ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 150 ಎ ಕಾಮಗಾರಿ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಕೆ ಬಿ ಕ್ರಾಸ್ ರಸ್ತೆಯಲ್ಲಿ ಬರುವ ತಾವರೇಕೆರೆ – ಚೌಡೇನಹಳ್ಳಿ - ಲೋಕಮ್ಮನಹಳ್ಳಿ – ಹರಿದಾಸನಹಳ್ಳಿ – ಕುಂದೂರು ಸೇರಿದಂತೆ ರಸ್ತೆಯ ಅಕ್ಕಪಕ್ಕದಲ್ಲಿ ಬರುವ ಗ್ರಾಮಾಂತರ ಪ್ರದೇಶಗಳಲ್ಲಿ ಮೊದಲು ಸರ್ವೀಸ್ ರಸ್ತೆಗಳನ್ನು ನಿರ್ಮಿಸಲು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ದೊಡ್ಡಾಘಟ್ಟ ಚಂದ್ರೇಶ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಚಂದ್ರೇಶ್ ನೇತೃತ್ವದಲ್ಲಿ ಹರಿದಾಸನಹಳ್ಳಿಯ ದೇವಾಲಯದಲ್ಲಿ ಪಕ್ಷಾತೀತವಾಗಿ ಸಭೆ ಸೇರಿದ್ದ ನೂರಾರು ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿರುವ ಮತ್ತು ಕಾಮಗಾರಿಯ ವೇಳೆ ಆಗುತ್ತಿರುವ ನಿರ್ಲಕ್ಷ್ಯತನವನ್ನು ಖಂಡಿಸಿದರು. ಕಾಮಗಾರಿ ವೇಳೆ ಸಾರ್ವಜನಿಕರಿಗೆ ಮುಂಜಾಗ್ರತಾ ಫಲಕ ಹಾಕದಿರುವ ಕಾರಣ ಹಲವಾರು ಅಪಘಾತಗಳು ಆಗುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು. ಈಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡದಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ದೊಡ್ಡಾಘಟ್ಟ ಚಂದ್ರೇಶ್, ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೆಂಪೇಗೌಡ, ತಾವರೇಕೆರೆ ಟಿ.ಎಸ್.ಬೋರೇಗೌಡ, ಲೋಕಮ್ಮನಹಳ್ಳಿ ಕಾಂತರಾಜು, ಬಾಣಸಂದ್ರ ಪ್ರಕಾಶ್ ಮೊದಲಾದವರು ಆಕ್ಷೇಪ ವ್ಯಕ್ತಪಡಿಸಿದರು.
ಸಭೆಗೆ ಆಗಮಿಸಿದ್ದ ರಾಷ್ಟ್ರೀಯ ಹೆದ್ದಾರಿ 150 ಎ ಯ ಸಹಾಯಕ ಇಂಜಿನಿಯರ್ ಚೇತನ್ ಮಾತನಾಡಿ ರಸ್ತೆಯ ವಿನ್ಯಾಸದ ಕುರಿತು ವಿವರಿಸಿದರು.ಜೊತೆಗೆ ಸರ್ವೀಸ್ ರಸ್ತೆಯ ನಿರ್ಮಾಣಕ್ಕೆ ಕೆಲವು ತಾಂತ್ರಿಕ ಅಂಶಗಳು ತೊಂದರೆಯಾಗಿದ್ದು, ಅವುಗಳನ್ನು ಶೀಘ್ರದಲ್ಲೇ ಪರಿಹರಿಸಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.ಈ ರಸ್ತೆ ಪಟ್ಟಣದೊಳಗಿನಿಂದಲೇ ಹಾದು ಹೋಗಲಿದೆ ಎಂಬ ಗುಲ್ಲು ಎಲ್ಲೆಡೆ ಹರಿದಾಡುತ್ತಿದೆ ಆದರೆ ಇದು ಸದಸ್ಯಕ್ಕೆ ಮಾಯಸಂದ್ರ ರಸ್ತೆಯಲ್ಲಿ ಬರುವ ಅರಳಿಕೆರೆ ಪಾಳ್ಯದಿಂದ ನೇರವಾಗಿ ಮುನಿಯೂರು ಗೇಟ್ ವರೆಗೆ ರಸ್ತೆ ನಿರ್ಮಾಣ ಮಾಡಲಾಗುವುದು. ಈಗ ಹೊಸದಾಗಿ ರಸ್ತೆ ನಿರ್ಮಾಣ ಮಾಡುತ್ತಿರುವ ಪ್ರದೇಶದಲ್ಲಿ ಎರಡೂ ಬದಿ 45 ಮೀಟರ್ ನಷ್ಟು ರಸ್ತೆಯನ್ನು ಬಳಸಿಕೊಳ್ಳಲಾಗುವುದು ಮತ್ತು ಆ ಭೂಮಿಯ ಮಾಲೀಕರಿಗೆ ಅದರ ಪರಿಹಾರ ಮೊತ್ತವನ್ನೂ ಸಹ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ವೇಳೆ ಮುಖಂಡರಾದ ದೊಡ್ಡಾಘಟ್ಟ ಚಂದ್ರೇಶ್, ಲೋಕಮ್ಮನಹಳ್ಳಿ ಕಾಂತರಾಜು, ತಾವರೇಕೆರೆ ಟಿ.ಆರ್.ಕೆಂಪೇಗೌಡ, ಮಂಜಣ್ಣ, ಬೋರೇಗೌಡ, ಬಾಣಸಂದ್ರ ಪ್ರಕಾಶ್, ಆನಂದ್ ಮರಿಯಾ, ಕುಣಿಕೇನಹಳ್ಳಿ ಸ್ವಾಮಿ, ಚಂದ್ರಶೇಖರ್, ಆನೇಕೆರೆ ರಾಜಶೇಖರ್, ಈಶ್ವರಪ್ಪ, ತೊರೆಮಾವಿನಹಳ್ಳಿ ಶಿವಕುಮಾರ್, ಧನಂಜಯ, ಪಟೇಲ್ ಮಲ್ಲಿಕಣ್ಣ, ಹರಿದಾಸನಹಳ್ಳಿ ಶಶಿ, ಕುಮಾರ್, ಮೊದಲಾದವರು ಇದ್ದರು. ಚೌಡೇನಹಳ್ಳಿ ಮತ್ತು ಹರಿದಾಸನಹಳ್ಳಿ ಗ್ರಾಮಸ್ಥರು ಇದ್ದರು.;Resize=(128,128))
;Resize=(128,128))