ವಿಜಯಪುರ ಜಿಲ್ಲಾ ಬಂದ್‌ ಬಹುತೇಕ ಯಶಸ್ವಿ

| Published : Oct 17 2025, 01:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಖಂಡಿಸಿ ವಿವಿಧ ದಲಿತಪರ ಸಂಘಟನೆಗಳು ಕರೆ ನೀಡಿದ್ದ ವಿಜಯಪುರ ಬಂದ್‌ ಬಹುತೇಕ ಯಶಸ್ವಿಯಾಗಿದೆ. ಬಂದ್ ಪ್ರಯುಕ್ತ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಜಿಲ್ಲೆಯ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಬುದ್ಧಿಜೀವಿಗಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಖಂಡಿಸಿ ವಿವಿಧ ದಲಿತಪರ ಸಂಘಟನೆಗಳು ಕರೆ ನೀಡಿದ್ದ ವಿಜಯಪುರ ಬಂದ್‌ ಬಹುತೇಕ ಯಶಸ್ವಿಯಾಗಿದೆ. ಬಂದ್ ಪ್ರಯುಕ್ತ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಜಿಲ್ಲೆಯ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಬುದ್ಧಿಜೀವಿಗಳು ಭಾಗವಹಿಸಿದ್ದರು.ಆರಂಭದಲ್ಲಿ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಕಲಾ ತಂಡಗಳೊಂದಿಗೆ ಮೆರವಣಿಗೆ ಆರಂಭಿಸಲಾಯಿತು. ಬಸವೇಶ್ವರ ವೃತ್ತದ ಮೂಲಕ ಪ್ರತಿಭಟನಾ ರ್‍ಯಾಲಿಯು ಡಾ.ಅಂಬೇಡ್ಕರ ವೃತ್ತ ತಲುಪಿತು. ಈ ವೇಳೆ ಸಿಜೆಐ ಗವಾಯಿ ಪರ ಜಯಘೋಷಣೆ ಹಾಗೂ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಂದ್‌ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

ಮಾಜಿ ಶಾಸಕ ಪ್ರೊ.ರಾಜು ಆಲಗೂರ ಮಾತನಾಡಿ, ಮುಖ್ಯ ನ್ಯಾಯಮೂರ್ತಿಗಳಿಗೆ ಅವಮಾನಿಸಿದ್ದು ಕೇವಲ ಒಬ್ಬರಿಗಲ್ಲ, ಇಡೀ ಸಂವಿಧಾನಕ್ಕೆ ಅವಮಾನಿಸಿದಂತಾಗಿದೆ. ಶೂ ಎಸೆದವರ ಮೇಲೆ ಪ್ರಧಾನಮಂತ್ರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?. ಬಿಜೆಪಿ, ಆರ್‌ಎಸ್‌ಎಸ್‌, ಭಜರಂಗಳ, ಮತೀಯವಾದಿಗಳು, ಸನಾತನವಾದಿಗಳು ಹೆಚ್ಚು ಶಕ್ತಿ ಪಡೆದು ಸಂವಿಧಾನವನ್ನು ಪ್ರಶ್ನೆ ಮಾಡುತ್ತಿವೆ. ಹಾಗಾಗಿ ಇದು ಇಲ್ಲಿಗೆ ನಿಲ್ಲುವುದು ಸಾಧ್ಯವಿಲ್ಲ, ನಿರಂತರವಾಗಿ ಮುಂದುವರೆಯಲಿದೆ. ಇದೇ ರೀತಿ ಪ್ರಧಾನಮಂತ್ರಿಗೆ ಹಾಗೂ ಅಮೀತ್ ಶಾಗೆ ಶೂ ಎಸೆದಿದ್ದರೆ ಸುಮ್ಮನೆ ಇರುತ್ತಿದ್ದಿರಾ?. ಶೂ ಎಸೆದ ವಕೀಲನ ಮೇಲೆ ಕ್ರಮ ಕೈಗೊಂಡು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.

ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ನ್ಯಾಯಮೂರ್ತಿ ಗವಾಯಿ ಅವರ ಮೇಲೆ ನಡೆದ ಕೃತ್ಯವನ್ನು ಖಂಡಿಸಿ ಇಂದು ಬಂದ್ ಹೋರಾಟ ನಡೆಸಲಾಗಿದೆ. ಸ್ಥಾನಕ್ಕೆ ಗೌರವ ಕೊಡದೆ ಶೂ ಎಸೆದ ವಕೀಲನ ಹಿಂದೆ ಯಾರು ಇದ್ದಾರೆ ಎಂಬುದನ್ನು ಎಲ್ಲರೂ ಅರಿಯಬೇಕು. ಕೆಳ ಜಾತಿಯಿಂದ ಬಂದು ತಮ್ಮ ಸಾಮರ್ಥ್ಯದ ಮೇಲೆ ಉನ್ನತ ಹುದ್ದೆ ಅಲಂಕರಿಸಿದರೆ ಅಂತಹವರನ್ನು ಅಪಮಾನ ಮಾಡುವ ಕೆಲಸ ನಡೆಯುತ್ತಿದೆ. ಕೆಳಜಾತಿಯವರು ಯಾವಾಗಲೂ ಸೇವಕರಾಗಿ ಇರಬೇಕು ಎಂಬುದನ್ನು ಕೆಲವರ ಮನಸ್ಥಿತಿ ತೋರಿಸುತ್ತಿದೆ. ಪಟ್ಟಭದ್ರ ಹಿತಾಶಕ್ತಿಗಳು ನಮ್ಮನ್ನು ಒಡೆದಾಳುವ ನೀತಿ ಅನುಸರಿಸುತ್ತಿವೆ. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ತಕ್ಕ ಉತ್ತರ ಕೊಡಬೇಕಿದೆ. ಮಾತೆತ್ತಿದರೆ ಹಿಂದುತ್ವ, ದೇಶಭಕ್ತಿ ಎನ್ನುವವರೇ ತಾರತಮ್ಯ ಮಾಡುತ್ತಿದ್ಧಾರೆ ಎಂದು ಕಿಡಿಕಾರಿದರು.

ಹೋರಾಟದಲ್ಲಿ ಮುಖಂಡರಾದ ಎಸ್.ಎಂ.ಪಾಟೀಲ ಗಣಿಹಾರ, ಡಾ.ರವಿಕುಮಾರ ಬಿರಾದಾರ, ಡಾ.ಜೆ.ಎಸ್.ಪಾಟೀಲ, ಪ್ರಭುಗೌಡ ಪಾಟೀಲ, ಬುದ್ದವಿಹಾರದ ಡಾ.ಶಾಕು ಬೋಧಿದಮ್ಮ, ಅರವಿಂದ ಕುಲಕರ್ಣಿ, ಇರ್ಫಾನ ಶೇಖ, ಸಿದ್ದು ರಾಯಣ್ಣವರ, ಜಿತೇಂದ್ರ ಕಾಂಬಳೆ, ರಮೇಶ ಆಸಂಗಿ, ಶ್ರೀನಾಥ ಪೂಜಾರಿ, ಪರಶುರಾಮ ಲಂಬು, ಸುರೇಶ ಘೊಣಸಗಿ, ಆರತಿ ಶಹಾಪುರ, ಮಲ್ಲಿಕಾರ್ಜುನ ಬಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಬಾಕ್ಸ್‌

ವ್ಯಾಪಾರ ವಹಿವಾಟು ಅಸ್ತವ್ಯಸ್ತ ವಿಜಯಪುರ ಬಂದ್ ಹಿನ್ನೆಲೆ ನಗರದ ಕಿರಾಣಿ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಶಾಸ್ತ್ರೀ ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ವ್ಯಾವಾರ ವಹಿವಾಟುಗಳು ಬಂದ್ ಆಗಿದ್ದವು. ಸಾರಿಗೆ ವ್ಯವಸ್ಥೆಯೂ ಬಂದ್ ಆಗಿದ್ದರಿಂದ ನಿಲ್ದಾಣದಲ್ಲಿ ಬಸ್‌ಗಳೇ ಇಲ್ಲದೆ ದೂರದೂರಿಗೆ ಹೋಗುವವರು, ಊರಿಂದ ಬಂದ ಪ್ರಯಾಣಿಕರು ಪರದಾಡುವಂತಾಯಿತು.