ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಗ್ರಾಪಂ ಸದಸ್ಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲರಾಗಿರುವ ಜಿಲ್ಲೆಯ ಜನಪ್ರತಿನಿಧಿಗಳು, ಜಿಪಂ, ತಾಪಂ ಅಧಿಕಾರಿಗಳ ನಿರ್ಲಕ್ಷ ದೋರಣೆ ಖಂಡಿಸಿ ತಾಲೂಕಿನ ಗ್ರಾಪಂ ಸದಸ್ಯರುಗಳು ಗುರುವಾರ ತಾಪಂ ಕಚೇರಿಗೆ ಬೀಗ ಹಾಕಿ ನೌಕರರಿಗೆ ದಿಗ್ಬಂಧನ ವಿಧಿಸಿ ಪ್ರತಿಭಟನೆ ನಡೆಸಿದರು.ಸದಸ್ಯರ ಧಿಡೀರ್ ಪ್ರತಿಭಟನೆಯಿಂದ ತಾಪಂ ಕಚೇರಿ ಕೆಲಸ ಕಾರ್ಯಗಳಿಗೆ ನೌಕರರು ಮತ್ತು ಸಾರ್ವಜನಿಕರು ಪರದಾಡಿದರು. ಒಕ್ಕೂಟ ನಡೆಸುತ್ತಿರುವ ಚಳವಳಿಗೆ ರೈತ ಸಂಘ , ಸ್ತ್ರೀ ಶಕ್ತಿ ಒಕ್ಕೂಟ, ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ವೈದ್ಯಕೀಯ ಸಂಶೋಧನಾ ಪರಿಷತ್ ಸದಸ್ಯರು ಬೆಂಬಲ ನೀಡಿ ಪಾಲ್ಗೊಂಡಿದ್ದರು.
ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆ ಸಮರ್ಪಕ ಅನುಷ್ಠಾನ ವಿಳಂಬ, ಕಳಪೆ ಕಾಮಗಾರಿಗಳ ತನಿಖೆ ನಡೆಸುವುದು, 15ನೇ ಹಣಕಾಸು ಆಯೋಗದ ಅನುದಾನದ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವುದು ಗ್ರಾಪಂ ಅಧಿಕಾರವಾಗಿದೆ. ಆದರೆ, ಸರ್ಕಾರ ಈ ಹಕ್ಕನ್ನು ಕಸಿದುಕೊಂಡು ತಾಲೂಕು ಮತ್ತು ಜಿಪಂಗಳಿಗೆ ಅಧಿಕಾರ ನೀಡಿರುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.ತಾಪಂ ಇಒ ಎಲ್.ಸಂದೀಪ್‌ನನ್ನು ಅಮಾನತು ಮಾಡುವ ಮೂಲಕ ಇವರ ಅಧಿಕಾರಾವಧಿಯಲ್ಲಿ ಮಾಡಿರುವ ಆದೇಶ ಮತ್ತು ಕಾಮಗಾರಿಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ತಾಪಂ ಕಚೇರಿ ವ್ಯವಸ್ಥಾಪಕ ರಾಮಕೃಷ್ಣ ಅವರನ್ನು ಸರ್ಕಾರ ಆದೇಶದಂತೆ ಅಮಾನತ್ತಿನಲ್ಲಿಟ್ಟು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.
ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಶೀಘ್ರದಲ್ಲೇ ಸ್ಪಂದಿಸಬೇಕು. ಇಲ್ಲವಾದಲ್ಲಿ ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಪಂಗಳಿಗೆ ಬೀಗ ಹಾಕಿ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಸ್ತ್ರೀಶಕ್ತಿ ಸಂಘಟನೆ ಲಕ್ಷ್ಮಿ ಚನ್ನರಾಜು, ರೈತ ಸಂಘದ ಸೋ. ಸಿ. ಪ್ರಕಾಶ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಇ.ಕೃಷ್ಣ, ಗೌರವಾಧ್ಯಕ್ಷ ದಯಾನಂದ, ಉಪಾಧ್ಯಕ್ಷರಾದ ನಳಿನ, ಶಿವಲಿಂಗಯ್ಯ, ಎಂ.ಮಹೇಶ, ಆಬಲವಾಡಿ ಸುರೇಶ, ಬ್ಯಾಡರಹಳ್ಳಿ ರಾಮಕೃಷ್ಣ, ಪುಟ್ಟರಾಮ, ಜಗದೀಶ, ಎಂ ಚಂದ್ರಶೇಖರ, ಶ್ವೇತಾ ಸೇರಿದಂತೆ ವಿವಿಧ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು.