ನಕಲಿ ಪಹಣಿ, ಕಾರೇಹಳ್ಳಿ ಕಾವಲು ಸಮಸ್ಯೆ ಬಗೆಹರಿಸಲು ಗ್ರಾಮಸ್ಥರ ಆಗ್ರಹ

| Published : Oct 19 2025, 01:00 AM IST

ನಕಲಿ ಪಹಣಿ, ಕಾರೇಹಳ್ಳಿ ಕಾವಲು ಸಮಸ್ಯೆ ಬಗೆಹರಿಸಲು ಗ್ರಾಮಸ್ಥರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ನಕಲಿ ಪಹಣಿ, ವೃದ್ಧಾಪ್ಯ ವೇತನ, ಗ್ರಾಮಕ್ಕೆ ಪಶು ಆಸ್ಪತ್ರೆ, ಎಂವಿಎಸ್.ಎಸ್ ಘಟಕ ಸ್ಥಾಪನೆ, ಶಾಲಾ ಕೊಠಡಿ ದುರಸ್ತಿ, ಕಾರೇಹಳ್ಳಿ ಕಾವಲು ಸಾಗುವಳಿ ಚೀಟಿ ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕೆಂದು ಜಿಗಣೆಹಳ್ಳಿ ಗ್ರಾಮಸ್ಥರು ಶಾಸಕ ಕೆ.ಎಸ್.ಆನಂದ್ ಗೆ ಆಗ್ರಹಿಸಿದರು.

- ತಾಲೂಕು ಆಡಳಿತದಿಂದ ಆಯೋಜಿಸಿದ್ದ ಜನಸ್ಪಂದನದಲ್ಲಿ ಶಾಸಕ ಕೆ.ಎಸ್.ಆನಂದ್‌ಗೆ ಮನವಿ

ಕನ್ನಡಪ್ರಭ ವಾರ್ತೆ ಕಡೂರು

ನಕಲಿ ಪಹಣಿ, ವೃದ್ಧಾಪ್ಯ ವೇತನ, ಗ್ರಾಮಕ್ಕೆ ಪಶು ಆಸ್ಪತ್ರೆ, ಎಂವಿಎಸ್.ಎಸ್ ಘಟಕ ಸ್ಥಾಪನೆ, ಶಾಲಾ ಕೊಠಡಿ ದುರಸ್ತಿ, ಕಾರೇಹಳ್ಳಿ ಕಾವಲು ಸಾಗುವಳಿ ಚೀಟಿ ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕೆಂದು ಜಿಗಣೆಹಳ್ಳಿ ಗ್ರಾಮಸ್ಥರು ಶಾಸಕ ಕೆ.ಎಸ್.ಆನಂದ್ ಗೆ ಆಗ್ರಹಿಸಿದರು.

ತಾಲೂಕಿನ ಜಿಗಣೇಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಾಸಕ ಕೆ.ಎಸ್.ಆನಂದ್‌ ಮಾತನಾಡಿ, ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಾರೇಹಳ್ಳಿ ಕಾವಲು ಸಮಸ್ಯೆಗೆ ತಮ್ಮ ಈ ಅವಧಿಯಲ್ಲಿಯೇ ತಾರ್ಕಿಕ ಅಂತ್ಯಹಾಡಲು ಪ್ರಯತ್ನಿಸುವ ಭರವಸೆ ನೀಡಿದರು.

ಕಾರೇಹಳ್ಳಿ ಕಾವಲಿನಲ್ಲಿ ಇರುವ 1811 ಎಕರೆ ಭೂಮಿಯಲ್ಲಿ 1396 ಖಾತೆ ಇದೆ. ಇಲ್ಲಿರುವ 255 ಎಕರೆ ಡೀಮ್ಡ್ ಅರಣ್ಯದ ಬಾಕಿ ಭೂಮಿಯಲ್ಲಿ ಖಾತೆದಾರರಿಗೆ 2 ಗುಂಟೆಯಿಂದ 5 ಎಕರೆವರೆಗೆ ಭೂಮಿ ಮಂಜೂರಾಗಿದೆ. ಮೂಲ ಮಂಜೂರಾತಿ ದಾಖಲೆಗಳು ತಾಲೂಕು ಕಚೇರಿಯಲ್ಲಿಯೂ ಇಲ್ಲದ ಕಾರಣ ಸಾಗುವಳಿ ಚೀಟಿ ನೀಡಿಲ್ಲ. ಜನರ ಬಳಿಯೂ ಇಲ್ಲ. ಈ ವಿಷಯವಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡರ ಜತೆ ಮಾತನಾಡಿ ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ, ಅರಣ್ಯ ಭೂಮಿ ಹೊರತು ಪಡಿಸಿ ಉಳಿದ ಭೂಮಿಗೆ ಸಾಗುವಳಿ ಚೀಟಿ ನೀಡಲು ಕ್ರಮ ವಹಿಸಲಾಗುವುದು ಎಂದರು.

ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಮಾಹಿತಿ ನೀಡಿ, 200 ಮೂಲ ಮಂಜೂರಾತಿ ಕಡತಗಳು ಸಿಕ್ಕಿದ್ದು 300 ದಾಖಲೆಗಳನ್ನು ಫೀಡ್ ಮಾಡಲಾಗಿದೆ. 80 ಜನರ ದಾಖಲೆಗಳನ್ನು ಅಪ್ಲೋಡ್ ಮಾಡಲಾಗಿದೆ. ಸಾಗುವಳಿ ಚೀಟಿ, ಚಾಲ್ತಿ ಪಹಣಿ ಹಾಗೂ ನಡಾವಳಿ ದಾಖಲೆಗಳು ಇದ್ದರೆ ಸಮಂಜಸವಾಗುತ್ತದೆ. ಪೈಲಟ್ ಯೋಜನೆಗೆ ಇಂದು ಸಂಜೆಯೇ ಹೆಚ್ಚುವರಿ ಗ್ರಾಮ ಆಡಳಿತಾ ಧಿಕಾರಿ ಹಾಗೂ ಸರ್ವೇಯರ್‌ ಗಳನ್ನು ನೇಮಕ ಮಾಡಲು ಆದೇಶ ನೀಡುವುದಾಗಿ ತಿಳಿಸಿದರು.

ಜಿಗಣೇಹಳ್ಳಿ ಗ್ರಾಮದಲ್ಲಿ ಸಾಕಷ್ಟು ಜನ ಪಶುಸಂಗೋಪನೆ ಅವಲಂಬಿಸಿದ್ದಾರೆ. ಇಲ್ಲಿಗೆ ಪಶು ಆಸ್ಪತ್ರೆ ಬೇಕು, ಎಂವಿಎಸ್.ಎಸ್ ಘಟಕ ತುರ್ತು ಅಗತ್ಯವಿದೆ. ಶಾಸಕರು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಆನಂದ್, ಕಳೆದ 17-18 ವರ್ಷಗಳಿಂದ ತಾಲೂಕಿಗೆ ಮಂಜೂರಾಗದ ಕಳೆದ ವರ್ಷ ಒಂದು ಪಶು ಆಸ್ಪತ್ರೆ ಮಂಜೂರಾಗಿತ್ತು. ಕಾಮನಕೆರೆಯಲ್ಲಿ ತುರ್ತು ಅಗತ್ಯ ಇದ್ದುದರಿಂದ ಅಲ್ಲಿಗೆ ಕೊಡಲಾಗಿದೆ. ವಾರದಲ್ಲಿ 1 ಅಥವಾ 2 ದಿನ ವೈದ್ಯರು ಭೇಟಿ ನೀಡಲು ಕ್ರಮ ವಹಿಸಲು ಸಹಾಯಕ ನಿರ್ದೇಶಕರಿಗೆ ಸೂಚಿಸಿದ್ದರು.  ವೋಲ್ಟೇಜ್ ಸಮಸ್ಯೆ ಗಮನದಲ್ಲಿದೆ. ತಾಲೂಕಿನಲ್ಲಿ ಚೌಳಹಿರಿಯೂರು, ಕೆ.ಬಸವನಹಳ್ಳಿಗಳಲ್ಲಿ ಎಂವಿಎಸ್.ಎಸ್ ಘಟಕ ಸ್ಥಾಪನೆಗೆ ಟೆಂಡರ್ ಆಗಿದೆ, ಯಳಗೊಂಡನಹಳ್ಳಿಯಲ್ಲಿ ಟೆಂಡರ್ ಆಗಬೇಕು. ಜಿಗಣೇಹಳ್ಳಿಯಲ್ಲಿ 4 ಎಕರೆ ಭೂಮಿ ಮಂಜೂರಾಗಿದ್ದು ಮೆಸ್ಕಾಂನವರು ₹14ಲಕ್ಷ ಹಣ ಪಾವತಿಸಿದ್ದು ಶೀಘ್ರದಲ್ಲಿ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸುವುದಾಗಿ ತಿಳಿಸಿದರು.

