ವಿಕಾಸ ಬ್ಯಾಂಕ್‌ ಸದೃಢವಾಗಿ ಬೆಳೆದಿದೆ: ಕೊಟ್ಟೂರು ಬಸವಲಿಂಗ ಶ್ರೀ

| Published : Nov 03 2025, 02:30 AM IST

ವಿಕಾಸ ಬ್ಯಾಂಕ್‌ ಸದೃಢವಾಗಿ ಬೆಳೆದಿದೆ: ಕೊಟ್ಟೂರು ಬಸವಲಿಂಗ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಸಂಸ್ಥೆಗಳನ್ನು ಕಟ್ಟುವಾಗ ಸಮಾಜದ ಚಿಂತನೆ ಹಾಗೂ ದೃಷ್ಟಿಯೊಂದಿಗೆ ಬೆಳೆಸಬೇಕು.

ಹೊಸಪೇಟೆ: ಯಾವುದೇ ಸಂಸ್ಥೆಗಳನ್ನು ಕಟ್ಟುವಾಗ ಸಮಾಜದ ಚಿಂತನೆ ಹಾಗೂ ದೃಷ್ಟಿಯೊಂದಿಗೆ ಬೆಳೆಸಬೇಕು. ಬೆಳೆದ ಸಂಸ್ಥೆ ಮುಂದಾಲೋಚನೆಯೊಂದಿಗೆ ಮುನ್ನಡೆಯಬೇಕು ಎಂದು ಸ್ಥಳೀಯ ಕೊಟ್ಟೂರು ಸ್ವಾಮಿ ಮಠದ ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.

ಹೊಸಪೇಟೆಯ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ತನ್ನ ಸ್ವಂತ ನೂತನ ಕಟ್ಟಡ ಹೊಸಪೇಟೆ ಶಾಖೆ, ಪ್ರಧಾನ ಕಚೇರಿ ಸೇರಿದಂತೆ ವಸತಿಗೃಹವನ್ನು ಶನಿವಾರ ಲೋಕಾರ್ಪಣೆ ಮಾಡಿ ಆರ್ಶೀವಚನ ನೀಡಿದ ಶ್ರೀಗಳು, ಆರಂಭದಲ್ಲಿ ಇರುವ ಉತ್ಸಾಹವನ್ನು ಮರೆತುಬಿಟ್ಟು ಸಂಸ್ಥೆಯನ್ನು ಸದೃಢವಾಗಿ ಬೆಳೆಸುವ ಬದಲು ಕೇವಲ ಲಾಭದ ಕಡೆ ಗಮನ ನೀಡುತ್ತಿದ್ದಾರೆ. ಲಾಭವನ್ನು ಆರ್ಥಿಕ ಶಿಸ್ತಿನೊಂದಿಗೆ ಬಳಸುವ ಬದಲು ಮನಸ್ಸೋ ಇಚ್ಛೆ ವಿನಿಯೋಗಿಸುವ ಮೂಲಕ ಸಂಸ್ಥೆಗಳ ಅವನತಿಗೆ ಕಾರಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿಕಾಸ ಬ್ಯಾಂಕ್ ಆಡಳಿತ ಮಂಡಳಿಯ ನಿರ್ವಹಣೆ ಸಾಮಾಜಿಕ ಕ್ಷೇತ್ರದಲ್ಲಿ ತೋರಿದ ಸಾಧನೆಯಂತೆ ಆರ್ಥಿಕ ಕ್ಷೇತ್ರದಲ್ಲಿಯೂ ತನ್ನತನವನ್ನು ತೋರುತ್ತಿದೆ. ಜೊತೆಗೆ ಆರ್ಥಿಕ ಶಿಸ್ತು ಮೈಗೂಡಿಸಿಕೊಂಡಿದೆ. ಸಂಸ್ಥೆಗಳು ಎಂತಹ ಸಂಕಷ್ಟದ ಸ್ಥಿತಿಯನ್ನು ಬೇಕಾದರೂ ಎದುರಿಸಿ ಮೆಟ್ಟಿ ನಿಲ್ಲಬಹುದು ಎನ್ನುವುದಕ್ಕೆ ವಿಕಾಸ ಬ್ಯಾಂಕ್ ಸಾಕ್ಷಿಯಾಗಿದೆ ಎಂದರು.

