ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ನೂತನ ಜಿಲ್ಲೆ ವಿಜಯನಗರಕ್ಕೆ ದಕ್ಕಿದ್ದು ಈ ಬಾರಿ ಕಡಿಮೆಯೇ; ಆದರೆ, ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಪರಿಹಾರಕ್ಕೆ ಸಮನಾಂತರ ಜಲಾಶಯ ನಿರ್ಮಾಣಕ್ಕೆ ₹15,600 ಕೋಟಿ ವೆಚ್ಚದ ಯೋಜನಾ ವರದಿ ಸಿದ್ಧವಾಗಿದ್ದು, ಇದರ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡಲಾಗುವುದು ಎಂದು ಹೇಳಿರುವುದು ಈ ಭಾಗದ ರೈತರಲ್ಲಿ ಆಶಾಭಾವ ಒಡಮೂಡಿಸಿದೆ.ತುಂಗಭದ್ರಾ ಜಲಾಶಯ ನಿರ್ಮಾಣ ಕಾಲಕ್ಕೆ 133 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗುತ್ತಿತ್ತು. ಅದರ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿಗೆ ಕುಸಿದಿದೆ. ಈಗ ಸಮೀಕ್ಷೆ ನಡೆಸಿದರೆ, ಸಂಗ್ರಹ ಸಾಮರ್ಥ್ಯ ಇನ್ನಷ್ಟು ಕುಸಿಯಲಿದೆ. ಹಾಗಾಗಿ ಜಲಾಶಯದಲ್ಲಿ 32 ಟಿಎಂಸಿಯಷ್ಟು ಹೂಳು ತುಂಬಿದೆ ಎಂದು ಅಂದಾಜಿಸಲಾಗಿದೆ. ಈಗ ಜಲಾಶಯದ ಹೂಳಿನ ಸಮಸ್ಯೆ ಪರಿಹಾರಕ್ಕಾಗಿ ಕೊಪ್ಪಳದ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡಿ, 40 ಟಿಎಂಸಿಯಷ್ಟು ನೀರು ಸಂಗ್ರಹಿಸುವ ಯೋಜನೆ ಸಾಕಾರಗೊಳಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಾಗಿರುವುದು ರೈತರಲ್ಲಿ ಹರ್ಷ ಮೂಡಿಸಿದೆ. ಈ ಯೋಜನೆ ಸಾಕಾರಕ್ಕೆ ಆದ್ಯತೆ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿರುವ ಹಿನ್ನೆಲೆಯಲ್ಲಿ ಈ ಭಾಗದ ಬಹುವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿರುವ ಹಿನ್ನೆಲೆ ರೈತರು ಕೂಡ ಸ್ವಾಗತಿಸಿದ್ದಾರೆ.
ಈ ಸಮನಾಂತರ ಜಲಾಶಯ ನಿರ್ಮಾಣ ಮಾಡಿದರೆ; ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳ ರೈತರು ಎರಡನೆ ಬೆಳೆಗೆ ನೀರು ಪಡೆಯಲು ಸಾಧ್ಯವಾಗಲಿದೆ. ಅಲ್ಲದೇ ಜಲಾಶಯದಿಂದ ವ್ಯರ್ಥವಾಗಿ ನದಿ ಸೇರುವ ನೀರನ್ನು ಉಳಿಸಿದಂತಾಗಲಿದೆ.ಪ್ರವಾಸಿಸ್ನೇಹಿ ಪ್ರವಾಸೋದ್ಯಮ ನೀತಿ: ರಾಜ್ಯದ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸಿಗರ ಸ್ನೇಹಿ ಪರಿಷ್ಕೃತ ಪ್ರವಾಸೋದ್ಯಮ ನೀತಿ- 2024- 2029 ಜಾರಿಗೊಳಿಸಲು ಸರ್ಕಾರ ಮುಂದಾಗಿರುವುದು ಹಂಪಿ ಪ್ರವಾಸೋದ್ಯಮಕ್ಕೂ ಪೂರಕವಾಗಲಿದೆ. ಹಂಪಿಗೆ ದೇಶ- ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರಲು ಈ ನೀತಿ ಸಹಕಾರಿ ಆಗಲಿದೆ. ಈಗಾಗಲೇ ರಾಜ್ಯದ ಪ್ರವಾಸಿ ವಲಯವನ್ನು ಮೈಸೂರು ಹಾಗೂ ಹಂಪಿ ವಲಯ ಎಂದು ವಿಂಗಡನೆ ಮಾಡಲಾಗಿದೆ. ಈ ಎರಡು ವಲಯಗಳಿಗೆ ಪೂರಕವಾಗಿ ನೀತಿ ರೂಪಿಸಿದರೆ, ಹಂಪಿ ಪ್ರದೇಶದಲ್ಲಿ ಪ್ರವಾಸೋದ್ಯಮ ಬೆಳೆಯಲಿದೆ. ಈ ಮೂಲಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿಗೂ ಸಹಕಾರಿ ಆಗಲಿದೆ.
