ಗೋಕರ್ಣ ಮಹಾಬಲೇಶ್ವರ ಮಂದಿರದ ವಿಜಯೋತ್ಸವ

| Published : Oct 13 2024, 01:07 AM IST

ಸಾರಾಂಶ

ಗೋಕರ್ಣ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದ ವಿಜಯೋತ್ಸವ ವಿಜಯದಶಮಿ ದಿನವಾದ ಶನಿವಾರ ಸಂಜೆ ರೂಢಿಗತ ಪರಂಪರೆಯಂತೆ ನಡೆಯಿತು. ಶ್ರೀದೇವರ ಉತ್ಸವ ರಥಬೀದಿ ಮೂಲಕ ಗಂಜೀಗದ್ದೆ ಮಾರ್ಗವಾಗಿ ಭದ್ರಕಾಳಿ ಮಂದಿರಕ್ಕೆ ತೆರಳಿ ಪೂಜೆ ಸ್ವೀಕರಿಸಿತು. ಬಳಿಕ ಸಮೀಪದಲ್ಲಿರುವ ಬನ್ನಿಕಟ್ಟೆಗೆ ಆಗಮಿಸಿ ಬನ್ನಿ ಪೂಜೆ ನಡೆಯಿತು.

ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದ ವಿಜಯೋತ್ಸವ ವಿಜಯದಶಮಿ ದಿನವಾದ ಶನಿವಾರ ಸಂಜೆ ರೂಢಿಗತ ಪರಂಪರೆಯಂತೆ ನಡೆಯಿತು.

ಶ್ರೀದೇವರ ಉತ್ಸವ ರಥಬೀದಿ ಮೂಲಕ ಗಂಜೀಗದ್ದೆ ಮಾರ್ಗವಾಗಿ ಭದ್ರಕಾಳಿ ಮಂದಿರಕ್ಕೆ ತೆರಳಿ ಪೂಜೆ ಸ್ವೀಕರಿಸಿತು. ಬಳಿಕ ಸಮೀಪದಲ್ಲಿರುವ ಬನ್ನಿಕಟ್ಟೆಗೆ ಆಗಮಿಸಿ ಬನ್ನಿ ಪೂಜೆ ನಡೆಯಿತು. ಬಳಿಕ ಬನ್ನಿಯನ್ನು ಭಕ್ತರಿಗೆ ನೀಡಲಾಯಿತು. ಮೃಗ ಬೇಟೆ ನಡೆಸಿ ಮುಂಡಬಸವ ದೇವಾಲಯ ದಾಟಿ ಸಾಗುವ ಮೂಲಕ ಸೀಮೋಲ್ಲಂಘನ ನಡೆಯಿತು. ಆನಂತರ ಚೌಡಿಕಟ್ಟೆಯಲ್ಲಿ ಕುಳಿತು ವಿಶೇಷ ಪೂಜೆ ಸ್ವೀಕರಿಸಿತು. ಪಕ್ಕದ ಜಾಗದವರಾದ ಉದ್ಯಮಿ ಮಯೂರ್ ನಾಯಕ ಕುಟುಂಬದವರು, ಶ್ರೀರಾಚಂದ್ರಾಪುರ ಮಠದವರು ವಾರ್ಷಿಕ ಪೂಜೆ ನೀಡಿದರು. ಅದರಂತೆ ಈ ಭಾಗದ ಜನರು ಹಣ್ಣು ಕಾಯಿ ಸೇವೆ ಸಮರ್ಪಸಿದರು. ಬಳಿಕ ಶ್ರೀದೇವರ ಉತ್ಸವ ತಾಮ್ರಗೌರಿ ಮಂದಿರಕ್ಕೆ ತೆರಳಿ ಪೂಜೆ ಸ್ವೀಕರಿಸಿ ಮಂದಿರಕ್ಕೆ ಮರಳಿತು. ಅರ್ಚಕರಾದ ವೇ. ಶ್ರೀನಿವಾಸ ಅಡಿ ಪೂಜಾ ಕೈಂಕರ್ಯ ನೆರವೇರಿಸಿದರು. ಮಂದಿರದ ಮೇಲುಸ್ತುವಾರಿ ಸಮಿತಿ ಮಾರ್ಗದರ್ಶನದಲ್ಲಿ ನಡೆದ ಉತ್ಸವದಲ್ಲಿ ಮಂದಿರದ ಸಮಿತಿ ಸದಸ್ಯರು, ವ್ಯವಸ್ಥಾಪಕರು, ಸಿಬ್ಬಂದಿ, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಪಕ್ಕೆ, ಪರಾಕು, ವಾದ್ಯಘೋಷ ಉತ್ಸವಕ್ಕೆ ಮೆರಗು ತಂದಿತ್ತು.

ಮಾರಿಗುಡಿಗೆ ಹರಿದು ಬಂದ ಭಕ್ತ ಸಾಗರ

ರಾಜ್ಯದ ಶಕ್ತಿಪೀಠಗಳಲ್ಲೊಂದಾಗ ನಗರದ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ನವರಾತ್ರಿಯ ವಿಜಯದಶಮಿ ಪ್ರಯುಕ್ತ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿ, ಕೃತಾರ್ಥರಾದರು.

ಹೂವಿನಿಂದ ಅಲಂಕಾರಗೊಂಡ ಶಿರಸಿಯ ಮಾರಮ್ಮನನ್ನು ನೋಡಲು ಮುಂಜಾನೆಯಿಂದ ರಾತ್ರಿಯ ವರೆಗೂ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತಾರು ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.ಭಕ್ತಾದಿಗಳ ಪೂಜೆಗೆ ಅನುಕೂಲವಾಗುವಂತೆ ಸಕಲ ವ್ಯವಸ್ಥೆಯನ್ನು ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿಯಿಂದ ಕಲ್ಪಿಸಲಾಗಿತ್ತು. ಸಾವಿರಾರು ಭಕ್ತರು ಮಧ್ಯಾಹ್ನದ ಅನ್ನಪ್ರಸಾದ ಸ್ವೀಕರಿಸಿದರು.