ಸಾರಾಂಶ
ಭಟ್ಕಳ: ಶಕ್ತಿ ಕ್ಷೇತ್ರಗಳಲ್ಲೊಂದಾದ ತಾಲೂಕಿನ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜ. 14 ಮತ್ತು 15ರಂದು 6ನೇ ಮಾರಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಜ. 14ರಂದು ಬೆಳಿಗ್ಗೆ ೮ ಗಂಟೆಗೆ ಮಾರಿಕಾಂಬಾ ಮೂರ್ತಿ ಪ್ರತಿಷ್ಠಾಪನೆ, ಪೂರ್ವಾಹ್ನ ೧೧ ಗಂಟೆಗೆ ಚಿತ್ರಾಪುರದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶ್ರೀ ಮಾರಿಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮ ಎಂ. ಮೊಗೇರ ವಹಿಸುವರು.ಮುಖ್ಯ ಅತಿಥಿಗಳಾಗಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ತಿಮ್ಮಪ್ಪ ನಾರಾಯಣ ಹೊನ್ನಿಮನೆ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ೧೨ ಗಂಟೆಗೆ ಮಹಾ ಮಂಗಳಾರತಿ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬ ಗಂಟೆಗೆ ಗೋಕರ್ಣ ಪರ್ತಗಾಳಿಯ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶ್ರೀ ಮಾರಿಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮ ಎಂ. ಮೊಗೇರ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸುನೀಲ ಬಿ. ನಾಯ್ಕ, ಅತಿಥಿಗಳಾಗಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ಜಿ. ದೈಮನೆ, ಶಿರಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ದೈಮನೆ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ರಾತ್ರಿ ೮.೩೦ ಗಂಟೆಗೆ ಮಹಾಮಂಗಳಾರತಿ, ೯.೩೦ ಗಂಟೆಗೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಸುಂಕದಕಟ್ಟೆ ಇವರಿಂದ ಯಕ್ಷಗಾನ ಬಯಲಾಟ ಸಂಪೂರ್ಣ ದೇವಿ ಮಹಾತ್ಮೆ ನಡೆಯಲಿದೆ.ಜ. ೧೫ರಂದು ಬೆಳಗ್ಗೆ ೧೦ ಗಂಟೆಗೆ ಶ್ರೀರಾಮ ಕ್ಷೇತ್ರ ಧರ್ಮಸ್ಥಳದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ನೆರವೇರಿಸುವರು. ಅಧ್ಯಕ್ಷತೆಯನ್ನು ಶ್ರೀ ಮಾರಿಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮ ಎಂ. ಮೊಗೇರ ವಹಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಜೆ.ಡಿ. ನಾಯ್ಕ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಹನುಮಂತ ಎಂ. ನಾಯ್ಕ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ೫ ಗಂಟೆಗೆ ಶ್ರೀ ಮಾರಿಕಾಂಬಾ ಮೂರ್ತಿಯ ಬೃಹತ್ ವಿಸರ್ಜನಾ ಮೆರವಣಿಗೆ ಅಳ್ವೆಕೋಡಿಯಿಂದ ಸಣಬಾವಿ, ಯಕ್ಷೆಮನೆ ಮಾರ್ಗವಾಗಿ ಮಾವಿನಕಟ್ಟೆ ರಾಷ್ಟ್ರೀಯ ಹೆದ್ದಾರಿ ಮೂಲಕ ಶಿರಾಲಿ ಗುಡಿಹಿತ್ತಲ್ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಸಾಗಿ ಮಾರಿಕಾಂಬಾ ಮೂರ್ತಿಯ ವಿಸರ್ಜನೆ ಭೀಮಾ ನದಿಯಲ್ಲಿ ನಡೆಯಲಿದೆ. ಎರಡೂ ದಿನವೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.ಮಾರಿಜಾತ್ರೆಯ ಹಿನ್ನೆಲೆ ಅಳ್ವೆಕೋಡಿಯಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ನೂರಾರು ಸ್ವಯಂ ಸೇವಕರು, ದೇವಸ್ಥಾನದ ಆಡಳಿತ, ಮಾರಿಜಾತ್ರಾ ಸಮಿತಿಯವರು ಜಾತ್ರಾ ಯಶಸ್ಸಿಗೆ ಕೆಲಸ ಮಾಡುತ್ತಿದ್ದು, ಮಾರಿಜಾತ್ರೆಗೆ ಭಕ್ತರಿಗೆ ಅನುಕೂಲವಾಗಲು ಅಚ್ಚುಕಟ್ಟಿನ ವ್ಯವಸ್ಥೆ ಕೈಗೊಳ್ಳಲಾಗಿದೆ.