ಬಾಲಕಿ ಮೇಲೆ ಅತ್ಯಾಚಾರ : ಕೇಸ್‌ ಹಾಕಿದ್ದಕ್ಕೆ ದಲಿತರಿಗೆ ಯಾದಗಿರಿಯಲ್ಲಿ ಬಹಿಷ್ಕಾರ!

| Published : Sep 13 2024, 01:33 AM IST / Updated: Sep 13 2024, 08:50 AM IST

ಬಾಲಕಿ ಮೇಲೆ ಅತ್ಯಾಚಾರ : ಕೇಸ್‌ ಹಾಕಿದ್ದಕ್ಕೆ ದಲಿತರಿಗೆ ಯಾದಗಿರಿಯಲ್ಲಿ ಬಹಿಷ್ಕಾರ!
Share this Article
  • FB
  • TW
  • Linkdin
  • Email

ಸಾರಾಂಶ

ಬಾಲಕಿ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಆಕೆಯ ಕುಟುಂಬಸ್ಥರು ಸಂಧಾನಕ್ಕೆ ಬಾರದೆ ಯುವಕನೊಬ್ಬನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿದ್ದರಿಂದ ಕೋಪಗೊಂಡ ಗ್ರಾಮದ ಸವರ್ಣೀಯ ಮುಖಂಡರು ಇಡೀ ಗ್ರಾಮದ ದಲಿತರಿಗೆ ಕಿರಾಣಿ ಸೇರಿ ಮತ್ತಿತರೆ ವಸ್ತು ಮಾರಾಟ ಮಾಡದಂತೆ ಸಾಮಾಜಿಕ ಬಹಿಷ್ಕಾರ  

ಬಸವರಾಜ್‌ ಕಟ್ಟೀಮನಿ

 ಹುಣಸಗಿ(ಯಾದಗಿರಿ ಜಿಲ್ಲೆ) :  ಬಾಲಕಿ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಆಕೆಯ ಕುಟುಂಬಸ್ಥರು ಸಂಧಾನಕ್ಕೆ ಬಾರದೆ ಯುವಕನೊಬ್ಬನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿದ್ದರಿಂದ ಕೋಪಗೊಂಡ ಗ್ರಾಮದ ಸವರ್ಣೀಯ ಮುಖಂಡರು ಇಡೀ ಗ್ರಾಮದ ದಲಿತರಿಗೆ ಕಿರಾಣಿ ಸೇರಿ ಮತ್ತಿತರೆ ವಸ್ತು ಮಾರಾಟ ಮಾಡದಂತೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ ಯಾದಗರಿಯಲ್ಲಿ ಕೇಳಿ ಬಂದಿದೆ.

ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದ ದಲಿತ ಕುಟುಂಬಗಳು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವು. ಗ್ರಾಮದಲ್ಲಿ ದಲಿತರಿಗ್ಯಾರಿಗೂ ಕಿರಾಣಿ ಹಾಗೂ ಮತ್ತಿತರೆ ದೈನಂದಿನ ಬಳಕೆ ವಸ್ತುಗಳನ್ನು ಮಾರಾಟ ಮಾಡದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ ಎಂದು ದೂರಲಾಗಿದೆ. ಉಪ್ಪು ಖರೀದಿಸಲು ಕಿರಾಣಿ ಅಂಗಡಿಯೊಂದಕ್ಕೆ ದಲಿತ ಮಹಿಳೆಯೊಬ್ಬರು ತೆರಳಿದಾಗ ಹಾಗೂ ಶಾಲಾ ಮಕ್ಕಳಿಗೆ ಪೆನ್ನು ಖರೀದಿಸಲು ತೆರಳಿದ್ದ ದಲಿತ ಯುವಕನಿಗೆ ಅಂಗಡಿ ಮಾಲೀಕರು ಬಹಿಷ್ಕಾರದ ವಿಚಾರ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ಇಂಥ ಬಹಿಷ್ಕಾರ ಕುರಿತ ಧ್ವನಿಮುದ್ರಿಕೆ (ಆಡಿಯೋ ರೆಕಾರ್ಡಿಂಗ್) ಇದೀಗ ವೈರಲ್‌ ಆಗಿದ್ದು, ಅದರಲ್ಲಿ ಯಾವುದೇ ತರಹದ ವಸ್ತುಗಳು ನೀಡಬಾರದು ಎಂದು ತಮಗೆ ಗ್ರಾಮದ ಪ್ರಮುಖರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆಂದು ಅಂಗಡಿಯವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಶಾಲೆಗೆ ಹೊರಟಿರುವ ಮಕ್ಕಳಿಗಾದರೂ ಪೆನ್ನು ಪೆನ್ಸಿಲ್‌ ಆದರೂ ನೀಡಿ ಎಂದು ಯುವಕ ಕೇಳಿಕೊಂಡರೂ ಕೊಡಲೊಪ್ಪದ ಅಂಗಡಿ ಮಾಲೀಕರು, ಪೆನ್ನು, ಪುಸಕ್ತವಷ್ಟೇ ಅಲ್ಲ, ನಿಮ್ಮ ಮಂದಿಗೆ (ದಲಿತರು) ಯಾವುದನ್ನೂ ಕೊಡಬಾರದು ಎಂದು ಆಜ್ಞೆಯಾಗಿದೆ ಎಂದು ತಿಳಿಸುತ್ತಾರೆ. ಈ ಸಾಮಾಜಿಕ ಕ್ರೌರ್ಯದಿಂದಾಗಿ ಬೆರಳಣಿಕೆಯಷ್ಟಿರುವ ಬಪ್ಪರಗಾ ಗ್ರಾಮದ ದಲಿತ ವರ್ಗದಲ್ಲಿ ಆತಂಕ ಮನೆ ಮಾಡಿದೆ.