ಗ್ರಾಮದಲ್ಲಿ ಬಿಸಿಎಂ ಹಾಸ್ಟೆಲ್ ಕೋರಿದ್ದೀರಿ ಆದರೆ ಸರ್ಕಾರ ಸದ್ಯ ಗ್ರಾಮೀಣ ಪ್ರದೇಶದಲ್ಲಿ ಮೊರಾರ್ಜಿ ವಸತಿ ಶಾಲೆಗಳ ಸ್ಥಾಪನೆಗೆ ಒತ್ತು ನೀಡಿ, ಜಿಲ್ಲಾ ಕೇಂದ್ರಗಳಲ್ಲಿ ವಸತಿ ನಿಲಯ ಸ್ಥಾಪನೆಗೆ ಮುಂದಾಗಿದೆ ಎಂದರು.

ಗ್ರಾಮಸ್ಥ ನವೀನ್ ನಾವು ಕಳೆದ ೩೦ ವರ್ಷಗಳಿಂದ ಸ್ವಾಧೀನದಲ್ಲಿರುವ ಭೂಮಿಗೆ ಬೇರೆಯವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಹಣಿ ಮತ್ತು ಎಂಆರ್ ಗಳನ್ನು ಪಡೆದಿರುತ್ತಾರೆ. ನಮಗೆ ಭೂಮಿಗೆ ಕಾಲಿಡಲು ಸಾಧ್ಯವಾಗದಂತೆ ಆದೇಶಕೋರಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ನಾವು ಅಲ್ಲಿ ಸ್ವಾಧೀನದಲ್ಲಿರುವ ವಿಷಯ ಸುತ್ತಮುತ್ತಲಿನ ರೈತಾಪಿ ವರ್ಗಕ್ಕೆ ತಿಳಿದಿದೆ. ತಹಸೀಲ್ದಾರ್ ಸರ್ವೇಯರ್ ಜೊತೆ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರಿಂದ ಸಾಕ್ಷಿ ಪಡೆದು ನಮಗೆ ನ್ಯಾಯ ಒದಗಿಸಲು ಮುಂದಾಗಲಿ ನೀವು ವರದಿ ಕೊಟ್ಟರೆ ಎಸಿ ಕಚೇರಿಯಲ್ಲಿ ಹೊಸ ಪ್ರಕರಣ ದಾಖಲಾಗುತ್ತದೆ ಎಂದು ಒತ್ತಾಯಿಸಿದರು.

ನ.17ರಂದು ಭದ್ರಾ ಉಪಕಣಿವೆ 3ನೇ ಹಂತದ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಮಿಪೂಜೆ ನೆರವೇರಿಸಲು ದಿನಾಂಕ ನಿಗದಿಯಾಗಿದೆ. ಸಾಧ್ಯವಿದ್ದರೆ ಉಪ ಮುಖ್ಯಮಂತ್ರಿಯೂ ಭಾಗವಹಿಸುವರು. ನಂತರ ಈ ಭಾಗದ ಕೆರೆ ಕಟ್ಟೆಗಳಿಗೆ ನೀರು ಹರಿಸುವ ಕಾಮಗಾರಿಗೆ ವೇಗ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ತಾಪಂ ಇಒ ಪ್ರವೀಣ್ ಸಿ.ಆರ್., ಗ್ರಾಪಂತಿ ಅಧ್ಯಕ್ಷೆ ಕುಮಾರಮ್ಮ, ಉಪಾಧ್ಯಕ್ಷೆ ದೀಪಿಕಾ ಲೋಕೇಶ್, ಸದಸ್ಯರಾದ ಜಿ. ಬಸವರಾಜು, ಕಾಂತಾಮಣಿ, ಗೀತಮ್ಮ, ಪಿಡಿಒ ಆದಿನಾಥ್ ಬೀಳಗಿ, ಆರ್. ರವಿಕುಮಾರ್, ವಿ. ಎ. ಹನುಮಂತಪ್ಪ, ಗ್ರಾಮಸ್ಥರಾದ ಎಸ್.ಬಿ.ಹನುಮಂತಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲೋಕೇಶ್, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು. 18ಕೆಕೆಡಿಯು2

ಕಡೂರು ತಾಲೂಕು ಜಿಗಣೇಹಳ್ಳಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಆನಂದ್ ಮಾತನಾಡಿದರು. ತಹಸೀಲ್ದಾರ್ ಪೂರ್ಣಿಮಾ, ಇ.ಒ ಪ್ರವೀಣ್, ಗ್ರಾಮಸ್ಥರು, ಅಧಿಕಾರಿಗಳು ಇದ್ದರು.