ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ವಿಕಸಿತ ಭಾರತ ಜಿ-ರಾಮ್-ಜಿ ಮಸೂದೆ 2025ನ್ನು ಖಂಡಿಸಿ ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಮುಂದುವರೆಸುವಂತೆ ಆಗ್ರಹಿಸಿ ಹಾವೇರಿ ಜಿಲ್ಲಾ ಸಂಯುಕ್ತ ಸಂಘಟನೆಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಹಾವೇರಿ: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ವಿಕಸಿತ ಭಾರತ ಜಿ-ರಾಮ್-ಜಿ ಮಸೂದೆ 2025ನ್ನು ಖಂಡಿಸಿ ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಮುಂದುವರೆಸುವಂತೆ ಆಗ್ರಹಿಸಿ ಹಾವೇರಿ ಜಿಲ್ಲಾ ಸಂಯುಕ್ತ ಸಂಘಟನೆಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಮುರುಘರಾಜೇಂದ್ರ ಮಠದಿಂದ ಸೋಮವಾರ ಪ್ರತಿಭಟನೆ ಪಾದಯಾತ್ರೆ ನಡೆಸಿದ ಕಾರ್ಯಕರ್ತರು ಹೊಸಮನಿ ಸಿದ್ದಪ್ಪ ವೃತ್ತದ ಮಾರ್ಗವಾಗಿ ತಾಲೂಕು ಪಂಚಾಯಿತಿ ಆವರಣವನ್ನು ತಲುಪಿದರು. ತಾಪಂ ಆವರಣದಲ್ಲಿರುವ ಸಂಸದರ ಜನ ಸಂಪರ್ಕ ಕಚೇರಿ ಎದುರು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಸಂಘಟನೆ ಮುಖಂಡ ನವೀನ್ ಹುಲ್ಲತ್ತಿ, ದೇಶದಲ್ಲಿ ರೈತರು ಹಾಗೂ ಕೂಲಿಕಾರ್ಮಿಕರು ಒಂದೇ ನಾಣ್ಯದ ಎರಡು ಮುಖಗಳಾಗಿ ಶ್ರಮಿಸುತ್ತಿದ್ದು, ಗ್ರಾಮೀಣ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. 2005ರಿಂದ ಮಹಾತ್ಮಾ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರಿಗೆ ಉದ್ಯೋಗದ ಹಕ್ಕು ನೀಡಿದೆ. ಅಲ್ಲದೇ ಜನರ ಸಹಭಾಗಿತ್ವದಲ್ಲಿ ಅಗತ್ಯ ಯೋಜನೆ ತಯಾರಿ ಹಾಗೂ ಅಭಿವೃದ್ಧಿಗೆ ಕಂಕಣಬದ್ಧವಾಗಿ ಕೆಲಸ ಮಾಡುತ್ತಿದೆ. ಪ್ರಸ್ತುತ ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ವಿಕಸಿತ ಭಾರತ ಜಿ-ರಾಮ್-ಜಿ ಎಂದು ಮರುನಾಮಕರಣಗೊಳಿಸಿ ಬದಲಾವಣೆಯೊಂದಿಗೆ ಹೊಸ ಮಸೂದೆ ಮೂಲಕ ಅದರ ಸ್ವರೂಪ ಬದಲಿಸಿದೆ. ಇದು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಮಾರಕವಾಗಲಿದೆ. ಹೊಸ ಮಸೂದೆಯಿಂದ ಗ್ರಾಮೀಣ ಕುಟುಂಬಗಳಿಗೆ ಕೆಲಸದ ಹಕ್ಕು ಕಡಿತಗೊಳ್ಳಲಿದೆ. 60 ದಿನಗಳ ಬ್ಲಾಕೌಟ್ ಅವಧಿಯಿಂದ ಕೂಲಿಕಾರ್ಮಿಕರಿಗೆ ಕೆಲಸ ಇಲ್ಲದಂತಾಗುತ್ತದೆ. ಈ ಕೂಡಲೇ ಕೇಂದ್ರ ಸರ್ಕಾರ ತನ್ನ ನಿಲುವು ಬದಲಿಸಿ, ಮಹಾತ್ಮ ಗಾಂಧಿ ನರೇಗಾ ಯೋಜನೆ ಮುಂದುವರೆಸಬೇಕು ಎಂದು ಆಗ್ರಹಿಸಿದರು.ಡಿವೈಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ರಾಜ್ಯ ಸರ್ಕಾರಗಳು ಯೋಜನೆಗೆ ಹಣ ನೀಡದಿದ್ದರೆ ಕೆಲಸಗಳು ಅಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಮಸೂದೆಯಿಂದ ಗ್ರಾಮ ಸಭೆಗಳ ಪಾತ್ರ ಕುಗ್ಗುವುದಲ್ಲದೇ, ಕೇಂದ್ರ ಸರ್ಕಾರದ ನಿರ್ಧಾರವೇ ಮುಖ್ಯವಾಗಲಿದೆ. ಹೀಗಾಗಿ ಹೊಸ ಮಸೂದೆ ಮುಂದಿನ ದಿನಗಳಲ್ಲಿ ಮಾರಕವಾಗಲಿದೆ. ಕೂಡಲೇ ಮನರೇಗಾ ಕಾನೂನಾತ್ಮಕ ಹಕ್ಕು ಆಗಿಯೇ ಉಳಿಯಬೇಕು, ಬೇಡಿಕೆ ಆಧಾರಿತ ಉದ್ಯೋಗ ಖಾತರಿ ರದ್ದು ಮಾಡಬಾರದು, ಬ್ಲಾಕೌಟ್ ಅವಧಿ ರದ್ದುಗೊಳಿಸಬೇಕು. ಗ್ರಾಮ ಸಭೆಗಳ ಅಧಿಕಾರ ಕಾಪಾಡಬೇಕು ಎಂದು ಒತ್ತಾಯಿಸಿದರು.ಇದೆ ಸಂದರ್ಭದಲ್ಲಿ ಸಂಸದರ ಕಚೇರಿ ಆಪ್ತ ಸಹಾಯಕರ ಮೂಲಕ ಸಂಸದರು ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆ ವೇಳೆ ದಾದಾಫೀರ್ ಸಂಗೊಳ್ಳಿ, ಸಚಿನ್ ಬೂದಿಹಾಳ, ನಾಗರಾಜ ಬಿದರಿ, ಬಸವರಾಜ ಎಸ್, ಗುತ್ತೆಮ್ಮ ಸುಣಗಾರ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.