ಜಲಾಶಯಗಳ ಹಿನ್ನೀರು ಪ್ರದೇಶಗಳಲ್ಲಿ ಜಲಕ್ರೀಡೆ, ಜಲಸಾಹಸ ಪ್ರವಾಸೋದ್ಯಮಕ್ಕೂ ಸರ್ಕಾರ ಯೋಜನೆ ರೂಪಿಸಿದೆ. ತುಂಗಭದ್ರಾ ಜಲಾಶಯದಲ್ಲೂ ಈ ಯೋಜನೆ ಜಾರಿ ಆಗುವ ಸಾಧ್ಯತೆ ಇದ್ದು, ಇದರಿಂದ ಹಂಪಿ ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರವಾಸಿಗರನ್ನು ಸೆಳೆಯಬಹುದು.ಸೋಲಾರ್ ಪಾರ್ಕ್ ನಿರ್ಮಾಣ: ರಾಜ್ಯದ ಜಲಾಶಯಗಳ ಹಿನ್ನೀರು ಪ್ರದೇಶಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ತುಂಗಭದ್ರಾ ಜಲಾಶಯದಲ್ಲೂ ಸೋಲಾರ್ ಪಾರ್ಕ್ ನಿರ್ಮಾಣ ಮಾಡುವ ಸಾಧ್ಯತೆ ಇದೆ. ಈ ಹಿಂದೆಯೇ ಈ ಕುರಿತು ಪ್ರಾಥಮಿಕ ಸಮೀಕ್ಷೆ ಕೂಡ ಆಗಿದೆ. ಕೇಂದ್ರ ಸರ್ಕಾರ ಕೂಡ ರಾಜ್ಯ ಸರ್ಕಾರ ಯೋಜನೆಗೆ ಅನುದಾನ ಒದಗಿಸಿದರೆ, ಗ್ರಿನ್ ಸಿಗ್ನಲ್ ನೀಡಲಾಗುವುದು ಎಂದು ಹೇಳಿತ್ತು. ಈಗ ರಾಜ್ಯ ಸರ್ಕಾರ ಸೋಲಾರ್ ಪಾರ್ಕ್‌ಗಳನ್ನು ಜಲಾಶಯಗಳ ಹಿನ್ನೀರು ಪ್ರದೇಶದಲ್ಲಿ ನಿರ್ಮಿಸಲು ಹೊರಟಿರುವುದು ತುಂಗಭದ್ರಾ ಜಲಾಶಯಕ್ಕೂ ಈ ಯೋಜನೆ ಜಾರಿಗೊಳ್ಳಲಿದೆ. ಹಾಗಾಗಿ ಈ ಭಾಗದಲ್ಲಿ ಇನ್ನಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಜತೆಗೆ ಕೈಗಾರಿಕೆಗಳಿಗೂ ಅನುಕೂಲ ಆಗಲಿದೆ.
ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ತಾಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ನಿರ್ಮಾಣ ಮಾಡಲು ಸರ್ಕಾರ ಅಸ್ತು ಎಂದಿದೆ. ಆದರೆ, ವಿಜಯನಗರ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾತಿ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿಲ್ಲ.ಈ ಭಾಗದ ರೈತರಿಗೆ ಸಕ್ಕರೆ ಕಾರ್ಖಾನೆ ಸ್ಥಾಪನೆ ಬಹುವರ್ಷಗಳ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರಿಸುವುದಾಗಿ ವಿಧಾನಸಭೆ ಚುನಾವಣೆ ಮುನ್ನ ಸಿದ್ದರಾಮಯ್ಯನವರು ಪ್ರಚಾರದ ವೇಳೆ ಮಾತುಕೊಟ್ಟಿದ್ದರು. ಹೊಸಪೇಟೆಯ ಬಾಲಕಿಯರ ಪಪೂ. ಕಾಲೇಜಿನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ವೇಳೆ ಪತ್ರಕರ್ತರ ಪ್ರಶ್ನೆಗೆ ಮುಂದೆ ನೋಡೋಣ ಎಂದಿದ್ದರು. ಆದರೆ, ಸಕ್ಕರೆ ಕಾರ್ಖಾನೆ ಬಗ್ಗೆ ಪ್ರಸ್ತಾಪ ಮಾಡಲಾಗಿಲ್ಲ. ನೂತನ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಿದ್ದಾರೆ ಎಂಬ ಆಶಯ ಹಾಗೇ ಉಳಿದಿದೆ.
ಹಂಪಿ ಕನ್ನಡ ವಿವಿ ಸಮಸ್ಯೆಗೂ ಸ್ಪಂದನೆ ಇಲ್ಲಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಜನ್ಮ ತಳೆದಿರುವ ಕನ್ನಡ ವಿಶ್ವವಿದ್ಯಾಲಯಕ್ಕೂ ಸರ್ಕಾರ ವಿಶೇಷ ಅನುದಾನ ಘೋಷಣೆ ಮಾಡಿಲ್ಲ. ಕನ್ನಡ ವಿವಿ ಸಮಸ್ಯೆಗೆ ಸರ್ಕಾರ ಮದ್ದು ಹಚ್ಚಲಿದ್ದಾರೆ ಎಂಬ ಆಶಯ ಹೊಂದಲಾಗಿತ್ತು. ಆದರೆ, ಬಜೆಟ್‌ನಲ್ಲಿ ಮಾತ್ರ ಈ ಬಗ್ಗೆ ಪ್ರಸ್ತಾಪ ಮಾಡಲಾಗಿಲ್ಲ.