ಧಾರವಾಡ:
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಮಂಗಳವಾರ ಬಿಜೆಪಿ ನಡೆಸಿದ ಪ್ರತಿಭಟನಾರ್ಥ ಹಾಕಲಾಗಿದ್ದ ಯಾವ ಬ್ಯಾನರ್‌ಗಳಲ್ಲೂ ಪಕ್ಷದ ರಾಜ್ಯಾಧ್ಯಕ್ಷರ ಭಾವಚಿತ್ರ ಇಲ್ಲದಿರುವುದು ತೀವ್ರ ಅಚ್ಚರಿ ಮೂಡಿಸಿದೆ.ಉದ್ಯೋಗಾರ್ಥಿಗಳ ಪರವಾಗಿ ಬಿಜೆಪಿಯಿಂದಲೇ ಹೋರಾಟಕ್ಕೆ ಕರೆ ನೀಡಲಾಗಿತ್ತು. ಶ್ರೀನಗರ ವೃತ್ತದಿಂದ ಜಯನಗರ ಮಾರ್ಗವಾಗಿ ಮಿಚಗಿನ್ ಕಾಂಪೌಂಡ್ ವರೆಗೂ ಸುಮಾರು 40ಕ್ಕೂ ಹೆಚ್ಚು ಕಡೆಗಳಲ್ಲಿ ಬ್ಯಾನರ್ ಅಳವಡಿಸಲಾಗಿತ್ತು. ಬ್ಯಾನರ್‌ಗಳಲ್ಲಿ ಮೇಲುಗಡೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಭಾವಚಿತ್ರಗಳಿವೆ. ಹಾಗೆಯೇ, ಕೆಳ ಭಾಗದಲ್ಲಿ ಎಡಗಡೆ ಶಾಸಕ ಅರವಿಂದ ಬೆಲ್ಲದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾವಚಿತ್ರಗಳನ್ನು ದೊಡ್ಡ ಅಳತೆಯಲ್ಲಿವೆ. ಆದರೆ, ಈ ಯಾವ ಬ್ಯಾನರ್‌ಗಳಲ್ಲೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಭಾವಚಿತ್ರ ಇಲ್ಲದಿರುವುದು ಅವರ ಅಭಿಮಾನಿಗಳನ್ನು ಇದೀಗ ಕೆರಳಿಸಿದೆ.
ಪಕ್ಷದ ಅಧಿಕೃತವಾದ ದೊಡ್ಡ ಹೋರಾಟ ಇದಾಗಿತ್ತು. ಇಂತಹ ಹೋರಾಟದಲ್ಲಿ ಉದ್ದೇಶಪೂರ್ವಕವಾಗಿಯೇ ಶಾಸಕ ಅರವಿಂದ ಬೆಲ್ಲದ ಅವರು ರಾಜ್ಯಾಧ್ಯಕ್ಷರ ಭಾವಚಿತ್ರ ಕೈ ಬಿಟ್ಟಿದ್ದಾರೆ. ಉದ್ಯೋಗಾರ್ಥಿಗಳ ಹೋರಾಟದಲ್ಲಿ ಭಾಗವಹಿಸಲು ಹೋಗಿ ಮುಖಭಂಗ ಅನುಭವಿಸಿದ್ದಲ್ಲದೇ, ಇದೀಗ ರಾಜ್ಯಾಧ್ಯಕ್ಷರ ಭಾವಚಿತ್ರ ಕೈ ಬಿಟ್ಟಿರುವುದಕ್ಕೆ ಪಕ್ಷಕ್ಕೆ ಆದ ದೊಡ್ಡ ಹಿನ್ನಡೆ ಎಂದು ಬಿ.ವೈ. ವಿಜಯೇಂದ್ರ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.