ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಗ್ರಾಮದೇವತೆ ಶ್ರೀಚಳ್ಳಕೆರೆಯಮ್ಮನ ಐದು ವರ್ಷಕ್ಕೊಮ್ಮೆ ನಡೆಯುವ ವಿಶೇಷ ಜಾತ್ರೆ ಗಂಗಾಪೂಜೆಯೊಂದಿಗೆ ಸೋಮವಾರದಿಂದ ಆರಂಭವಾಗಿದೆ.ಎರಡನೇ ದಿನವಾದ ಮಂಗಳವಾರವೂ ನಗರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ತಾಯಿ ಚಳ್ಳಕೆರೆಯಮ್ಮನಿಗೆ ಉಡಿ ತುಂಬುವ ಕಾರ್ಯದ ಜೊತೆಗೆ ಅಮ್ಮನಿಗೆ ಮಾಂಗಲ್ಯಧಾರಣೆ, ಮಂಗಳ ಕಾರ್ಯ ನಡೆದವು.
ಶ್ರೀ ಅಮ್ಮನ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರಿ ಕೇಡ್ ನಿರ್ಮಿಸಿ ಭಕ್ತರು ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುವ ವ್ಯವಸ್ಥೆ ಮಾಡಿದ್ದರು. ಮಂಗಳವಾರ ಬೆಳಗ್ಗೆ ೫ ರಿಂದಲೇ ಜನರು ದೇವಸ್ಥಾನದತ್ತ ಹೆಜ್ಜೆ ಹಾಕಿದರು. ಈ ಬಾರಿ ದೊಡ್ಡ ಪ್ರಮಾಣದಲ್ಲಿ ಉಡಿತುಂಬುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ದೇವಸ್ಥಾನದ ಧರ್ಮದರ್ಶಿಗಳು ಸೇರಿದಂತೆ ಎಲ್ಲರೂ ಉಪಸ್ಥಿತರಿದ್ದರು.ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಮಂಡಳಿ ಅಧ್ಯಕ್ಷ, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಎರಡನೇ ದಿನವಾದ ಮಂಗಳವಾರ ಪತ್ನಿ ಗಾಯಿತ್ರಿ, ಪುತ್ರಿ ಸುಚಿತ್ರ ಹಾಗೂ ಪಕ್ಷದ ಮುಖಂಡರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು, ಉತ್ತಮ ಮಳೆ, ಬೆಳೆ ಜನತೆಯ ಕಲ್ಯಾಣಕ್ಕಾಗಿ ಪೂಜೆ ಸಲ್ಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಶ್ರೀಚಳ್ಳಕೆರೆಯಮ್ಮ ದರ್ಶನ ಪಡೆದು ಹೊರಗೆ ಆಗಮಿಸಿದ ಶಾಸಕರು ಪತ್ರಿಕೆಯೊಂದಿಗೆ ಮಾತನಾಡಿ, ಈ ಬಾರಿಯ ಜಾತ್ರೆಗೆ ವಿಶೇಷತೆಯಿಂದ ಕೂಡಿದೆ. ನಾನು ಒಟ್ಟು ನಾಲ್ಕು ಬಾರಿ ಈ ವಿಶೇಷ ಜಾತ್ರೆಯನ್ನು ನೋಡಿದ್ದೇನೆ. ಅದರಲ್ಲಿ ಮೂರು ಬಾರಿ ಈ ಕ್ಷೇತ್ರದ ಶಾಸಕನಾಗಿ ಅಮ್ಮನ ದರ್ಶನ ಪಡೆಯುವ ಸೌಭಾಗ್ಯ ನನಗೆ ಒದಗಿದೆ. ವೈಯಕ್ತಿಕವಾಗಿ ಹೆಚ್ಚು ಸಂತಸ ತಂದಿದೆ. ಆದರೆ, ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆಯಾಗಿ ಜನರು ನೀರಿಗಾಗಿ ಪರಿತಪಿಸುವ ಸ್ಥಿತಿ ಉಂಟಾಗಿದೆ. ಆದ್ದರಿಂದ ಯದತೋರಿ ಉತ್ತಮ ಮಳೆ, ಬೆಳೆ ಕರುಣಿಸುವಂತೆ ಪ್ರಾರ್ಥಿಸಿರುವುದಾಗಿ ತಿಳಿಸಿದರು.