ಸಾರಾಂಶ
ಇತಿಹಾಸ ನಮ್ಮ ಬದುಕಿನ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳಲ್ಲಿ ಇದರ ಜ್ಞಾನ ವಿಸ್ತಾರಕ್ಕಾಗಿ ಕಾಲೇಜಿನಲ್ಲಿ ಇಂತಹ ಮೌಲ್ಯಾಧಾರಿತ ಕೋರ್ಸ್‌ಗಳನ್ನು ಆಯೋಜಿಸಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಕೊಪ್ಪಳ:
ವಿಜಯನಗರ ಸಾಮ್ರಾಜ್ಯದ ಶಾಸನಗಳು ದಾನ-ದತ್ತಿ, ಬಿರುದು, ಯುದ್ಧ, ಆಡಳಿತ, ಧರ್ಮ, ಯುದ್ಧ ವಿಜಯ, ಧರ್ಮ ಸಮನ್ವಯದ ಜತೆಗೆ ಮಾನವೀಯ ಮೌಲ್ಯ ಬಿತ್ತರಿಸುತ್ತವೆ ಎಂದು ಸಹ ಪ್ರಾಧ್ಯಾಪಕ ಡಾ. ಇಬ್ರಾಹಿಂ ಹೇಳಿದರು.ತಾಲೂಕಿನ ಇರಕಲ್ಲಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಇತಿಹಾಸ ವಿಭಾಗದ ವತಿಯಿಂದ ವಿಜಯನಗರ ಸಾಮ್ರಾಜ್ಯದ ಆಯ್ದ ಶಿಲಾಶಾಸನಗಳು ವಿಷಯದ ಮೇಲಿನ ಆಡ್ ಆನ್ ಕೋರ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ನೂರಾರು ಶಾಸನಗಳು ವೈವಿಧ್ಯಮಯವಾಗಿವೆ. ಇವು ನಮ್ಮ ಪರಂಪರೆ-ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಕಣಜಗಳಾಗಿವೆ ಎಂದರು.ಐಕ್ಯೂಎಸಿ ಘಟಕದ ಮುಖ್ಯಸ್ಥ ಪ್ರೊ. ಪ್ರಕಾಶಗೌಡ ಮಾತನಾಡಿ, ಇತಿಹಾಸ ನಮ್ಮ ಬದುಕಿನ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳಲ್ಲಿ ಇದರ ಜ್ಞಾನ ವಿಸ್ತಾರಕ್ಕಾಗಿ ಕಾಲೇಜಿನಲ್ಲಿ ಇಂತಹ ಮೌಲ್ಯಾಧಾರಿತ ಕೋರ್ಸ್‌ಗಳನ್ನು ಆಯೋಜಿಸಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲರಾದ ಪ್ರೊ. ಅನಿತಾ ಎಂ. ಪಾಟೀಲ ಮಾತನಾಡಿ, ವಿಜಯನಗರ ಸಾಮ್ರಾಜ್ಯ ಇಡೀ ಜಗತ್ತಿನ ಇತಿಹಾಸದಲ್ಲಿ ಮಹತ್ವದ ಐತಿಹಾಸಿಕ ಮೈಲುಗಲ್ಲು ನಿರ್ಮಿಸಿದ ಸಾಮ್ರಾಜ್ಯವಾಗಿದೆ. ಈ ಕುರಿತು ಮಹತ್ವದ ದಾಖಲೆ ಹೊಂದಿದ ಶಿಲಾಶಾಸನಗಳು ವಿಜಯನಗರದ ಸಾಂಸ್ಕೃತಿಕ ಕೊಡುಗೆಗಳನ್ನು ತಿಳಿಸುತ್ತವೆ ಎಂದರು.ಇತಿಹಾಸಕ್ಕೆ ಸಂಬಂಧಿಸಿದ ಆಡ್ ಆನ್ ಕೋರ್ಸ್‌ನ ಧ್ಯೇಯೋದ್ದೇಶ ವಿವರಿಸಿದ ಪ್ರೊ. ಸತೀಶ, ಸಂಪ್ರದಾಯಿಕ ಓದಿನ ಜತೆಜತೆಗೆ ನಿರ್ದಿಷ್ಟ ವಿಷಯದ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶದಿಂದ ವಿಜಯನರ ಸಾಮ್ರಾಜ್ಯದ ಸವಿಸ್ತಾರ ಜ್ಞಾನಕ್ಕಾಗಿ ಈ ಆಡ್ ಆನ್ ಕೋರ್ಸ್ ಆಯೋಜಿಸಲಾಗುತ್ತಿದೆ ಎಂದರು.ಡಾ. ಅನಿತಾ ಎಂ, ಪ್ರೊ. ಶಂಕ್ರಯ್ಯ ಅಬ್ಬಿಗೇರಿಮಠ, ಪ್ರೊ. ಸುನಿಲ್ ಟಿ, ಪ್ರೊ. ನಾಗರಾಜ ನಾಯಕ, ಪ್ರೊ. ನೇಹಾ, ಪ್ರೊ. ಶ್ವೇತಾ, ಪ್ರೊ. ಹರೀಶ, ಪ್ರೊ. ಗಂಗನಗೌಡ, ಉಪನ್ಯಾಸಕರಾದ ಮಹೇಶಕುಮಾರ, ಹನುಮಗೌಡ, ನಾಗಪ್ಪ, ನೇತ್ರಾವತಿ, ಉಪನ್ಯಾಸಕರಾದ ಮೆಹಬೂಬ್ ಮಕಾನದಾರ, ವೆಂಕಟೇಶ ನಾಯಕ, ಬಸವರಾಜ ಕಲ್ಮನಿ ಇದ್ದರು.