ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘ 2ನೇ ಹಂತದ ಪ್ರತಿಭಟನೆ ನಡೆಯಿತು.ಕೆಲಸ ಸ್ಥಗಿತಗೊಳಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕಪ್ಪು ಪಟ್ಟಿಧರಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ ಜಿಲ್ಲೆಯ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರು, ಮೂಲಸೌಲಭ್ಯಕ್ಕಾಗಿ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷೆ ಅಕ್ಷತಾ ಬಿ. ಶೆಟ್ಟಿ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾಭವನ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಎಲ್ಲ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ತಾಲೂಕು ಅಧಿಕಾರಿಗಳು ಹಾಗೂ ಸದಸ್ಯರ ಒಪ್ಪಿಗೆಯಂತೆ ಸರ್ವಾನುಮತದಿಂದ ರಾಜ್ಯಾದ್ಯಂತ ಮುಷ್ಕರ ನಡೆಸಿದ ಕಾರಣ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ ಇಲ್ಲಿಯ ವರೆಗೆ ಸರ್ಕಾರ ಈ ವೃಂದದ ನೌಕರರ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.ಇದೀಗ ಮುಷ್ಕರದ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿದ್ದು, ತಕ್ಷಣವೇ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು, ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡಬೇಕು, ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸಬೇಕು, ಅಂತರ್ ಜಿಲ್ಲಾ ವರ್ಗಾವಣೆಯ ಕೆಸಿಎಸ್‌ಆ ನಿಯಮ 16ಎ ಮರು ಸ್ಥಾಪಿಸಬೇಕು ಅಥವಾ ಇತರೆ ಎಲ್ಲ ಇಲಾಖೆಗಳಲ್ಲಿರುವ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿ ರಚಿಸಬೇಕು, ಅನುಕಂಪದ ನೇಮಕಾತಿ ಹುದ್ದೆಯ ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳು ಈಡೇರುವ ವರೆಗೆ ಎಲ್ಲ ಬಗೆಯ ಮೊಬೈಲ್ ಆ್ಯಪ್ ಹಾಗೂ ವೆಬ್ ಅಪ್ಲಿಕೇಷನ್ ಅನ್ನು ಸ್ಥಗಿತಗೊಳಿಸಿ, ಲೇಖನಿ ಸ್ಥಗಿತಗೊಳಿಸುವ ಮೂಲಕ ಮುಷ್ಕರವನ್ನು ನಡೆಸುವುದಾಗಿ ತಿಳಿಸಿದರು.ಸಂಘದ ಉಪಾಧ್ಯಕ್ಷ ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ್, ಖಜಾಂಚಿ ರವಿಚಂದ್ರ, ತಾಲೂಕು ಅಧ್ಯಕ್ಷರಾದ ಸಂದೀಪ್ ಶೆಣೈ ಮಡಿಕೇರಿ, ಕೃಷ್ಣ ವಿರಾಜಪೇಟೆ, ಬಸನಗೌಡ ಪೊನ್ನಂಪೇಟೆ, ಗುರು ದರ್ಶನ್ ಕುಶಾಲನಗರ, ಕರಿಬಸವರಾಜ್ ಸೋಮವಾರಪೇಟೆ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.