ಬಿಜೆಪಿ ಸೇರಲು ಸುಮಲತಾಗೆ ವಿಜಯೇಂದ್ರ ಆಹ್ವಾನ

| Published : Mar 30 2024, 12:46 AM IST / Updated: Mar 30 2024, 01:06 PM IST

Sumalatha Ambareesh
ಬಿಜೆಪಿ ಸೇರಲು ಸುಮಲತಾಗೆ ವಿಜಯೇಂದ್ರ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವಂತೆ ಆಹ್ವಾನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವಂತೆ ಆಹ್ವಾನಿಸಿದ್ದಾರೆ.

ಶುಕ್ರವಾರ ಜೆ.ಪಿ.ನಗರದಲ್ಲಿರುವ ಸುಮಲತಾ ಅವರ ನಿವಾಸಕ್ಕೆ ತೆರಳಿದ ವಿಜಯೇಂದ್ರ ಅವರು ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಪಕ್ಷಕ್ಕೆ ಆಹ್ವಾನ ನೀಡಿದರು.ಆದರೆ, ಈ ಬಗ್ಗೆ ತಕ್ಷಣ ತಮ್ಮ ನಿಲುವು ವ್ಯಕ್ತಪಡಿಸದ ಸುಮಲತಾ, ಶನಿವಾರ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಮಂಡ್ಯದಲ್ಲೇ ಮುಂದಿನ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಮಂಡ್ಯ ಸಂಸದರಾಗಿರುವ ಸುಮಲತಾ ಅವರನ್ನು ಭೇಟಿಯಾಗಿ ಮಾತಾಡಬೇಕಾಗಿದ್ದು ರಾಜ್ಯಾಧ್ಯಕ್ಷನಾಗಿ ನನ್ನ ಕರ್ತವ್ಯ. 

ಬದಲಾದ ರಾಜಕೀಯ ಸ್ಥಿತಿಯಲ್ಲಿ ಇವತ್ತು ಸಾಕಷ್ಟು ಬದಲಾವಣೆ ಆಗಿದೆ. ಸುಮಲತಾ ಅವರ ಜೊತೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸುಮಲತಾ ಅವರು ಕೂಡ ಇದಕ್ಕೆ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸುಮಲತಾ ಅವರು ನಮ್ಮ ಜೊತೆ ಇದ್ದು ಕೆಲಸ ಮಾಡುತ್ತಾರೆ. ಅವರಿಗೆ ತಾತ್ಕಾಲಿಕವಾಗಿ ಹಿನ್ನಡೆ ಆಗಿರಬಹುದು. ಆದರೆ, ಭವಿಷ್ಯದಲ್ಲಿ ಅವರಿಗೆ ಪ್ಲಸ್ ಆಗುತ್ತದೆ. ನಾನು ಸಲಹೆ ನೀಡಿದ್ದೇನೆ. 

ಅವರು ಒಳ್ಳೆ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಮೋದಿಯವರಿಗೆ ಶಕ್ತಿ ತುಂಬುವ ಕೆಲಸ ಅವರು ಖಂಡಿತ ಮಾಡುತ್ತಾರೆ. ಸ್ವಲ್ಪ ದಿನದಲ್ಲೇ ಎಲ್ಲ ಗೊತ್ತಾಗುತ್ತದೆ ಎಂದರು.

ನಂತರ ಮಾತನಾಡಿದ ಸುಮಲತಾ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರು ನಮ್ಮ ಮನೆಗೆ ಬಂದು ಸುಮಾರು ಒಂದು ಗಂಟೆ ಕಾಲ ಮಾತನಾಡಿ ತಮ್ಮ ಭಾವನೆಗಳನ್ನು ಹೇಳಿದ್ದಾರೆ. 

ಪಕ್ಷಕ್ಕೆ ನೀವು ಸೇರ್ಪಡೆಯಾಗಬೇಕು ಎಂಬುದಾಗಿ ಹೇಳಿದರು. ಶನಿವಾರ ಮಂಡ್ಯದಿಂದ ನನ್ನ ಬೆಂಬಲಿಗರು ಬರಲಿದ್ದಾರೆ. ಅವರ ಭಾವನೆಯನ್ನೂ ಕೇಳುವುದು ನನ್ನ ಕರ್ತವ್ಯ. ಕಾರ್ಯಕರ್ತರ ಭಾವನೆ ಕೇಳಿ ಮಂಡ್ಯದಲ್ಲಿ ನಿಲುವನ್ನು ತಿಳಿಸುತ್ತೇನೆ ಎಂದರು.