ಧರ್ಮದರ್ಶಿ ಪಿ.ಆರ್.ಗೌಡ್ರ ರಾಮಣ್ಣ, ದಳವಾಯಿ ಮೂರ್ತಿ, ಪಿ.ತಿಪ್ಪೇಸ್ವಾಮಿ, ಗೊಲ್ಲಗೌಡನಾಗಣ್ಣ, ತಳವಾರ ಈರಣ್ಣ, ದೊರೆಗಳ ಪ್ರಸನ್ನ, ದೇವಿಪ್ರಸಾದ್, ದಳವಾಯಿ ವೆಂಕಟೇಶ್, ಚಿಕ್ಕಣ್ಣಗೌಡ, ಬುಡ್ಡವೀರಣ್ಣ, ಮಜ್ಜಿಗೆವೀರೇಶ್, ಎಂ.ಬಿ.ಮಲ್ಲಪ್ಪ, ಮಡಿವಾಳರ ಧನಂಜಯ, ರುದ್ರಪ್ಪ, ಎನ್.ನಾಗರಾಜು, ಸೂರಪಾಪಣ್ಣ, ಮಲ್ಲಿಕಾರ್ಜುನಸ್ವಾಮಿ, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.ನಾಳೆ ಸಿಡಿ ಉತ್ಸವಕ್ಕೆ ಮಾರ್ಗ ಬದಲಾವಣೆ
ಚಳ್ಳಕೆರೆ: ಗ್ರಾಮದೇವತೆ ಚಳ್ಳಕೆರೆಯಮ್ಮ ಜಾತ್ರೆ ಉತ್ಸವದ ಹಿನ್ನೆಲೆಯಲ್ಲಿ ಮಾ.೧೪ರ ಗುರುವಾರ ಚಳ್ಳಕೆರೆಯಮ್ಮ ದೇವಸ್ಥಾನದಿಂದ ಬಸವೇಶ್ವರ ವೃತ್ತದ ತನಕ ಸಿಡಿ ಉತ್ಸವ ನಡೆಯಲಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ಸಂಚಾರ ವ್ಯವಸ್ಥೆಯ ಮಾರ್ಗವನ್ನು ಬದಲಾವಣೆ ಮಾಡಿದ್ದು, ವಾಹನ ಸವಾರರು ಸಹಕರಿಸುವಂತೆ ಠಾಣಾ ವೃತ್ತ ನಿರೀಕ್ಷಕ ಕೆ.ಕುಮಾರ್ ತಿಳಿಸಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿದ ಅವರು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ತಹಶೀಲ್ದಾರ್‌ರವರ ಮಾರ್ಗದರ್ಶನದಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಬಳ್ಳಾರಿನಿಂದ ಬೆಂಗಳೂರಿನ ಕಡೆಗೆ ಹೋಗುವ ಭಾರಿ ವಾಹನಗಳು ಚಿತ್ರದುರ್ಗ ಮೂಲಕ ಹಾದು ಹೋಗಬೇಕು. ಲಘು ವಾಹನಗಳು ದುಗ್ಗಾರವ ರಸ್ತೆ, ಪಾವಗಡ ರಸ್ತೆ ಮೂಲಕ ಡಿ.ಉಪ್ಪಾರಹಟ್ಟಿ ಗೇಟ್ ತಲುಪಿ ನಗರಂಗೆರೆ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಬಹುದು. ಬಳ್ಳಾರಿಯಿಂದ ಚಿತ್ರದುರ್ಗಕ್ಕೆ ಹೋಗುವ ವಾಹನಗಳು ಬೈಪಾಸ್ ರಸ್ತೆಯ ಮೂಲಕ ಚಿತ್ರದುರ್ಗಕ್ಕೆ ತಲುಪಬೇಕು, ಹಿರಿಯೂರಿನಿಂದ ಬಳ್ಳಾರಿಗೆ ಹೋಗುವ ವಾಹನಗಳು ಚಿತ್ರದುರ್ಗದಿಂದ ಬಳ್ಳಾರಿ ತಲುಪಬೇಕು ಎಂದು ಕೋರಿದ್ದಾರೆ.