೨೦೨೭ರ ಜ. ೧೦ರಿಂದ ೧೨ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಪ್ರತಿಭಾವಂತ ಯುವಜನರು ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ. ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮದೊಂದಿಗೆ ಇದು ಸಂಯೋಜಿತವಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತದ ಅಭಿವೃದ್ಧಿಯ ಪಯಣದಲ್ಲಿ ಯುವಜನರ ಸೃಜನಶೀಲತೆ, ನವೀನ ಆಲೋಚನೆಗಳು ಮತ್ತು ನಾಯಕತ್ವದ ಸಾಮರ್ಥ್ಯವನ್ನು ಬಳಸಿಕೊಳ್ಳುವ ಉದ್ದೇಶದಿಂದ ‘ವಿಕಸಿತ ಭಾರತ ಯುವ ನಾಯಕರ ಸಂವಾದ-೨೦೨೭ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಸಕ್ತ ಯುವಜನರು ‘ಮೈ ಭಾರತ್’ ವೇದಿಕೆಯ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮೈ ಭಾರತ್ ಜಿಲ್ಲಾ ಯುವ ಅಧಿಕಾರಿ ಎಸ್.ಶೃತಿ ತಿಳಿಸಿದರು.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ೨೦೨೭ರ ಜ. ೧೦ರಿಂದ ೧೨ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಪ್ರತಿಭಾವಂತ ಯುವಜನರು ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ. ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮದೊಂದಿಗೆ ಇದು ಸಂಯೋಜಿತವಾಗಿದೆ ಎಂದರು.
೨೦೨೬ರ ಆ.೧೭ರ ಆಧಾರದ ಮೇಲೆ ೧೫ ರಿಂದ ೨೯ ವರ್ಷದೊಳಗಿನ ಯುವಜನರು ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.ವಿಕಸಿತ ಭಾರತ ಚಾಲೆಂಜ್: ಈ ವಿಭಾಗದಲ್ಲಿ ಕ್ವಿಜ್, ಪ್ರಬಂಧ ಮತ್ತು ಪಿ.ಪಿ.ಟಿ. ಪ್ರಸ್ತುತಿ ಸೇರಿದಂತೆ ಮೂರು ಹಂತಗಳಿವೆ. ಪ್ರಬಂಧದ ವಿಷಯ: ‘ತಂತ್ರಜ್ಞಾನ, ನಾವೀನ್ಯತೆ ಮತ್ತು ಭವಿಷ್ಯ ಸನ್ನದ್ಧತೆ’.
ಸಾಂಸ್ಕೃತಿಕ ವಿಭಾಗ: ಜಾನಪದ ನೃತ್ಯ, ಜಾನಪದ ಗೀತೆ, ಚಿತ್ರಕಲೆ, ಭಾಷಣ ಮತ್ತು ಕವನ ರಚನೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ.ಭಾರತಕ್ಕಾಗಿ ವಿನ್ಯಾಸ: ಪ್ರಾದೇಶಿಕ ಅಭಿವೃದ್ಧಿಯ ಸಮಸ್ಯೆಗಳಿಗೆ ವಿನ್ಯಾಸ ಆಧಾರಿತ ಪರಿಹಾರಗಳನ್ನು ರೂಪಿಸುವ ಅವಕಾಶ, ಆಯ್ಕೆಯಾದ ತಂಡಗಳು ರಾಷ್ಟ್ರೀಯ ಹಂತದಲ್ಲಿ ಭಾಗವಹಿಸುವ ಅವಕಾಶ ಪಡೆಯಲಿವೆ.
ಸಾಮಾಜಿಕ ಉದ್ದೇಶಕ್ಕಾಗಿ ಹ್ಯಾಕ್: ಸಾಮಾಜಿಕ ಸಮಸ್ಯೆಗಳಿಗೆ ಡಿಜಿಟಲ್ ಪರಿಹಾರಗಳನ್ನು ರೂಪಿಸುವ ತಾಂತ್ರಿಕ ಆವಿಷ್ಕಾರ ಸ್ಪರ್ಧೆ ಉತ್ತಮ ತಂಡಗಳಿಗೆ ರಾಷ್ಟ್ರೀಯ ಹಂತದ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ.ಯುವ ಉದ್ಯಮಶೀಲತಾ ಚಾಲೆಂಜ್: ಹೊಸ ಸ್ಟಾರ್ಟ್‌ಅಪ್ ಆಲೋಚನೆಗಳು ಮತ್ತು ವ್ಯವಹಾರ ಯೋಜನೆಗಳನ್ನು ಮಂಡಿಸಲು ಯುವಜನರಿಗೆ ಅವಕಾಶ. ಈ ವಿಭಾಗಕ್ಕೆ ೩೫ ವರ್ಷ ವಯಸ್ಸಿನವರೆಗಿನವರು ಭಾಗವಹಿಸುವ ಅವಕಾಶವಿದೆ.
ಯುವ ಸಂಸತ್ತು: ರಾಷ್ಟ್ರೀಯ ಯುವ ಸಂಸತ್ತಿನ ಅಂತಿಮ ಹಂತದಲ್ಲಿ ನವದೆಹಲಿಯ ಸಂವಿಧಾನ ಸದನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ.ಯುವಜನರಿಗೆ ವಿಶೇಷ ಅವಕಾಶಗಳು:
ಈ ಕಾರ್ಯಕ್ರಮದ ಮೂಲಕ ತಮ್ಮ ಪ್ರತಿಭೆ, ಆಲೋಚನೆ, ನವೀನತೆ ಮತ್ತು ನಾಯಕತ್ವವನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಲು ಯುವಜನರಿಗೆ ಅವಕಾಶ ದೊರೆಯುತ್ತದೆ. ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಉತ್ತಮ ಸಾಧನೆ ಮಾಡುವ ಯುವಜನರಿಗೆ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ವಿಜೇತರಿಗೆ ಪ್ರಧಾನಮಂತ್ರಿ ಅವರೊಂದಿಗೆ ಸಂವಾದಿಸುವ ಅವಕಾಶವೂ ಇರಲಿದೆ ಎಂದು ವಿವರಿಸಿದರು.ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ: ಮೈ ಭಾರತ್ ಪೋರ್ಟಲ್ ಸಂಪರ್ಕಿಸಬಹುದು ಎಂದು ತಿಳಿಸಿದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೆಡಾ ಇಲಾಖೆಯ ಉಪನಿರ್ದೇಶಕಿ ಮನುಜಶ್ರೀ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಸನ್ನಕುಮಾರ್ ಗೋಷ್ಠಿಯಲ್ಲಿದ್ದರು.