5 ದಿನಗಳ ಸ್ವದೇಶಿ ಮೇಳಕ್ಕೆ ವಿಜಯೇಂದ್ರ ಚಾಲನೆ

| Published : Feb 08 2024, 01:31 AM IST

ಸಾರಾಂಶ

ಬೆಂಗಳೂರಿನ ಜಯನಗರದಲ್ಲಿ ಸ್ವದೇಶಿ ಮೇಳ ಆಯೋಜನೆ ಮಾಡಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟನೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ವದೇಶಿ ಜಾಗರಣ ಮಂಚ್ ವತಿಯಿಂದ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ (ಶಾಲಿನಿ ಗ್ರೌಂಡ್) ಐದು ದಿನಗಳ ಬೃಹತ್ ಸ್ವದೇಶಿ ಮೇಳ ಆಯೋಜಿಸಿದ್ದು, ಬುಧವಾರ ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಉದ್ಘಾಟನೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಭಾರತ ಶತಮಾನಗಳ ಹಿಂದೆ ಪೂರ್ಣ ಸ್ವಾವಲಂಬಿ ಹಾಗೂ ಅಭಿವೃದ್ದಿ ಹೊಂದಿರುವ ದೇಶವಾಗಿತ್ತು. ವಿದೇಶೀ ಆಕ್ರಮಣದ ಕಾರಣ ಭಾರತ ಕ್ರಮೇಣ ತನ್ನ ಸ್ವಂತಿಕೆ ಕಳೆದುಕೊಂಡು ಇವತ್ತು ಚಿತ್ರಣ ಸಂಪೂರ್ಣ ಬದಲಾಯಿತು. ಭಾರತ ಹಳ್ಳಿಗಳ ದೇಶ. ಹಳ್ಳಿ ಬೆಳೆದರೆ ಮಾತ್ರ ದೇಶದ ಸಂಪೂರ್ಣ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರ ಮೋದಿ ಅವರು 2047ರ ವೇಳೆ ಭಾರತವನ್ನು ಅಭಿವೃದ್ಧಿ ಹೊಂದಿದ ಬಲಿಷ್ಠ, ಸ್ವಾವಲಂಬಿ ಮತ್ತು ವಿಕಸಿತ ಭಾರತ ಆಗಬೇಕೆಂಬ ಗುರಿ ಮತ್ತು ಕನಸು ಹೊಂದಿದ್ದಾರೆ. ಅದು ನನಸಾಗಿ ಜಗತ್ತಿನ ಶಕ್ತ ರಾಷ್ಟ್ರ ಆಗಬೇಕೆಂದರೆ ಜನಸಾಮಾನ್ಯರಾದ ನಾವು ದೇಸೀ ಉತ್ಪನ್ನಗಳತ್ತ ಹೆಚ್ಚು ಒಲವು ತೋರಿಸಿ ಬಳಸಬೇಕು. ಇದರಿಂದಾಗಿ ಹಳ್ಳಿಯ ಯುವಕರು ಉದ್ಯೋಗ ಹುಡುಕಿ ನಗರದ ಕಡೆ ಬರುವ ಬದಲು ಉದ್ಯೋಗದಾತರಾಗುತ್ತಾರೆ. ಕೃಷಿ ಮತ್ತು ಗ್ರಾಮೀಣ ಕುಸುರಿ ಕಲೆಗೆ ಒತ್ತು ಕೊಟ್ಟು ಹೆಚ್ಚು ಹೆಚ್ಚು ಬಳಕೆ ಶುರು ಮಾಡಿದರೆ ಈ ಮೂಲಕ ಅವರು ಸ್ವಾವಲಂಬಿಗಳಾಗುತ್ತಾರೆ. ಆವಾದ ದೇಶದಲ್ಲಿ ಸಮೃದ್ಧಿ ತಾನೇ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರ ನೀಡುವ ಸೌಲಭ್ಯಗಳು ತಲುಪಿದರೆ ಅವರಿಗೆ ಉದ್ಯಮಕ್ಕೂ ಸಹಾಯವಾಗುತ್ತದೆ ಮತ್ತು ಅವರು ಹೆಚ್ಚು ಉದ್ಯೋಗ ಸೃಷ್ಟಿ ಕಡೆಗೆ ಗಮನ ಹರಿಸುತ್ತಾರೆ. ಇಂಥ ಸ್ವದೇಶಿ ಮೇಳಗಳ ಮೂಲಕ ನಗರವಾಸಿಗಳಲ್ಲೂ ಜಾಗೃತಿ ಮೂಡುತ್ತದೆ. ಜತೆಗೆ ಅನೇಕ ಉತ್ಪನ್ನಗಳಿಗೆ ಮಾರುಕಟ್ಟೆ ಕೂಡ ದೊರಕಿದಂತಾಗುತ್ತದೆ. ಈ ಮೂಲಕ ಸ್ವದೇಶಿ ಉತ್ಪನ್ನದ ಮೇಲೆ ನಮ್ಮವರೇ ಹೂಡಿಕೆ ಮಾಡುವ ಮೂಲಕ ದೇಶದ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಬಲ ಬರುತ್ತದೆ ಎಂದು ವಿಜಯೇಂದ್ರ ತಿಳಿಸಿದರು.

ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ಬ್ರಿಟಿಷರು ಬಿಟ್ಟು ಹೋದ ನಂತರವೂ ನಾವು ಅವರನ್ನು ಅನುಕರಣೆ ಮಾಡುವ ಮೂಲಕ ನಾವೇ ವಿದೇಶಿಯರಾಗಿ ದೇಶಕ್ಕೆ ಅನ್ಯಾಯ ಮಾಡುತ್ತಿದ್ದೇವೆ. ನಾವು ಈ ತಪ್ಪು ಕಲ್ಪನೆಗಳಿಂದ ಹೊರ ಬಂದು ನಮ್ಮತನವನ್ನು ಉಳಿಸಿಕೊಳ್ಳಲು ಮುಂದಾಗಬೇಕು. ಸ್ವದೇಶಿ ಎನುವುದು ಕೇವಲ ವಸ್ತುಗಳಿಗೆ ಸೀಮಿತ ಆಗಬಾರದು; ಅದು ನಮ್ಮ ಪ್ರತಿ ನಡೆಯಲ್ಲೂ ವ್ಯಕ್ತವಾಗಬೇಕಿದೆ. ಪ್ರತಿ ಉತ್ಪನ್ನವೂ ಪರಿಸರ ಸ್ನೇಹಿ ಆಗುವುದು ಅಷ್ಟೇ ಮುಖ್ಯ ಎಂದು ಹೇಳಿದರು.

ನಟಿ ಹಾಗೂ ಮೇಳದ ಸಂಚಾಲಕಿ ತಾರಾ ಅನುರಾಧ ಮಾತನಾಡಿ, ವಿದೇಶಿ ಕಳಪೆ ಸಾಮಗ್ರಿಗಳ ವಿರುದ್ಧ ಸಡ್ಡು ಹೊಡೆಯಲು ಪ್ರಾರಂಭವಾದ್ದು ಸ್ವದೇಶಿ ಜಾಗರಣ ಮಂಚ್.‌ ಇಲ್ಲಿನ ಮೇಳದಲ್ಲಿ ಬರಿಯ ತಿನ್ನೋದು ಉಣ್ಣೋದು ಅಲ್ಲ, ಬದಲಿಗೆ ಜೀವನ ನಡೆಸಲು ಏನೇನು ಬೇಕೋ ಅದನ್ನೆಲ್ಲ ಕಲಿಸುವ ಶಿಬಿರಗಳು ಇದ್ದಾವೆ. ಆರೋಗ್ಯಪೂರ್ಣವಾಗಿ ಬದುಕು ಕಲಿಸುವ ಆಯುರ್ವೇದ, ದಿನ ಬಳಕೆಯ ಉತ್ಪನ್ನ ತಯಾರಿಕಾ ಶಿಬಿರ ಇತ್ಯಾದಿ ಇವೆ. ಎಲ್ಲರೂ ಸ್ವದೇಶಿ ಮೇಳದ ಉಪಯೋಗ ಪಡೆಯಬೇಕು ಎಂದು ಕೋರಿದರು.

ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಸ್ವದೇಶಿ ಚಿಂತಕ ಪ್ರೊ.ಬಿ.ಎಂ.ಕುಮಾರಸ್ವಾಮಿ, ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ, ರಂಗಕರ್ಮಿ ಪ್ರಕಾಶ್‌ ಬೆಳವಾಡಿ, ಸಂಘಟಕರಾದ ಶ್ರೀ ಅಮಿತ್‌ ಅಮರನಾಥ್‌ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.