ಬಮ್ಮಿಗಟ್ಟಿ ಪಿಎಚ್‌ಸಿ ಅವ್ಯವಸ್ಥೆ ಖಂಡಿಸಿ ಆಸ್ಪತ್ರೆ ಬೀಗ ಜಡಿದ ಗ್ರಾಮಸ್ಥರು

| Published : Jan 29 2025, 01:30 AM IST

ಸಾರಾಂಶ

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಸಿಬ್ಬಂದಿ ವಿರುದ್ಧ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ವತಃ ಗ್ರಾಪಂ ಅಧ್ಯಕ್ಷ ಮಂಜುನಾಥ ಧೂಳಿಕೊಪ್ಪ ಅವರು ಆಸ್ಪತ್ರೆಗೆ ಆಗಮಿಸಿ ತಡವಾಗಿ ಆಸ್ಪತ್ರೆಗೆ ಬಂದ ಸಿಬ್ಬಂದಿಗೆ ಘೇರಾವ್ ಹಾಕಿದರು.

ಕಲಘಟಗಿ:

ತಾಲೂಕಿನ ಬಮ್ಮಿಗಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಆಸ್ಪತ್ರೆ ಸಿಬ್ಬಂದಿ ಸಕಾಲಕ್ಕೆ ಆಗಮಿಸುತ್ತಿಲ್ಲ. ಸಿಬ್ಬಂದಿ ಕೊರತೆ ಇದೆ. ಇದ್ದವರು ಚಿಕಿತ್ಸೆ ನೀಡುತ್ತಿಲ್ಲ. ಸಹಜ ಹೆರಿಗೆಯಾಗುವುದಿದ್ದರೂ ಬೇರೆ ಆಸ್ಪತ್ರೆಗೆ ಕಳುಹಿಸಿಕೊಡುತ್ತಾರೆ. ಕಳೆದ ೧೦ ವರ್ಷದಿಂದಲೂ ಇದೇ ಸಮಸ್ಯೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹಲವು ಬಾರಿ ಅವಧಿ ಮೀರಿದ ಔಷಧ ನೀಡಿ ಸಮಸ್ಯೆಗಳಾಗಿವೆ. ಈ ಕುರಿತು ತಾಲೂಕು ವೈದ್ಯಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಸಿಬ್ಬಂದಿ ವಿರುದ್ಧ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ವತಃ ಗ್ರಾಪಂ ಅಧ್ಯಕ್ಷ ಮಂಜುನಾಥ ಧೂಳಿಕೊಪ್ಪ ಅವರು ಆಸ್ಪತ್ರೆಗೆ ಆಗಮಿಸಿ ತಡವಾಗಿ ಆಸ್ಪತ್ರೆಗೆ ಬಂದ ಸಿಬ್ಬಂದಿಗೆ ಘೇರಾವ್ ಹಾಕಿದರು. ಮೇಲಾಧಿಕಾರಿಗಳು ಬರುವವರೆಗೂ ಒಳ ಹೋಗದಂತೆ ತಡೆದರು.

ಗರ್ಭಿಣಿಯರು ಸಕಾಲಕ್ಕೆ ಚಿಕಿತ್ಸೆ ಸಿಗದೆ ನರಳುತ್ತಿದ್ದಾರೆ. ಸಿಬ್ಬಂದಿ ಕೊರತೆ ಹಾಗೂ ಇರುವ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಸುತ್ತ ೨೦ ಗ್ರಾಮಗಳ ಜನತೆ ಬೇರೆ ಆಸ್ಪತ್ರೆ ಅವಲಂಬಿಸುವಂತಾಗಿದೆ. ಫೆ. 15ರೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಆಸ್ಪತ್ರೆಗೆ ಬೀಗ ಜಡಿಯುವ ಜತೆಗೆ ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ವೈದ್ಯಾಧಿಕಾರಿ ರವಿ ಸೋಮಣ್ಣವರ ಗ್ರಾಮಸ್ಥರ ಮನವಿ ಸ್ವೀಕರಿಸಿದರು. ಈ ವೇಳೆ ಗ್ರಾಪಂ ಸದಸ್ಯ ಈಶ್ವರ ಹಾವೇರಿ, ತಾವರಗೇರಿ ಬಿಜೆಪಿ ಮುಖಂಡ ಬಸವರಾಜ ಕಾಮಧೇನು, ಪ್ರಕಾಶ ಕಚ್ಚೂರಿ, ಜಗದೀಶ ಮೆಣಸಿನಕಾಯಿ, ಅಶೋಕ ಖಂಡೂನವರ, ಶ್ರಿಶೈಲ ಮುಕ್ಕಣ್ಣವರ, ಮಂಜುನಾಥ ಕಚ್ಚೂರಿ, ಮಂಜುನಾಥ ಟವಳಿ ಸೇರಿದಂತೆ ಮತ್ತಿತರರು ಇದ್ದರು.