ವಿಕಾಸ ಅರ್ಬನ್ ಕೋ ಆಪ್ ಬ್ಯಾಂಕ್ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ₹೭೩ ಲಕ್ಷ ನಿವ್ವಳ ಲಾಭ ಗಳಿಸಿ ಉತ್ತಮ ಸಾಧನೆ ಮಾಡಿದೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ವಿಕಾಸ ಅರ್ಬನ್ ಕೋ ಆಪ್ ಬ್ಯಾಂಕ್ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ₹೭೩ ಲಕ್ಷ ನಿವ್ವಳ ಲಾಭ ಗಳಿಸಿ ಉತ್ತಮ ಸಾಧನೆ ಮಾಡಿದೆ. ೧೧,೦೨೭ ಸದಸ್ಯರನ್ನು ಹೊಂದಿದ ನಮ್ಮ ಬ್ಯಾಂಕು ೯೮೯.೭೬ ಲಕ್ಷ ಶೇರು ಬಂಡವಾಳವನ್ನು ಹೊಂದಿದೆ. ಅಲ್ಲದೇ ₹೧೧೪೫.೮೩ ಲಕ್ಷ ಕಾಯ್ದಿಟ್ಟ ನಿಧಿಯನ್ನು ಇಟ್ಟಿದ್ದು, ₹೨೦೪೨೮.೯೮ ಲಕ್ಷ ಠೇವಣಿ ಹೊಂದಿದ್ದೇವೆ. ಕಳೆದ ಸಾಲಿಗಿಂತಲೂ ಶೇ.೧೩.೩೭ರಷ್ಟು ಹೆಚ್ಚಿನ ಸಾಧನೆ ಮಾಡಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮುರಳಿಕೃಷ್ಣ ಎಂ.ಹೆಗಡೆ ಹೇಳಿದರು.

ಸೋಮವಾರ ಪಟ್ಟಣದ ವಿಕಾಸ ಅರ್ಬನ್ ಕೋ ಆಪ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಬ್ಯಾಂಕಿನ ಪ್ರಗತಿಯ ಮಾಹಿತಿ ನೀಡಿದರು.

₹೧೬೯೯೩.೩೨ ಲಕ್ಷ ಸಾಲ ನೀಡಲಾಗಿದೆ. ₹೪೪೫೪.೯೫ ಲಕ್ಷಗಳನ್ನು ಗುಂತಾವಣೆ ಇಡಲಾಗಿದೆ. ವಿಶೇಷವಾಗಿ ₹೨೨೯೮೮.೮೨ ಲಕ್ಷ ದುಡಿಯುವ ಬಂಡವಾಳ ಹೊಂದಿದ್ದೇವೆ. ಸಾಲ ವಸೂಲಾತಿ ಪ್ರಮಾಣ ಕೂಡ ೯೨.೬೦, ಎನ್.ಪಿ.ಎ ಕೂಡ ೭.೨೭ರಷ್ಟಿದೆ ಎಂದು ವಿವರಿಸಿದರು.

ಯಲ್ಲಾಪುರದಲ್ಲಿ ಪ್ರಧಾನ ಕಚೇರಿ ಹೊಂದಿದ ನಮ್ಮ ಬ್ಯಾಂಕು ಪಟ್ಟಣದಲ್ಲಿ ೨ ಶಾಖೆಯನ್ನು, ಶಿರಸಿಯಲ್ಲಿ ಒಂದು ಶಾಖೆ ಹೊಂದಿದ್ದು, ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಕೋರ್ ಬ್ಯಾಂಕಿಂಗ್ ಎಲ್ಲ ಶಾಖೆಗಳಲ್ಲೂ ಅಳವಡಿಸಲಾಗಿದೆ. ಅಲ್ಲದೇ ಯುಟಿಲಿಟಿ ತಂತ್ರಾಂಶಗಳನ್ನು ಅಳವಡಿಸಿ, ಎ.ಟಿ.ಎಂ, ಸಿ.ಡಿ.ಎಂ, ಇ-ಕಾಮರ್ಸ್, ಪಿಓಎಸ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಸೇವೆ ನೀಡುತ್ತಿದೆ ಎಂದರು.

ಈ ಸಂದರ್ಭ ಉಪಾಧ್ಯಕ್ಷ ನರಸಿಂಹ ಎಸ್.ಭಟ್ಟ, ನಿರ್ದೇಶಕರಾದ ಡಿ.ಶಂಕರ ಭಟ್ಟ, ಸದಾನಂದ ಭಟ್ಟ, ರಾಜೇಂದ್ರ ಬದ್ದಿ, ಲೋಕೇಶ ಗಿಡ್ಡನ್, ರವಿ ಹುಳಸೆ, ವಿಜಯಶ್ರೀ ವೈದ್ಯ, ಪ್ರಿಯಾ ಗಾಂವ್ಕರ ಮತ್ತು ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ ಬಿಳಗಿಕರ್ ಉಪಸ್ಥಿತರಿದ್ದರು.