30, 31 ರಂದು ವಿಜಯಪುರ ಸಾಂಸ್ಕೃತಿಕ ಜನೋತ್ಸವ

| Published : Mar 27 2024, 01:00 AM IST

ಸಾರಾಂಶ

ರಂಗಮಂದಿರದಲ್ಲಿ 13ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಐಡಿವೈಒ ಸಂಘಟನೆ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಾ.30 ಹಾಗೂ 31 ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ 13ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಐಡಿವೈಒ ಸಂಘಟನೆ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಹೇಳಿದರು.

ನಗರದ ಕಸಾಪ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನ್ ಕ್ರಾಂತಿಕಾರಿ ಭಗತಸಿಂಗ್ ಅವರ ಹುತಾತ್ಮ ದಿನದ ನೆನಪಿಗಾಗಿ ಆವಿಷ್ಕಾರ (ಪ್ರಗತಿಪರ ಸಾಂಸ್ಕೃತಿಕ ವೇದಿಕೆ), ಎಐಡಿವೈಒ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್), ಎಐಎಂಎಸ್‌ಎಸ್ (ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ) ಹಾಗೂ ಎಐಡಿಎಸ್‌ಒ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನ್ಯೆಸೇಷನ್) ಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಎಲ್ಲ ಕಾಲದಲ್ಲಿ ಎಲ್ಲ ರೀತಿಯ ಕಲ್ಮಷಗಳನ್ನು ಹೊಡೆದು ಹಾಕಿ ಮನುಷ್ಯನ ಮತ್ತು ಮನುಕುಲದ ಬದುಕನ್ನು ಸ್ವಚ್ಛ, ಸುಂದರ ಹಾಗೂ ಶ್ರೇಷ್ಠತೆಯತ್ತ ಕೊಂಡೊಯ್ಯಲು ಸಾಧ್ಯವಿರುವುದು ಒಂದು ಉದಾತ್ತ ಮತ್ತು ಪ್ರಗತಿಪರ ಸಾಂಸ್ಕೃತಿಕ ಚಳುವಳಿಗೆ ಮಾತ್ರ ಎಂದು ಇತಿಹಾಸ ನಮಗೆ ಕಲಿಸಿಕೊಟ್ಟ ಪಾಠವಾಗಿದೆ. ಆದ್ದರಿಂದ ಸಾಂಸ್ಕೃತಿಕ ಚಳುವಳಿ ಪೋಷಿಸುತ್ತಿರುವ ನಮ್ಮ ಸಂಘಟನೆಗಳಿಂದ 13ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವವನ್ನು ಸಂಘಟಿಸಲಾಗಿದ್ದು, ಎರಡು ದಿನಗಳ ಕಾಲ ಹಲವಾರು ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಸಾಂಸ್ಕೃತಿಕ ಜನೋತ್ಸವಕ್ಕೆ ಜಿಲ್ಲೆಯ ವಿದ್ಯಾರ್ಥಿ, ಯುವಜನ, ಮಹಿಳೆಯರು ಸೇರಿದಂತೆ ಎಲ್ಲ ಸಹೃದಯಿ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು.

ಇದೇ ವೇಳೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಆವಿಷ್ಕಾರ ಸಂಘಟನೆ ಜಿಲ್ಲಾ ಸಂಚಾಲಕ ಎಚ್.ಟಿ.ಭರತಕುಮಾರ, ಎಐಎಂಎಸ್ಎಸ್ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡಗೂಳಿ, ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಹಿರೇಮಠ, ಎಐಡಿವೈಒ ಜಿಲ್ಲಾಧ್ಯಕ್ಷ ಶ್ರೀಕಾಂತ ಕೆ, ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಸುರೇಖಾ ಕಡಪಟ್ಟಿ, ಎಐಎಂಎಸ್‌ಎಸ್ ಸಂಘಟಕಿ ಶಿವರಂಜನಿ ಉಪಸ್ಥಿತರಿದ್ದರು.

---

ಬಾಕ್ಸ್...

ಕಾರ್ಯಕ್ರಮಗಳ ವಿವರ

ಮಾ.30ರಂದು ಸಂಜೆ 5.30ಕ್ಕೆ ಲೇಖಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ರೂಪ ಹಾಸನ 13ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಕಥೆಗಾರರು ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನೂತನ ಅಧ್ಯಕ್ಷ ಡಾ. ಚೆನ್ನಪ್ಪ ಕಟ್ಟಿ ಮತ್ತು ಎಐಡಿಎಸ್‌ಒ ಅಖಿಲ ಭಾರತ ಉಪಾಧ್ಯಕ್ಷ ಡಾ.ಎನ್.ಪ್ರಮೋದ ಆಗಮಿಸಲಿದ್ದಾರೆ. ಅಂದು ರಾತ್ರಿ ಹೆನ್ರಿಕ್ ಇಬ್ಸೆನ್ ಅವರ ನಾಟಕವನ್ನು ಆಧರಿಸಿ ಎಸ್.ಸುರೇಂದ್ರನಾಥ ಅವರು ರಚಿಸಿ, ನಿರ್ದೇಶಿಸಿರುವ ಜನ ಶತ್ರು ಎಂಬ ನಾಟಕವನ್ನು ಚಾಮರಾಜನಗರದ ಶಾಂತಲಾ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ.

ಮಾ.31ರಂದು ಬೆಳಗ್ಗೆ 11ಕ್ಕೆ ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಪಾತ್ರ ಎಂಬ ವಿಷಯದ ಕುರಿತು ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಚರ್ಚೆಯನ್ನು ಲೇಖಕಿಯರಾದ ರೂಪ ಹಾಸನರವರು ನಡೆಸಿಕೊಡಲಿದ್ದಾರೆ. ಸಂಜೆ 5.30ಕ್ಕೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಸಿನೆಮಾ ಡೇರ್ ಡೆವಿಲ್ ಮುಸ್ತಫಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಸಿನೆಮಾವನ್ನು ಶಶಾಂಕ ಸೋಗಲ್ ಅವರು ನಿರ್ದೇಶಿಸಿದ್ದು, 100 ಜನ ತೇಜಸ್ವಿಯವರ ಅಭಿಮಾನಿಗಳು ಸೇರಿ ನಿರ್ಮಿಸಿದ್ದಾರೆ. ಸಿನೆಮಾ ಪ್ರದರ್ಶನದ ನಂತರ ನಿರ್ದೇಶಕರಾದ ಶಶಾಂಕ ಸೋಗಲ್ ಅವರು ಸಿನೆಮಾ ಕುರಿತು ಸಂವಾದವನ್ನು ನಡೆಸಿಕೊಡಲಿದ್ದಾರೆ.