ವಿಕಸಿತ ಭಾರತ ಸಂಕಲ್ಪಯಾತ್ರೆ ವಾಹನಕ್ಕೆ ಚಾಲನೆ

| Published : Dec 19 2023, 01:45 AM IST

ಸಾರಾಂಶ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಸಂಸದ ರಾಜಾ ಅಮರೇಶ್ವರ್ ನಾಯಕ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಸಂಸದ ರಾಜಾ ಅಮರೇಶ್ವರ್ ನಾಯಕ ತಿಳಿಸಿದರು.

ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಡ ಮಧ್ಯಮ ವರ್ಗದವರ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳನ್ನ ಪಡೆದಂತಹ ಫಲಾನುಭವಿಗಳ ಜೊತೆ ಸಂವಾದ ಹಾಗೂ ಪಡೆಯದೆ ಇರುವಂತಹ ಫಲಾನುಭವಿಗಳಿಗೂ ಯೋಜನೆಗಳನ್ನು ತಲುಪಿಸಬೇಕೆಂಬ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ರೂಪಿಸಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೂ ತಲುಪಿಸಬೇಕೆನ್ನುವುದು ನರೇಂದ್ರ ಮೋದಿ ಅವರ ಕನಸು. ಆ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಬ್ಯಾಂಕುಗಳಿಂದ ನೇರ ಸಾಲ ನೀಡುವ ಯೋಜನೆಯನ್ನು ಆಯೋಜಿಸಿದೆ ಎಂದರು.

ಪ್ರಮುಖವಾಗಿ ಮುದ್ರಾ ಯೋಜನೆ, ಜನಧನ್ ಯೋಜನೆ, ಪಿಎಂ ವಿಶ್ವಕರ್ಮ ಯೋಜನೆ, ಉಜ್ವಲ ಯೋಜನೆ, ಕೃಷಿ ಸನ್ಮಾನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿಯನ್ನ ಎಲ್‍ಇಡಿ ಪರದೆಯ ವಾಹನದೊಂದಿಗೆ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ 2047ರ ಹೊತ್ತಿಗೆ ಭಾರತ ಜಗತ್ತಿನ ಮೊದಲ ಸ್ಥಾನದಲ್ಲಿ ನಿಲ್ಲುವಂತಾಗಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಸರ್ಕಾರದ ಯೋಜನೆಗಳನ್ನು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್ ಮಾತನಾಡಿ, ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 6,000 ರು. ಗಳು ನೀಡಲಾಗುತ್ತಿದೆ. ದೇಶದ ಜನರ ಸ್ವಾವಲಂಬನೆ ಬದುಕಿಗೆ ಕೇಂದ್ರ ಸರ್ಕಾರದ ಯೋಜನೆಗಳು ಆಸರೆಯಾಗಿದೆ. ಈ ಯೋಜನೆಗಳ ಯಶಸ್ವಿಗೆ ಕೈಜೋಡಿಸಬೇಕೆಂದು ಹೇಳಿದರು.

ಬಿಜೆಪಿ ಯುವ ಮುಖಂಡ ಮಹೇಶ್ ರೆಡ್ಡಿ ಮುದ್ನಾಳ್, ಡಾ. ಚಂದ್ರಶೇಖರ್ ಸುಬೇದಾರ್, ಗುರುಕಾಮ, ಮೌನೇಶ್ ಬೆಳಗೇರಾ, ಶರಣಪ್ಪ, ನಾಗರಾಜ್ ವಾರಿ, ಲೋಹಿತ್, ಪರಶುರಾಮ್ ಕುರಕುಂದಿ, ರಾಜಶೇಖರ್ ಕಾಡಂನೋರ್ , ಮಲ್ಲು ಕೋಲಿವಾಡ, ವಿನೋದ್ ನಾಯಕ್, ಪವನ್, ಶ್ರೀಧರ್, ಲೂಹಿಸ್, ಕುಮಾರಸ್ವಾಮಿ, ಅಮೀರ್ ಪಟೇಲ್, ಕರಬಸಪ್ಪ ಬಿರಾಳ ಸೇರಿದಂತೆ ಇತರರಿದ್ದರು.