ಗೋದ್ರೇಜ್ ಕಂಪನಿಯ ಮುಖ್ಯಸ್ಥ ಪರ್ಶಿ ಮಾಸ್ಟರ್ ಬಹದ್ದೂರ ಮಾತನಾಡಿ, ವಿಕಾಸ ಅಭಿವೃದ್ಧಿಯ ಸಂಕೇತ. ಇಂತಹ ಹೆಸರಿನೊಂದಿಗೆ ಕಾರ್ಯಾರಂಭ ಮಾಡಿದ ವಿಕಾಸ ಬ್ಯಾಂಕ್‌ ಸದೃಢವಾಗಿ ಬೆಳೆದಿದೆ. ಹೊಸತನ ಕೊಡುವ ಜೊತೆಗೆ ಆರ್ಥಿಕ ಶಿಸ್ತಿನೊಂದಿಗೆ ಮುನ್ನಡೆಯಲು ಮುಂದಾಗಿದ್ದು, ಗೋದ್ರೆಜ್ ಸಂಸ್ಥೆ ಎಲ್ಲ ಹಂತದ ಸಹಕಾರ ನೀಡಲಿದೆ ಎಂದರು.

ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಮಾತನಾಡಿ, ಭವ್ಯ ಕೇಂದ್ರ ಕಚೇರಿ ಸೇರಿದಂತೆ ದಕ್ಷಿಣ ಭಾರತದ ಪ್ರಥಮ ಡಿಜಿಟಲ್ ವಾಲ್ಟ್ ಲಾಕರ್, ಮಳೆ ನೀರು ಕೊಯ್ಲು, ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದನೆ, ಸಿಬ್ಬಂದಿಯ ವಿಶ್ರಾಂತಿ ಸೇರಿದಂತೆ ನಿರಂತರ ತರಬೇತಿಯ ದೃಷ್ಟಿಯಿಂದ ಕಟ್ಟಡ ವಿನ್ಯಾಸಗೊಳಿಸಿ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವ ದೃಷ್ಟಿಕೊನದಿಂದ ಇಂದು ನೂತನ ಕಟ್ಟಡ ಲೋಕಾರ್ಪಣೆಗೊಂಡಿದೆ. ಇದು ನಮ್ಮ ಸೇವೆಯ ಸಾರ್ಥಕತೆಗೆ ಸಾಕ್ಷಿಯಾಗಿದೆ ಎಂದರು.

ಮಾಜಿ ಸಚಿವ ಆನಂದ ಸಿಂಗ್, ಬ್ಯಾಂಕ್ ಆಡಳಿತ ಮಂಡಳಿಯ ಸಲಹೆಗಾರರಾದ ಬಿ.ಜೆ. ಕುಲಕರ್ಣಿ, ನಿರ್ದೇಶಕರಾದ ಛಾಯಾ ದಿವಾಕರ, ರಮೇಶ್ ಪುರೋಹಿತ್, ಎಂ.ವೆಂಕಪ್ಪ, ಸಿ.ಎಸ್. ಸೊಪ್ಪಮಠ, ರಾಜೇಶ್ ಹಿರೇಮಠ, ಅಕ್ಕಿ ಮಲ್ಲಿಕಾರ್ಜನ, ಗಂಗಾಧರ ಪತ್ತಾರ, ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ, ಬಿ.ಎಲ್. ರಾಣಿ ಸಂಯುಕ್ತ, ಅಯ್ಯಾಳಿ ತಿಮ್ಮಪ್ಪ, ಸಾಲಿ ಸಿದ್ದಯ್ಯಸ್ವಾಮಿ ಹಾಗೂ ಗಣ್ಯರು ಪಾಲ್ಗೊಂಡಿದ್ದರು.