ಹುಬ್ಬಳ್ಳಿಯಲ್ಲಿ ದರ್ಶನ್ ಅಭಿನಯದ ಡೆವಿಲ್ ಚಲನಚಿತ್ರ ವೀಕ್ಷಿಸಿ ಶನಿವಾರ ರಾತ್ರಿ ಮುಂಡಗೋಡಗೆ ಹಿಂತಿರುಗುತ್ತಿದ್ದಾಗ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮುಂಡಗೋಡನ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಡೆವಿಲ್‌ ಸಿನಿಮಾ ನೋಡಿ ಮರಳುವಾಗಿ ಕಂದಕಕ್ಕೆ ಉರುಳಿದ ಕಾರು

ಕನ್ನಡಪ್ರಭ ವಾರ್ತೆ ಮುಂಡಗೋಡ

ಹುಬ್ಬಳ್ಳಿಯಲ್ಲಿ ದರ್ಶನ್ ಅಭಿನಯದ ಡೆವಿಲ್ ಚಲನಚಿತ್ರ ವೀಕ್ಷಿಸಿ ಶನಿವಾರ ರಾತ್ರಿ ಮುಂಡಗೋಡಗೆ ಹಿಂತಿರುಗುತ್ತಿದ್ದಾಗ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮುಂಡಗೋಡನ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ತೀವ್ರ ಗಾಯಗೊಂಡಿದ್ದು, ತಾಲೂಕಿನ ಗಡಿ ಭಾಗ ಹುಬ್ಬಳ್ಳಿ ರಸ್ತೆ ತಾಯವ್ವ ದೇವಾಲಯ ಬಳಿ ಅಪಘಾತವಾಗಿದೆ.

ಎಂ. ಗೋಪಾಲ್ (೩೮) ಅಪಘಾತದಲ್ಲಿ ಮೃತರು. ಅವರೊಂದಿಗೆ ಪ್ರಯಾಣಿಸುತ್ತಿದ್ದ ಮುಂಡಗೋಡ ತಹಸೀಲ್ದಾರ್ ಕಚೇರಿಯ ಮತ್ತಿಬ್ಬರು ಗ್ರಾಮ ಲೆಕ್ಕಾಧಿಕಾರಿಗಳಾದ ಗೋವಿಂದ ರಾಥೋಡ ಹಾಗೂ ಮಂಜುನಾಥ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ:

ಈ ಮೂವರು ಸೇರಿ ಹುಬ್ಬಳ್ಳಿಗೆ ಹೋಗಿ ಡೆವಿಲ್ ಚಲನಚಿತ್ರ ವೀಕ್ಷಿಸಿ ಸಂಜೆ ಸುಮಾರು ೭ ಗಂಟೆ ವೇಳೆಗೆ ಮುಂಡಗೋಡಿಗೆ ಮರಳುವಾಗ ಮಾರ್ಗ ಮಧ್ಯೆ ತಾಯವ್ವ ದೇವಾಲಯ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಕಾರು ಕಂದಕ್ಕೆ (ಹಳ್ಳಕ್ಕೆ) ಉರುಳಿದೆ. ಸಂಜೆ ೬.೩೦ರ ವೇಳೆಗೆ ಹುಬ್ಬಳ್ಳಿಯಿಂದ ಹೊರಟಿರುವುದಾಗಿ ಗೋಪಾಲ್ ಮತ್ತು ಸ್ನೇಹಿತರು ಮನೆಯವರಿಗೆ ಕರೆ ಮಾಡಿ ತಿಳಿಸಿದ್ದರು. ಆದರೆ ರಾತ್ರಿಯಾದರೂ ಮನೆಗೆ ತಲುಪದಿರುವ ಕಾರಣ ಆತಂಕಗೊಂಡ ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳು ಮುಂಡಗೋಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆ ಮೂವರ ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕ್ ಮಾಡಿದರು. ಮೂವರ ಮೊಬೈಲ್ ಸ್ವಿಚ್ ಆಫ್‌ ಆದ ಸ್ಥಳ ಹುಡುಕಲು ಪ್ರಾರಂಭಿಸಿದರು. ಮಧ್ಯರಾತ್ರಿ ೧ ಗಂಟೆ ವೇಳೆಗೆ ಘಟನೆ ಬೆಳಕಿಗೆ ಬಂದಿದೆ. ಆ ವೇಳೆಗಾಗಲೇ ಗೋಪಾಲ ಮೃತಪಟ್ಟಿದ್ದರು. ಇನ್ನುಳಿದ ಇಬ್ಬರು ಕಾರಿನಿಂದ ಹೊರಬರಲಾಗದೇ ನರಳಾಡುತ್ತಿದ್ದರು. ಅವರನ್ನು ಕಾರಿನಿಂದ ಹೊರ ತೆಗೆದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲೂಕಿನವರಾದ ಗೋಪಾಲ್ ಮುಂಡಗೋಡ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.