ನರಸಿಂಹರಾಜಪುರಗ್ರಾಮ ಅರಣ್ಯ ಸಮಿತಿಗಳು ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರನ್ನು ಬೆಸೆಯುವ ಕೆಲಸ ಮಾಡುತ್ತದೆ ಎಂದು ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಎಂ.ಪಿ.ಆದರ್ಶ ತಿಳಿಸಿದರು.

ನಾಗಲಾಪುರ ಮತ್ತು ಶಿರಿಗಳಲೆ ಗ್ರಾಮ ಅರಣ್ಯ ಸಮಿತಿಯಿಂದ ಸಮಗ್ರ ಪುನಶ್ಚೇತನ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಗ್ರಾಮ ಅರಣ್ಯ ಸಮಿತಿಗಳು ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರನ್ನು ಬೆಸೆಯುವ ಕೆಲಸ ಮಾಡುತ್ತದೆ ಎಂದು ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಎಂ.ಪಿ.ಆದರ್ಶ ತಿಳಿಸಿದರು.

ಗುರುವಾರ ನಾಗಲಾಪುರ ಗ್ರಾಪಂನಲ್ಲಿ ನಾಗಲಾಪುರ ಮತ್ತು ಶಿರಿಗಳಲೆ ಗ್ರಾಮ ಅರಣ್ಯ ಸಮಿತಿ ಏರ್ಪಡಿಸಿದ್ದ ಸಮಗ್ರ ಪುನಶ್ಚೇತನ ತರಬೇತಿ, ಸಮಗ್ರ ನಿರ್ವಹಣಾ ಯೋಜನೆ ಹಾಗೂ ಸರ್ವಸದಸ್ಯರ ಮಹಾ ಮಂಡಳಿ ಸಭೆ ಉದ್ಘಾಟಿಸಿ ಮಾತನಾಡಿದರು. ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿಗೆ ಅರಣ್ಯ ಇಲಾಖೆಗೆ ಅರಣ್ಯ ಸಂಪತ್ತು ನೋಡಿಕೊಳ್ಳುವುದು ಕಷ್ಟವಾಗಿದ್ದರಿಂದ ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿ ರಚನೆ ನಂತರ ಅರಣ್ಯ ಇಲಾಖೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಅರಣ್ಯ ಕಾಪಾಡಿದೆ. ಇದಕ್ಕೂ ಮುಂಚೆ ಅರಣ್ಯ ಇಲಾಖೆ- ಗ್ರಾಮಸ್ಥರ ಮಧ್ಯೆ ದೊಡ್ಡ ಕಂದಕ ಸೃಷ್ಠಿಯಾಗಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ವೈರಿಗಳಂತೆ ಕಾಣುತ್ತಿದ್ದರು. ಈಗ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವೆ ಬಾಂಧವ್ಯ ಬೆಳೆದಿದೆ ಎಂದರು.

ನಾಗಲಾಪುರ ಮತ್ತು ಶಿರಿಗಳಲೆ ಗ್ರಾಮ ಅರಣ್ಯ ಸಮಿತಿ ಸ್ಥಾಪಕ ಅಧ್ಯಕ್ಷ ಇ.ಸಿ.ಜೋಯಿ ಮಾತನಾಡಿ, 30 ವರ್ಷಗಳ ಹಿಂದೆ ಪ್ರಾರಂಭವಾದ ನಾಗಲಾಪುರ ಗ್ರಾಮ ಅರಣ್ಯ ಸಮಿತಿ ಕೊಪ್ಪ ಅರಣ್ಯ ವಲಯದಲ್ಲೇ ಅತ್ಯುತ್ತಮ ಸಮಿತಿ ಎಂಬ ಹೆಸರು ಪಡೆದಿತ್ತು. ಗ್ರಾಮಸ್ಥರ ಸಹಕಾರದಿಂದ ನೂರಾರು ಎಕರೆ ಜಾಗದಲ್ಲಿ ಗಿಡ ನೆಟ್ಟು ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಹಲವಾರು ತರಬೇತಿ ಹಮ್ಮಿಕೊಳ್ಳಲಾಗಿತ್ತು. ಅನುದಾನದ ಕೊರತೆಯಿಂದ ಈಗ ಚಟುವಟಿಕೆ ಕಡಿಮೆಯಾಗಿದೆ. ಗ್ರಾಮ ಅರಣ್ಯ ಸಮಿತಿ ಬೆಳೆಸಿದ ನೆಡುತೋಪು ಕಡಿತಲೆಯಾದರೆ ಅದರ ಲಾಭ ಗ್ರಾಮ ಅರಣ್ಯ ಸಮಿತಿಗೂ ಬರಲಿದೆ ಎಂದರು.

