ಕೆಲಸಕ್ಕಾಗಿ ಅಭಿವೃದ್ಧಿ ಅಧಿಕಾರಿ ಹಣಕ್ಕೆ ಬೇಡಿಕೆ: ಆರೋಪ

---

ಕನ್ನಡಪ್ರಭ ವಾರ್ತೆ ಹನೂರು

ಗ್ರಾಮ ಪಂಚಾಯ್ತಿ ವೈಫಲ್ಯದಿಂದಾಗಿ ಗ್ರಾಮಸ್ಥರೇ ಕೂಲಿ ಕಾರ್ಮಿಕರನ್ನು ಕರೆಸಿ ಮುಂದೆ ನಿಂತು ಚರಂಡಿ ಸ್ವಚ್ಛತೆಗೆ ಮುಂದಾಗಿರುವ ಘಟನೆಯು ಹನೂರು ತಾಲೂಕಿನ ಮಂಗಲ ಗ್ರಾಮ ಪಂಚಾಯ್ತಿಯ ಅನಾಪುರ ಗ್ರಾಮದಲ್ಲಿ ನಡೆದಿದೆ.

ಇಲ್ಲಿ ಹಲವಾರು ತಿಂಗಳುಗಳಿಂದ ಚರಂಡಿಗಳಲ್ಲಿ ರಾಡಿ ತುಂಬಿದ್ದು, ಸ್ವಚ್ಛತೆಗೊಳಿಸುವಂತೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದರೂ, ಕ್ರಮ ಕೈಗೊಳ್ಳದ ಬಗ್ಗೆ ಜನರು ಆಕ್ರೋಶಗೊಂಡಿದ್ದಾರೆ. ಪರಿಣಾಮ ಸೊಳ್ಳೇ, ರೋಗ ರುಜಿನೆಯಿಂದ ಮುಕ್ತಿ ಪಡೆದುಕೊಳ್ಳಲು ತಾವೇ ಮುಂದಡಿಯಿಟ್ಟಿದ್ದಾರೆ.


ಕಾರ್ಮಿಕರಿಗೆ ಕೂಲಿ ಕೊಡಿ:

ಗ್ರಾಮದಲ್ಲಿ ಸ್ವಚ್ಛತೆಗೆ ಕರೆಸಿದ ಕಾರ್ಮಿಕರಿಗೆ ಗ್ರಾಮಸ್ಥರೇ ಕೂಲಿ ಹಣ ಕೊಟ್ಟಿದ್ದು, ಈ ಮೊತ್ತವನ್ನು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಭರಿಸಬೇಕೆಂದು ಜನರು ಪಟ್ಟು ಹಿಡಿದಿದ್ದು, ಆದರೆ ಅಧಿಕಾರಿ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.

ಸಮಸ್ಯೆ ನೂರೆಂಟು:

ಚರಂಡಿ ಸಮಸ್ಯೆ ಮಾತ್ರವಲ್ಲದೇ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಣ ಕೊಡದೆ ಯಾವುದೇ ಕೆಲಸವಾಗುವುದಿಲ್ಲ. ಇ-ಸ್ವತ್ತು ಸೇರಿದಂತೆ ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಧಿಕಾರಿಗಳು ದುಡ್ಡಿಗೆ ಬೇಡಿಕೆ ಇಡುತ್ತಾರೆ. ಹಿರಿಯ ಅಧಿಕಾರಿಗಳು ಕ್ರಮ ವಹಿಸದಿದ್ದರೆ, ಸಂಘ-ಸಂಸ್ಥೆಗಳ ಜೊತೆ ಸೇರಿ ಮಂಗಲ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮದ ಮುಖಂಡರಾದ ಅನಾಪುರ ಉಮೇಶ್, ಬಸವಣ್ಣ, ಚಂದ್ರಶೇಖರ್‌, ರವಿ ಮತ್ತು ದಾನಪ್ಪ ಸೇರಿ ಇನ್ನಿತರ ಮುಖಂಡರುಗಳು ತಿಳಿಸಿದ್ದಾರೆ.ಗ್ರಾಪಂ ಬದಲಾವಣೆಗೆ ಕೂಗು

ಈ ಹಿಂದೆ ಅನಾಪುರ ಗ್ರಾಮವು ಕಣ್ಣೂರು ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿದ್ದಾಗ, ಅಭಿವೃದ್ಧಿ ಕೆಲಸಗಳು ಸರಾಗವಾಗಿ ಆಗುತ್ತಿದ್ದವು. ಆದರೆ ಮಂಗಲ ಪಂಚಾಯ್ತಿ ಅಡಿ ಬಂದಾಗ ಕೆಲಸಗಳು ನಶ್ವರವಾಗಿವೆ. ಹೀಗಾಗಿ ಮತ್ತೆ ಅನಾಪುರವನ್ನು ಕಣ್ಣೂರು ವ್ಯಾಪ್ತಿಗೆ ಸೇರಿಸುವಂತೆ ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

---

ಅನಾಪುರದಲ್ಲಿ ಚರಂಡಿ ಸ್ವಚ್ಛಗೊಳಿಸುತ್ತಿರುವ ಕಾರ್ಮಿಕರು