ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಕಾಫಿ ತೋಟ ಹೊಲಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಪಡಿಸುತ್ತಿವೆ. ಕಾಡಾನೆಗಳನ್ನು ಓಡಿಸುವುದರಲ್ಲೆ ಇಲಾಖೆ ಕಾಲಕಳೆಯುತ್ತಿದೆ. ಕಾಡಾನೆಗಳಿಂದ ನಮಗೆ ರಕ್ಷಣೆ ಕೊಡುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬರುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೆ ಜಿ ಕುಮಾರ್ ಮಾತನಾಡಿ, ಅನುಘಟ್ಟ ಭಾಗದಲ್ಲಿ ಸುಮಾರು 30ಕ್ಕೂ ಹೆಚ್ಚು ಕಾಡಾನೆಗಳು ದಾಳಿ ಮಾಡಿವೆ.
ಕನ್ನಡಪ್ರಭ ವಾರ್ತೆ ಬೇಲೂರು
ಮಲೆನಾಡು ಭಾಗದಲ್ಲಿ ದಿನನಿತ್ಯ ಆನೆಗಳ ಉಪಟಳ ಹೆಚ್ಚಾಗುತ್ತಿರುವುದನ್ನು ಖಂಡಿಸಿ ಕಣಗುಪ್ಪೆ, ಅನುಗಟ್ಟ ಸೇರಿದಂತೆ ಇತರೆ ಭಾಗದ ರೈತರು ಹಾಗೂ ಕಾಫಿ ಬೆಳೆಗಾರರು ರಸ್ತೆ ತಡೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ರಸ್ತೆ ತಡೆ ನಡೆಸಿದರು.ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಕಾಫಿ ತೋಟ ಹೊಲಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಪಡಿಸುತ್ತಿವೆ. ಕಾಡಾನೆಗಳನ್ನು ಓಡಿಸುವುದರಲ್ಲೆ ಇಲಾಖೆ ಕಾಲಕಳೆಯುತ್ತಿದೆ. ಕಾಡಾನೆಗಳಿಂದ ನಮಗೆ ರಕ್ಷಣೆ ಕೊಡುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬರುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೆ ಜಿ ಕುಮಾರ್ ಮಾತನಾಡಿ, ಅನುಘಟ್ಟ ಭಾಗದಲ್ಲಿ ಸುಮಾರು 30ಕ್ಕೂ ಹೆಚ್ಚು ಕಾಡಾನೆಗಳು ದಾಳಿ ಮಾಡಿ ನೂರಾರು ಎಕರೆ ಭತ್ತ, ಕಾಫಿ, ಶುಂಠಿ, ತೆಂಗು ಸೇರಿದಂತೆ ಇನ್ನಿತರ ಬೆಳೆಗಳನ್ನು ಸಂಪೂರ್ಣ ನಾಶ ಮಾಡಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಅರಣ್ಯ ಇಲಾಖೆಯ ಒಬ್ಬ ಅಧಿಕಾರಿ ಇತ್ತ ಕಡೆ ತಲೆ ಹಾಕಿ ನಮ್ಮ ಸಮಸ್ಯೆ ಆಲಿಸಿಲ್ಲ ಎಂದು ನೋವು ತೋಡಿಕೊಂಡರು.ಆನೆ ದಾಳಿಯಿಂದ ಸಾವು ನೋವಾದಾಗ ಮಾತ್ರ ಸಂತೈಸಲು ಬರುತ್ತಾರೆ. ಆನೆ ದಾಳಿಗೆ ಬೆಳೆ ಹಾನಿ ಆದಾಗ ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆಗಾರರ ಸಂಕಷ್ಟ ಪರಿಶೀಲನೆ ಮಾಡಿಲ್ಲ. ಇನ್ನು ಅರಣ್ಯ ಸಚಿವರು ಹಾಗೂ ಅವರ ಇಲಾಖೆ ಸಿಬ್ಬಂದಿ ನಿದ್ರೆಗೆ ಶರಣಾಗಿದ್ದು ನಮ್ಮ ಸಮಸ್ಯೆಗಳನ್ನು ಆಲಿಸುವುದಿಲ್ಲ. ಇಂತಹ ಲಜ್ಜೆಗೆಟ್ಟ ಸಚಿವರು ಆ ಸ್ಥಾನದಲ್ಲಿ ಕೂರುವ ಯೋಗ್ಯತೆ ಇಲ್ಲ. ಕೂಡಲೇ ನಮಗೆ ಆನೆಗಳನ್ನು ಸ್ಥಳಾಂತರ ಮಾಡಬೇಕು ಮತ್ತು ನಿಮ್ಮಬಿಡಿಗಾಸು ಭಿಕ್ಷೆಯ ಪರಿಹಾರ ನಮಗೆ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಚೇತನ್ ಹಾಗೂ ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿ ಅನುಘಟ್ಟ ಗ್ರಾಪಂ ವ್ಯಾಪ್ತಿಯ ಕಣಗುಪ್ಪೆ ಬೆಳ್ಳಾವರ, ಹಿರೆ ಹಸಡೆ , ಚಿಕ್ಕ ಹಸಡೆ ಡೋಲನಮನೆ, ನೇರಳಕಟ್ಟೆ ಸೇರಿದಂತೆ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಇಲ್ಲಿನ ಯಾವುದೇ ಸಮಸ್ಯೆಗಳನ್ನು ಆಲಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಅಧಿಕಾರಿಗಳು ಕೇವಲ ರೈತರ, ಬೆಳೆಗಾರರ ಕಣ್ಣೊರೆಸಲಯಲು ನಾಟಕದ ಸಭೆಗಳನ್ನು ಕರೆಯುತ್ತಿದ್ದಾರೆ. ಇನ್ನು ಜಿಲ್ಲಾಧಿಕಾರಿ ಗಳು ಈ ಸಮಸ್ಯೆಗೆ ಪರಿಹಾರ ನೀಡಲು ಸಭೆ ಕರೆದು ಮೂರು ತಿಂಗಳಾದರು ಕೇವಲ ಅದು ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದು ಅದು ಇಲ್ಲಿವರೆಗೂ ಕಾರ್ಯರೂಪಕ್ಕೆ ಬರಲಿಲ್ಲ. ನಾವು ಎಷ್ಟೇ ಬಾರಿ ಪ್ರತಿಭಟನೆ ಮಾಡಿ ಮಾಹಿತಿಯನ್ನು ಜನಪ್ರತಿನಿಧಿಗಳಿಗೆ ತಿಳಿಸಿದರೂ ಇದರ ಬಗ್ಗೆ ಕಿವಿ ಕೇಳದಂತಹ ಸಚಿವರಾಗಿದ್ದಾರೆ. ಈಗಾಗಲೇ ಹೆತ್ತೂರು ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಸುಮಾರು ಮೂರು ಸಾವಿರ ಎಕರೆಯಷ್ಟು ಅರಣ್ಯ ಜಾಗವನ್ನು ನಾವೇ ಗುರ್ತಿಸಿದ್ದರೂ ಅಲ್ಲಿಗೆ ಆನೆಗಳನ್ನು ಅಟ್ಟಲು ಸಂಪೂರ್ಣ ವಿಫಲರಾಗಿದ್ದು ಇದರ ಜೊತೆಯಲ್ಲಿ ನಿಮ್ಮ ಕೈಯಲ್ಲಿ ಕಾಡಾನೆಗಳನ್ನು ಓಡಿಸಲು ಆಗದಿದ್ದರೆ ನಮಗೆ ಒಂದು ತಿಂಗಳ ಕಾಲಾವಕಾಶ ನೀಡಿದರೆ ಬೆಳೆಗಾರರೆ ಕಾಡಾನೆಗಳನ್ನು ಅಟ್ಟುತ್ತೇವೆ ಎಂದು ಕಿಡಿಕಾರಿದರು.ಇಂದು ಕೇವಲ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದೆ ಬಿಕ್ಕೋಡು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ರೀತಿಯಲ್ಲಿ ಪ್ರತಿಭಟಿಸುವುದರ ಜೊತೆಗೆ ಬೇಲೂರು ಬಂದ್ ಮಾಡಲು ಕರೆ ನೀಡಲಾಗುತ್ತದೆ. ಈ ವಿಚಾರವಾಗಿ ಸದನದಲ್ಲಿ ಶಾಸಕರು ಎಷ್ಟೇ ಬಾರಿ ಮನವಿ ಮಾಡಿದರೂ ಸಚಿವರಿಗೆ ಹಾಗೂ ಸರ್ಕಾರಕ್ಕೆ ರೈತರ ಬೆಳೆಗಾರರ ಕಷ್ಟ ಅರಿಯಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅರೇಹಳ್ಳಿ ಹೋಬಳಿ ಕಾಫಿ ಬೆಳೆಗಾರ ಸಂಘದ ಅಧ್ಯಕ್ಷ ಶಾರೀಬ್ ಫರ್ಹಾನ್ ಮಾತನಾಡಿ ೫ ವರ್ಷಗಳ ಹಿಂದೆ ಈ ಭಾಗದಲ್ಲಿ ಕೇವಲ 2 ಆನೆಗಳಿದ್ದವು. ಈಗ ಹೆಚ್ಚಾಗಿವೆ. ಕೇವಲ ಕಾಟಾಚಾರದ ನಿಮ್ಮ ಪರಿಹಾರ ಬೇಕಿಲ್ಲ.ಇಲ್ಲಿಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಡಾನೆ ಎಲ್ಲಿದೆ ಎಂಬ ಮಾಹಿತಿಯೆ ಗೊತ್ತಿಲ್ಲ, ಅವರಿಗೆ ಅದನ್ನೂ ಬೆಳೆಗಾರರೇ ತಿಳಿಸಬೇಕು ಎಂದರು. ಪ್ರತಿಭಟನೆ ಉದ್ದೇಶಿಸಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೀರಭದ್ರಶೆಟ್ಟಿ, ಮಾಜಿ ಅದ್ಯಕ್ಷ ಬಸವರಾಜ್ ಮಾತನಾಡಿದರು. ಸಂದರ್ಭದಲ್ಲಿ ಸತೀಶ್, ಚಂದನ್, ವೆಂಕಟೇಶ್ ದೇವರಾಜು, ಮಂಜುನಾಥ್, ಶಿವಶಂಕರಪ್ಪ, ಜನಕ ಗ್ರಾಪಂ ಅದ್ಯಕ್ಷೆ ಲಲಿತಾ, ಇಂದಿರಾ, ಲೊಹಿತ್, ವಿನಯ್ ರಾಮಶೆಟ್ಟಿ ತೇಜಸ್, ವೆಂಕಟೇಶ್, ರವಿ ಸೇರಿದಂತೆ ಇತರರು ಹಾಜರಿದ್ದರು.