ಬೆಂಗಳೂರಿನ ಅರಣ್ಯ ಭವನದ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಜೆ.ನಾಗರಾಜ್ ಮಾತನಾಡಿ, ಅರಣ್ಯ ಸಂಪತ್ತು ಉಳಿಸಲು ಗ್ರಾಮಸ್ಥರು ಮನಸ್ಸು ಮಾಡಬೇಕು. ಅರಣ್ಯ ಇಲಾಖೆ ಜೊತೆ ಸಹಕಾರ ನೀಡಬೇಕು.ಅರಣ್ಯ ಸಂಪತ್ತು ಹೆಚ್ಚಾದರೆ ಮಳೆ, ಬೆಳೆ ಉತ್ತಮವಾಗಿ ಉತ್ತಮ ಗಾಳಿ, ಪರಿಸರ ಸಿಗಲಿದೆ. ನಮ್ಮ ಅರಣ್ಯ, ಪರಿಸರ ಮುಂದಿನ ಪೀಳಿಗೆಗೆ ಹಸ್ತಾಂತರಿಸ ಬೇಕಾಗಿದೆ. ಸಮಿತಿ ಮೂಲಕ ಬೆಳೆಸಿದ ನೆಡತೋಪು ಕಡಿತಲೆ ನಂತರ ಶೇ75 ರಷ್ಟು ಹಣ ಗ್ರಾಮ ಅರಣ್ಯ ಸಮಿತಿಗೆ ನೀಡಲಾಗುವುದು ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ನಾಗಲಾಪುರ ಮತ್ತು ಶಿರಿಗಳಲೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೆ.ರವಿ ಮಾತನಾಡಿ, ಮನುಷ್ಯರು, ಪ್ರಾಣಿ ಪಕ್ಷಿಗಳು, ಜೀ ಸಂಕುಲನ ಉಳಿಯರು ಅರಣ್ಯ ಅಗತ್ಯ. ಗ್ರಾಮ ಅರಣ್ಯ ಸಮಿತಿ ನಿಕಟಪೂರ್ವ ಅಧ್ಯಕ್ಷರ ಸಲಹೆ ಪಡೆದು ಕ್ರಿಯಾ ಯೋಜನೆ ತಯಾರಿಸಿ ಗ್ರಾಮ ಅರಣ್ಯ ಸಮಿತಿಯಿಂದ ಇನ್ನಷ್ಟು ಉತ್ತಮ ಕೆಲಸ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಹೊನ್ನಾಳಿ ಅಂಗನವಾಡಿ ಕಾರ್ಯಕರ್ತೆ ವನಜಾಕ್ಷಿ ಗೆ ಸಾಲುಮರದ ತಿಮ್ಮಕ್ಕ ಸದ್ಬಾವನಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅತಿಥಿಗಳನ್ನು ಗೌರವಿಸಿ, ಸಮಿತಿ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸಭೆಯಲ್ಲಿ ಕಂದಾಯ ಇಲಾಖೆ ಆರ್.ಐ.ಮಂಜುನಾಥ್, ಪತಂಜಲಿ ಸಂಸ್ಥೆ ಆಡಳಿತಾಧಿಕಾರಿ ಎಂ. ಪೂವಯ್ಯ, ಗ್ರಾಮ ಅರಣ್ಯ ಸಮಿತಿಯ ಮಾಜಿ ಅಧ್ಯಕ್ಷರಾದ ವಿಜಯಕುಮಾರ್, ಎಂ.ಡಿ.ಸಜಿ, ಜೇಮ್ಸ್, ಶಿವಮೊಗ್ಗ ಪತಂಜಲಿ ಸಂಸ್ಥೆ ಸರಳಾ ವಾಸನ್, ಯಶೋದ ನಾಗರಾಜ್, ಕಲಾ ವೀರೇಶ್, ಉಪ ವಲಯ ಅರಣ್ಯಾಧಿಕಾರಿ ರಂಗನಾಥ ಅಥಾಲಿಟಿ, ಗಸ್ತು ಅರಣ್ಯ ಪಾಲಕ ಎಂ.ಡಿ.ನಾಗರಾಜ ಇದ್ದರು.