ್ವದ ಸಮಿತಿ ಸದಸ್ಯರಾಗಿಯೂ ಎಸ್.ಎಂ. ಕೃಷ್ಣ ಭೇಟಿ ನೀಡಿದ್ದರು. ಈ. ಕಾಲೇಜಿನ ಮೊದಲ ಪ್ರಾಚಾರ್ಯ ಪ್ರೊ. ಸಿ.ಬಿ. ಚಂದ್ರಶೇಖರಪ್ಪ ಹಾಗೂ ವೀ.ವಿ. ಸಂಘದ ಕಾರ್ಯದರ್ಶಿಯಾಗಿದ್ದ ಎನ್. ತಿಪ್ಪಣ್ಣ ಅವರ ಕಿರಿಯ ಸಹಪಾಠಿಯೂ ಆಗಿದ್ದರು.ಕನ್ನಡ ವಿವಿಗೆ ಅನುದಾನ
ಕನ್ನಡ ವಿವಿ ವಾಲ್ಮೀಕಿ ಅಧ್ಯಯನ ಪೀಠಕ್ಕೆ ₹15 ಲಕ್ಷ ಅನುದಾನ ಒದಗಿಸಿದ ಅವರು, ಈ ಅಧ್ಯಯನ ಪೀಠಕ್ಕೆ ಚಾಲನೆ ನೀಡಿದರು. ವಿವಿಯ 42 ಬೋಧಕೇತರ ಸಿಬ್ಬಂದಿ ಕಾಯಂಗೆ ಅನುಮೋದನೆ ನೀಡಿದರು. ಕನ್ನಡ ವಿವಿಯಲ್ಲಿ ದಶಮಾನೋತ್ಸವ ಕಟ್ಟಡ ನಿರ್ಮಾಣ, ಕುಲಪತಿ ಮನೆ ಮಾನಸೋಲ್ಲಾಸ ಕಟ್ಟಡ ನಿರ್ಮಾಣಕ್ಕೂ ಒತ್ತು ನೀಡಿದರು. ಕನ್ನಡ ವಿವಿ ಬೆಳವಣಿಗೆಗೆ ಅನುದಾನ ಒದಗಿಸಿದ್ದ ಅವರು, ಕನ್ನಡದಲ್ಲೇ ಸಂಶೋಧನೆಗಳನ್ನು ಕೈಗೊಳ್ಳಲು ಅಕಾಡೆಮಿಕ್ ವಲಯಕ್ಕೂ ಅನುದಾನ ಒದಗಿಸಿದ್ದರು.ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆ ಭಾಗದಲ್ಲಿ ಹೇರಳ ಖನಿಜ ಸಂಪತ್ತು ದೊರೆಯುವುದನ್ನು ಮನಗಂಡಿದ್ದ ಅವರು ವೈಜ್ಞಾನಿಕ ಗಣಿಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದರು. ಅವರ ಕಾಲಾವಧಿಯಲ್ಲಿ ಹಲವು ಗಣಿ ಕಂಪನಿಗಳಿಗೆ ಪರವಾನಗಿ ಕೂಡ ದೊರೆಯಿತು. ಇದರ ಭಾಗವಾಗಿ ಈ ಭಾಗದಲ್ಲಿ ಮೆದುಕಬ್ಬಿಣ, ಉಕ್ಕಿನ ಕಾರ್ಖಾನೆಗಳ ಸ್ಥಾಪನೆ ನಡೆಯಿತು.ಹಳ್ಳಿಗಳ ಉದ್ಧಾರ
ಎಸ್.ಎಂ. ಕೃಷ್ಣ ಅವರು ಗಾದಿಗನೂರು ಹಾಗೂ ಭುವನಹಳ್ಳಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ಹಳ್ಳಿಗಳ ಉದ್ಧಾರಕ್ಕಾಗಿ ಒತ್ತು ನೀಡಿದರು. ಈ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದರು.ಕೆ.ಎಂ. ಹಾಲಪ್ಪ, ಜಿಪಂ ಮಾಜಿ ಸದಸ್ಯರು. ಗಾದಿಗನೂರು.