ಸಾರಾಂಶ
ಕಳೆದ ಮಾ.26ರಂದು ಗ್ರಾಮದ ವಿಶ್ವೇಶ್ವರಯ್ಯ ನಾಲೆ ಸೇತುವೆ ಬಳಿ ವಾಹನ ಡಿಕ್ಕಿಯಾಗಿ ಕೋತಿ ಸ್ಥಳದಲ್ಲೇ ಮೃತಪಟ್ಟಿತ್ತು. ನಂತರ ಗ್ರಾಮಸ್ಥರು ಯುವಕರ ನೆರವಿನಿಂದ ಸತ್ತ ಕೋತಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಜತೆಗೆ 11ನೇ ದಿನಕ್ಕೆ ಹಾಲು ತುಪ್ಪದ ಕಾರ್ಯ ನಡೆಸಲು ನಿರ್ಧರಿಸಿದ್ದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೋತಿಯ (ವಾನರ) ಅಂತ್ಯಕ್ರಿಯೆ ನಡೆಸಿದ್ದ ಹಾರೋಹಳ್ಳಿ ಗ್ರಾಮಸ್ಥರು 11 ದಿನದ ಹಾಲು-ತುಪ್ಪ ಬಿಡುವ ಕಾರ್ಯವನ್ನು ನೆರವೇರಿಸಿದರು.ಕಳೆದ ಮಾ.26ರಂದು ಗ್ರಾಮದ ವಿಶ್ವೇಶ್ವರಯ್ಯ ನಾಲೆ ಸೇತುವೆ ಬಳಿ ವಾಹನ ಡಿಕ್ಕಿಯಾಗಿ ಕೋತಿ ಸ್ಥಳದಲ್ಲೇ ಮೃತಪಟ್ಟಿತ್ತು. ನಂತರ ಗ್ರಾಮಸ್ಥರು ಯುವಕರ ನೆರವಿನಿಂದ ಸತ್ತ ಕೋತಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಜತೆಗೆ 11ನೇ ದಿನಕ್ಕೆ ಹಾಲು ತುಪ್ಪದ ಕಾರ್ಯ ನಡೆಸಲು ನಿರ್ಧರಿಸಿದ್ದರು.
ಗ್ರಾಮದ ಮುಖಂಡರಾದ ಸೂರಪ್ಪರ ಕೃಷ್ಣೇಗೌಡ, ಕುಮಾರಿ, ಜಯರಾಮ ನೇತೃತ್ವದಲ್ಲಿ ಗ್ರಾಮಸ್ಥರು ಶನಿವಾರ ಮೃತ ಕೋತಿಯ 11ನೇ ದಿನದ ಕಾರ್ಯವನ್ನು ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ನೆರವೇರಿಸಿ ಬಾತು, ಮೊಸರನ್ನ, ವಡೆ ಹಾಗೂ ಸಿಹಿ ತಿಂಡಿ ಸೇರಿದಂತೆ ವಿವಿಧ ಬಗೆಯ ತಿಂಡಿ, ತಿನಿಸುಗಳನ್ನು ತಯಾರಿಸಿ ಹೆಡೆ ಇಟ್ಟು ಹಾಲು ತುಪ್ಪ ಬಿಟ್ಟರು.ಬಳಿಕ ನೆರೆದಿದ್ದ 300ಕ್ಕೂ ಹೆಚ್ಚು ಜನರಿಗೆ ಹಾಲುತುಪ್ಪದ ಕಾರ್ಯಕ್ರಮದ ಪ್ರಸಾದವನ್ನು ಉಣಬಡಿಸಲಾಯಿತು. ಹಾರೋಹಳ್ಳಿ ಗ್ರಾಮದ ಗ್ರಾಮಸ್ಥರು ಹಾಗೂ ಯುವಕರು, ಮಹಿಳೆಯರು ಮತ್ತು ಮಕ್ಕಳು ಪ್ರಸಾದ ಸ್ವೀಕರಿಸಿ ದೇವರ ಸ್ವರೂಪಿಯಾದ ಕೋತಿತಿಮ್ಮನ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು.