ಕನ್ನಡಪ್ರಭ ವಾರ್ತೆ ಬೀದರ್
ಇಲ್ಲಿನ ಗುರುನಾನಕ ದೇವ್ ಎಂಜಿನೀಯರಿಂಗ್ ಕಾಲೇಜು ತನ್ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಹಳೆಯ ವಿದ್ಯಾರ್ಥಿ ನರಸಿಂಗ್ ಮಾಧವ್ ಶಿಂಧೆ (2019ರ ಬ್ಯಾಚ್) ಅವರು ಸ್ಕೈರೂಟ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ‘ವಿಕ್ರಮ್-1’ಉಡಾವಣಾ ವಾಹಕ (ಮಿಷನ್ ಆಗಮನ) ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿರುವುದಕ್ಕೆ ಕಾಲೇಜು ಹೆಮ್ಮೆ ವ್ಯಕ್ತಪಡಿಸಿದೆ.ಈ ಐತಿಹಾಸಿಕ ಉಡಾವಣೆಯು ಜುಲೈ 18ರಂದು ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನೆರೆವೇರಿದ್ದು, ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.
ನರಸಿಂಗ್ ಮಾಧವ್ ಶಿಂಧೆ ಅವರು 2016ದಿಂದ 2019ರ ಅವಧಿಯಲ್ಲಿ ಗುರುನಾನಕ ದೇವ್ ಎಂಜಿನಿಯರಿಂಗ್ ಕಾಲೇಜಿನಿಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಅವರು 2020ರಿಂದ 2023ರ ವರೆಗೆ ಡಿಆರ್‌ಡಿಒನಲ್ಲಿ ಗುತ್ತಿಗೆ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ, 2023ರಲ್ಲಿ ಸ್ಕೈರೂಟ್‌ಗೆ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕ್ಯಾಡ್ ಆ್ಯಂಡ ಕನ್ಫಿಗರೇಷನ್ ಡಿಪಾರ್ಟಮೆಂಟ್‌ನಲ್ಲಿ ರಚನಾತ್ಮಕ ಎಂಜಿನಿಯರ್ ಆಗಿ ಸೇರ್ಪಡೆಯಾದರು. ವಿಕ್ರಮ-1 ಮಿಷನ್ ತಂಡದ ಸದಸ್ಯರಾಗಿ ಅವರು ಉಡಾವಣಾ ವಾಹಕದ ನಾಲ್ಕನೇ ಹಂತದ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆ ನೀಡಿ, ರಚನಾತ್ಮಕ ವಿನ್ಯಾಸ, ಕ್ಯಾಡ್ ಅಭಿವೃದ್ಧಿ, ಕಾನ್ಫಿಗರೇಶನ್ ನಿರ್ವಹಣೆ, ಎಂಜಿನಿಯರಿಂಗ್ ದಾಖಲೆಗಳ ಸಿದ್ಧತೆ, ವಿನ್ಯಾಸ ಮೌಲ್ಯಮಾಪನ ಹಾಗೂ ವಿನ್ಯಾಸ, ವಿಶ್ಲೇಷಣೆ, ಉತ್ಪಾದನೆ, ಜೋಡಣೆ, ಏಕೀಕರಣ ಮತ್ತು ಪರೀಕ್ಷಾ ತಂಡ ಗಳೊಂದಿಗೆ ಸಮನ್ವಯ ಸಾಧಿಸಿ ಮಿಷನ್ ಯಶಸ್ವಿಯಾಗಲು ಮಹತ್ತರ ಪಾತ್ರ ವಹಿಸಿದ್ದಾರೆ.ನರಸಿಂಗ್ ಮಾಧವ್ ಶಿಂಧೆ ಅವರು ತಮ್ಮ ಸಂತೋಷ ವ್ಯಕ್ತಪಡಿಸಿ ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಕಕ್ಷೀಯ ಉಡಾವಣಾ ವಾಹಕ ವಿಕ್ರಮ್-1 ಮಿಷನ್ ಭಾಗವಾಗಿರುವುದು ನನ್ನ ಎಂಜಿನಿಯರಿಂಗ್ ಜೀವನದ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಈ ಸಾಧನೆಗೆ ಅಗತ್ಯವಾದ ದೃಢವಾದ ಶೈಕ್ಷಣಿಕ ಅಡಿಪಾಯ ನೀಡಿದ ನನ್ನ ವಿದ್ಯಾಸಂಸ್ಥೆಯಾದ ಜಿಎನ್‌ಡಿ ಕಾಲೇಜಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಶ್ರೀ ನಾನಕ್ ಝಿರಾ ಸಾಹೇಬ್ ಫೌಂಡೆಷನ್ ಅಧ್ಯಕ್ಷ ಸರದಾರ ಬಲಬೀರಸಿಂಗ್, ಉಪಾಧ್ಯಕ್ಷೆ ರೇಷ್ಮಾ ಕೌರ್, ಪ್ರಾಂಶುಪಾಲರಾದ ಡಾ. ವೀಣಾ ಎಸ್. ಸೊರಗನ್ವಿ ಹಾಗೂ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅವರು ಅಭಿನಂದನೆಗಳನ್ನು ಸಲ್ಲಿಸಿ ಅವರ ಮುಂದಿನ ವೃತ್ತಿಜೀವನದಲ್ಲಿಯೂ ಇನ್ನಷ್ಟು ಉನ್ನತ ಸಾಧನೆಗಳು ಲಭಿಸಲಿ ಎಂದು ಶುಭ ಹಾರೈಸಿದರು.