ಜಿಲ್ಲಾಧಿಕಾರಿಗಳು ತಮ್ಮ ಮನೆ ಬಾಗಿಲ ಬಳಿ ಸೈಕಲ್‌ ಮೂಲಕ ಬರುತ್ತಿದ್ದಂತೆ ಮಹಿಳೆಯರು ಸೇರಿದಂತೆ ಸಾರ್ವಜನಿಕರು, ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ದೂರಿದರು.

ಕೊಟ್ಟೂರು: ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಮಂಗಳವಾರ ಆಗಮಿಸಿದ್ದ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಅವರು ಪಟ್ಟಣದ ವಿವಿಧೆಡೆ ಸೈಕಲ್‌ನಲ್ಲಿ ಸಂಚರಿಸಿ ಅಹವಾಲುಗಳನ್ನು ಆಲಿಸಿ ಜನರ ಮೆಚ್ಚುಗೆಗೆ ಪಾತ್ರರಾದರು.

ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಅವರು ಇಲ್ಲಿನ ಗಾಂಧಿ ವೃತ್ತದಿಂದ ಸೈಕಲ್‌ ಸಂಚಾರ ಕೈಗೊಂಡರು. ಕೊಟ್ಟೂರೇಶ್ವರ ದೇವಸ್ಥಾನದ ರಸ್ತೆ, ಗಚ್ಚಿನಮಠ, ಊರಮ್ಮ ಗುಡಿ ಪ್ರದೇಶ, ತೇರು ಬಯಲು, ಬಳ್ಳಾರಿ ಕ್ಯಾಂಪ್‌, ಬಸ್‌ ನಿಲ್ದಾಣ, ಬಾಲಾಜಿ ಕಲ್ಯಾಣಮಂಟಪ ರಸ್ತೆ ಮೂಲಕ ಸೈಕಲ್‌ನಲ್ಲಿ ಸಾಗಿ ಸಮುದಾಯ ಆರೋಗ್ಯ ಕೇಂದ್ರ, ಎಪಿಎಂಸಿ ಪ್ರದೇಶಗಳಲ್ಲಿ ಸಂಚರಿಸಿದರು.

ಜಿಲ್ಲಾಧಿಕಾರಿಗಳು ತಮ್ಮ ಮನೆ ಬಾಗಿಲ ಬಳಿ ಸೈಕಲ್‌ ಮೂಲಕ ಬರುತ್ತಿದ್ದಂತೆ ಮಹಿಳೆಯರು ಸೇರಿದಂತೆ ಸಾರ್ವಜನಿಕರು, ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ದೂರಿದರಲ್ಲದೆ ಮನೆಗಳ ಮುಂದೆ ಇರುವ ಚರಂಡಿ ನೀರು ಹರಿಯದಂತೆ ಕಸ- ಕಡ್ಡಿಗಳಿಂದ ತುಂಬಿಹೋಗಿವೆ, ಇದರ ಪರಿಣಾಮ ಸೊಳ್ಳೆಗಳ ಅರ್ಭಟದಿಂದ ನಿದ್ದೆಯಿಲ್ಲದೆ ರಾತ್ರಿ ಇಡೀ ಜಾಗರಣೆ ಮಾಡುವಂತಾಗಿದೆ ಎಂದು ಅಲವತ್ತುಕೊಂಡರು.

ಸ್ಥಳದಲ್ಲಿಯೇ ಇದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ ಅವರಿಗೆ, ಕೂಡಲೇ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು. ನೀರನ್ನು ಸಮರ್ಪಕವಾಗಿ ಪೂರೈಸಲು ಮುಂದಾಗಿ ಎಂದು ತಾಕೀತು ಮಾಡಿದರು. ಬಸ್‌ ನಿಲ್ದಾಣದ ಶೌಚಾಲಯವನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ನಿಲ್ದಾಣದಲ್ಲಿಯೇ ಇದ್ದ ಕಸದ ರಾಶಿಯನ್ನು ತೆಗೆಯದೆ ಅನೈರ್ಮಲ್ಯ ಉಂಟಾಗಿದ್ದನ್ನು ಕಂಡು ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡರು.

ಬೀದಿ ಬದಿಯ ಹೋಟೆಲ್‌ಗೆ ತೆರಳಿದ ಜಿಲ್ಲಾಧಿಕಾರಿಯವರು ಮಿರ್ಚಿ ಸವಿದರು. ಆಗ ಸರಿಯಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಇಲ್ಲದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಂಗಡಿಯವರಿಗೆ ಎಚ್ಚರಿಸಿದರು. ಬಸ್‌ ನಿಲ್ದಾಣ, ಸಮುದಾಯ ಆರೋಗ್ಯ ಕೇಂದ್ರ, ಎಪಿಎಂಸಿಗಳಲ್ಲಿ ಉತ್ತಮ ಸಾರ್ವಜನಿಕ ಕಾರ್ಯ ನಿರ್ವಹಣೆಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ಸೈಕಲ್‌ ಸವಾರಿಯಲ್ಲಿ ತಹಸೀಲ್ದಾರ್‌ ಅಮರೇಶ್‌ ಜಿ.ಕೆ., ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ. ರವಿಕುಮಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ. ನಸರುಲ್ಲಾ, ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ವೆಂಕಟಸ್ವಾಮಿ, ಸಬ್‌ಇನ್‌ಸ್ಪೆಕ್ಟರ್‌ ಗೀತಾಂಜಲಿ ಸಿಂದೆ ಇತರರು ಪಾಲ್ಗೊಂಡಿದ್ದರು.