ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಗ್ರಾಮ ಪಂಚಾಯ್ತಿಯು ಸ್ಥಳೀಯ ಸರ್ಕಾರವಿದ್ದಂತೆ. ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯ ಪೂರೈಸುವಲ್ಲಿ ಪಂಚಾಯ್ತಿ ಆಡಳಿತ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು ಹಾಗೂ ಪಂಚಾಯ್ತಿ ಆಡಳಿತ ಉತ್ತಮವಾಗಿದ್ದರೆ ಗ್ರಾಮಸ್ಥರು ಕೂಡ ಯಾವುದೇ ತಕರಾರು ಮಾಡದೆ ತೆರಿಗೆ ಪಾವತಿಸುತ್ತಾರೆ. ಆದ್ದರಿಂದ ಪಂಚಾಯ್ತಿ ಆಡಳಿತವೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ತಾ.ಪಂ. ಇಒ ಜಿ.ಮುನಿರಾಜು ಸಲಹೆ ನೀಡಿದರು.ತಾಲೂಕಿನ ಹಳೆಕೋಟೆ ಹೋಬಳಿಯ ಬಾಗಿವಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಟ್ಟದ ಸಾತೇನಹಳ್ಳಿ ಗ್ರಾಮಕ್ಕೆ ಪಂಚಾಯ್ತಿ ಸಿಬ್ಬಂದಿಗಳೊಡನೆ ತೆರಿಗೆ ವಸೂಲಾತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮ ಪಂಚಾಯ್ತಿಗಳು ಗ್ರಾಮೀಣ ಅಭಿವೃದ್ಧಿಗಾಗಿ ಸೇವೆ ನೀಡಲು ಸರ್ಕಾರದ ಯೋಜನೆಗಳ ಜೊತೆಗೆ ಗ್ರಾಮೀಣ ಭಾಗದ ಸಾರ್ವಜನಿಕರ ಸಹಕಾರ ಅತ್ಯವಶ್ಯಕ ಹಾಗಾಗಿ ಗ್ರಾಮಸ್ಥರು ಪಂಚಾಯ್ತಿ ಆಡಳಿತ ಸದೃಢಗೊಳ್ಳಲು ತಪ್ಪದೆ ತೆರಿಗೆ ಪಾವತಿಸಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದರು. ಸ್ವಚ್ಛತೆ ಬಗ್ಗೆ ಸಾರ್ವಜನಿಕರು ಉದಾಸೀನ ತೋರದೆ ಗ್ರಾಮ ನೈರ್ಮಲ್ಯ ಕಾಪಾಡಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಆಗುತ್ತದೆ. ಬೆಟ್ಟದ ಸಾತೇನಹಳ್ಳಿಯೂ ತೆರಿಗೆ ಪಾವತಿಯಲ್ಲಿ ಹಿಂದುಳಿದ ಗ್ರಾಮವಾಗಿದೆ ಈ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಗ್ರಾಮಸ್ಥರು ಅನೈರ್ಮಲ್ಯ ಹಾಗೂ ಕುಡಿಯುವ ನೀರಿನ ವ್ಯತ್ಯಯಗಳ ಬಗ್ಗೆ ಚರ್ಚಿಸಿದಾಗ ಸ್ಥಳದಲ್ಲಿದ್ದ ಸಿಬ್ಬಂದಿಗೆ ಕುಡಿಯುವ ನೀರು ಬೀದಿ ದೀಪ ನಿರ್ವಹಣೆ ಹಾಗೂ ನೈರ್ಮಲ್ಯೀಕರಣದ ಬಗ್ಗೆ ಲೋಪವಾಗದಂತೆ ಕೆಲಸ ನಿರ್ವಹಿಸಿ ಎಂದು ಸೂಚಿಸಿದರು.ಗ್ರಾ.ಪಂ.ಸದಸ್ಯ ಶ್ರೀಧರ್, ತಾ.ಪಂ. ಸಹಾಯಕ ನಿರ್ದೇಶಕ ಅರುಣ್, ಪಿಡಿಒ ವಿಜಯ್, ಕಾರ್ಯದರ್ಶಿ ಸೋಮಶೇಖರ್, ಕರವಸೂಲಿಗಾರ ಉಮೇಶ್, ಕೆ.ಎಂ ನಾಗರಾಜು, ಮುಖಂಡ ಸುರೇಶ್, ನೀರುಗಂಟಿಗಳು, ಇತರರು ಇದ್ದರು.