ಹಳೆಯ ವೈಷಮ್ಯ ಕಾರಣ?:

ಗ್ರಾಮದ 15 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿದ್ದ ಸವರ್ಣೀಯ ಯುವಕನೊಬ್ಬ ಆಕೆಯ ಜತೆಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಆಕೆ 5 ತಿಂಗಳ ಗರ್ಭಿಣಿಯಾದಾಗ ಮದುವೆಗೆ ನಿರಾಕರಿಸಿದ್ದ. ಈ ಸಂಬಂಧ ಒಂದು ತಿಂಗಳ ಹಿಂದೆ ನಾರಾಯಣಪುರ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಬಾಲಕಿ ತಾಯಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ತಮ್ಮೆದುರು ಸಂಧಾನಕ್ಕೆ ಬರುವ ಬದಲು ನೇರವಾಗಿ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಕ್ಕೆ ಆಕ್ರೋಶಗೊಂಡ ಸವರ್ಣೀಯ ಮುಖಂಡರು ಈಗ ಈ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆಂದು ಆಕೋಪಿಸಲಾಗಿದೆ.

--

ಎಲ್ಲ ಅಂಗಡಿಗಳಲ್ಲೂ ನಿರ್ಬಂಧ

ದಲಿತರ ಜೊತೆ ವ್ಯವಹಾರ ಮಾಡದಂತೆ ಎಲ್ಲ ಅಂಗಡಿಗಳಲ್ಲಿ ನಿರ್ಬಂಧಿಸಲಾಗಿದೆ. ನಮಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಕಿರಾಣಿಯಷ್ಟೇ ಅಲ್ಲ, ಶಾಲಾ ಮಕ್ಕಳಿಗೆ ಪೆನ್ನು, ನೋಟ್‌ಬುಕ್ ಸೇರಿ ಯಾವುದೇ ಸಾಮಗ್ರಿಗಳನ್ನೂ ದಲಿತರಿಗೆ ಮಾರಾಟ ಮಾಡುತ್ತಿಲ್ಲ.

- ಪರಸಪ್ಪ, ಬಪ್ಪರಗಿ ಗ್ರಾಮಸ್ಥರು

ಏಕೆ ಬಹಿಷ್ಕಾರ?- 15 ವರ್ಷದ ಬಾಲಕಿಯನ್ನು ಮದುವೆಯಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ಸವರ್ಣೀಯ ಯುವಕ

- ಗರ್ಭಿಣಿಯಾದ ಬಾಲಕಿ. ವಿವಾಹವಾಗಲು ಒಪ್ಪದ ಯುವಕ. ಕುಟುಂಬದಿಂದ ದೂರು. ಪೋಕ್ಸೋ ಕೇಸ್‌ ದಾಖಲು

- ಸಂಧಾನಕ್ಕೆ ಬಾರದೆ ಠಾಣೆಗೆ ತೆರಳಿ ದೂರು ನೀಡಿದ್ದಕ್ಕೆ ಸವರ್ಣೀಯರು ಗರಂ. ದಲಿತ ಕುಟುಂಬಗಳಿಗೆ ಬಹಿಷ್ಕಾರ