ಕರ್ಜಗಿಯಲ್ಲಿ ವಿಜೃಂಭಣೆ ಬ್ರಹ್ಮಲಿಂಗೇಶ್ವರ ಕಾರಹುಣ್ಣಿಮೆ ಮಹೋತ್ಸವ

| Published : Jun 28 2024, 12:54 AM IST

ಕರ್ಜಗಿಯಲ್ಲಿ ವಿಜೃಂಭಣೆ ಬ್ರಹ್ಮಲಿಂಗೇಶ್ವರ ಕಾರಹುಣ್ಣಿಮೆ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಕಾರಹುಣ್ಣಿಮೆ ವೈಭವ ಎಂದೇ ಖ್ಯಾತಿ ಪಡೆದಿರುವ ಶ್ರೀ ಗುರುವಾರ ವಿಜೃಂಭಣೆ ಹಾಗೂ ಹಲವು ಸಂಪ್ರದಾಯಗಳ ಬದ್ಧವಾಗಿ ನಡೆಯಿತು.

ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಕಾರಹುಣ್ಣಿಮೆ ವೈಭವ ಎಂದೇ ಖ್ಯಾತಿ ಪಡೆದಿರುವ ಶ್ರೀ ಗುರುವಾರ ವಿಜೃಂಭಣೆ ಹಾಗೂ ಹಲವು ಸಂಪ್ರದಾಯಗಳ ಬದ್ಧವಾಗಿ ನಡೆಯಿತು.ಗ್ರಾಮದ ವಿಶಿಷ್ಟ ಕಾರಹುಣ್ಣಿಮೆ ಹಬ್ಬದ ಮೊದಲ ದಿನ ಮಂಗಳವಾರ ಹೊನ್ನುಗ್ಗಿ, ಬುಧವಾರ ದೊಡ್ಡಬಂಡಿ ಉತ್ಸವ, ಗುರುವಾರ ಕರಕ್ಕಿ ಬಂಡಿ ಉತ್ಸವ ಅದ್ಧೂರಿಯಾಗಿ ನಡೆದವು. ಗುರುವಾರ ಬೆಳಗ್ಗೆ ನಡೆದ ಸಣ್ಣ ಬಂಡಿ ಓಟಕ್ಕೆ ಸಣ್ಣ ಕರುಗಳನ್ನು ಹೂಡಲಾಗಿತ್ತು. ಅತ್ಯಾಕರ್ಷಕ ಅಲಂಕೃತ ಸಣ್ಣ ಎತ್ತುಗಳು ಓಡುವ ನೋಟ ಎಲ್ಲರ ಗಮನ ಸೆಳೆಯಿತು. ದೊಡ್ಡ ಎತ್ತುಗಳನ್ನು ಹೂಡಿ ಓಡಿಸುವ ಬಂಡಿಗೆ ದುಂಡಿತತ್ತರ ಬಂಡಿ ಎನ್ನಲಾಗುತ್ತದೆ. ಈ ಬಂಡಿ ಮಧ್ಯಾಹ್ನ ನಡೆಯಿತು. ವಿವಿಧ ಬಗೆಯ ಎತ್ತುಗಳನ್ನು ಕಟ್ಟಿ ಓಡಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೆರವಣಿಗೆ ನಡೆಯಿತು. ಆಗ ಯುವಕರು ಕುಣಿದು ಕುಪ್ಪಳಿಸಿದರು.ಸಂಜೆ ವಿವಿಧ ವಸ್ತುಗಳಿಂದ ಅಲಂಕರಿಸಿದ ಎತ್ತುಗಳ ಆಕರ್ಷಕ ಮೆರವಣಿಗೆ ನಡೆಯಿತು. ಬಳಿಕ ಕಿರಕ್ಕಿಬಟ್ಟು ಎಂದು ಕರೆಯಲ್ಪಡುವ ಕೊನೆಯ ಎರಡು ಬಂಡಿಗಳ ಓಟ ಆಕರ್ಷಣೀಯವಾಗಿತ್ತು. ಬಂಡಿಯನ್ನು ಎಳೆದುಕೊಂಡು ಎತ್ತುಗಳು ಓಡುತ್ತಿದ್ದರೆ ಇನ್ನೊಂದಡೆ ಯುವಕರು ಕೇಕೆ ಶಿಳ್ಳೆ ಹಾಕುತ್ತ ಬಂಡಿಯ ವೇಗ ಹೆಚ್ಚಿಸಲು ಎತ್ತುಗಳನ್ನು ಹುರಿದುಂಬಿಸುತ್ತಿದ್ದ ದೃಶ್ಯ ನಿಬ್ಬೆರಗಾಗುವಂತೆ ಮಾಡಿತು.ಬೆಳಗ್ಗೆಯಿಂದ ರಾತ್ರಿ ೧೦ರ ವರೆಗೂ ಶ್ರೀಬ್ರಹ್ಮದೇವರಿಗೆ ಭಕ್ತರಿಗೆ ಹಣ್ಣು-ಕಾಯಿ ಸೇವೆ ನಡೆಯಿತು. ಬೇರೆ ಬೇರೆ ಭಾಗದಿಂದ ಭಕ್ತರು ಆಗಮಿಸಿದ್ದರು. ನಂತರ ರಾತ್ರಿ ಬ್ರಹ್ಮದೇವರಿಗೆ ಹೂರಣ, ತುಪ್ಪ ಉಣ್ಣಿಸುವ ಕಾರ್ಯಕ್ರಮ ವೈಭವದಿಂದ ನಡೆಯಿತು. ವೀರಗಾರರು ಕಣ್ಣಿಗೆ ಬಟ್ಟೆ ಕಟ್ಟಿ ದೇವರಿಗೆ ಹೂರಣ ತಿನ್ನಿಸುವುದು ಇದರ ವಿಶೇಷ. ಹೂರಣ ನೈವೇದ್ಯ ನೀಡುವ ಮೂಲಕ ಹಬ್ಬದ ಸಂಭ್ರಮ ತೆರೆ ಕಂಡಿತು. ಕರ್ಜಗಿಯಲ್ಲಿ ಬಂಡಿ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು: ಕಾರಹುಣ್ಣಿಮೆಯ ಬಂಡಿ ಓಟದ ವೇಳೆ ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟ ದುರ್ಘಟನೆ ಗುರುವಾರ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ.ಮಲ್ಲ‌ಪ್ಪ ಕಳ್ಳಿಹಾಳ (34) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಸಂಭ್ರಮದಿಂದ ಕಾರಹುಣ್ಣಿಮೆ ಹಬ್ಬ ನಡೆಯುತ್ತಿತ್ತು, ಹಬ್ಬದ ಕೊನೆಯ ದಿನವಾದ ಗುರುವಾರ ಕರಕ್ಕಿ ಬಂಡಿ ವೇಳೆ ವ್ಯಕ್ತಿಯ ಹೊಟ್ಟೆಯ ಮೇಲೆ ಬಂಡಿಯ ಚಕ್ರ ಹರಿದು ಈ ದುರ್ಘಟನೆ ನಡೆದಿದೆ.

ಕೂಡಲೇ ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದರೂ ಮಾರ್ಗ ಮಧ್ಯೆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಾವೇರಿ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.